ಲಕ್ಷ್ಮೀವಿಲಾಸ್ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧ; 25,000 ರು.ಗಿಂತ ಹೆಚ್ಚು ಡ್ರಾ ಆಗಲ್ಲ
ನವೆಂಬರ್ 17ರ ಸಂಜೆ 6 ಗಂಟೆಯಿಂದ ಡಿಸೆಂಬರ್ 16ರ ವರೆಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಗ್ರಾಹಕರು 25,000 ರುಪಾಯಿಗಿಂತ ಹೆಚ್ಚು ವಿಥ್ ಡ್ರಾ ಮಾಡದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಂಗಳವಾರ ನಿರ್ಬಂಧ ವಿಧಿಸಲಾಗಿದೆ. ಲಕ್ಷ್ಮೀ ವಿಲಾಸ್ ಬ್ಯಾಂಕ್ ಬ್ಯಾಡ್ ಲೋನ್ ಹೆಚ್ಚಾಗುತ್ತಿದೆ ಹಾಗೂ ನಷ್ಟವು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
ಲಕ್ಷ್ಮೀ ವಿಲಾಸ್ ಬ್ಯಾಂಕ್ ಆರ್ಥಿಕ ಸ್ಥಿತಿಯು ನಿರಂತರವಾಗಿ ಕುಸಿಯುತ್ತಾ ಸಾಗಿತ್ತು. ಕಳೆದ ಮೂರು ವರ್ಷಗಳಿಂದ ಸತತವಾಗಿ ನಷ್ಟ ಆಗುತ್ತಿತ್ತು. ಅದರ ನಿವ್ವಳ ಮೌಲ್ಯ ಕೊಚ್ಚಿ ಹೋಗುತ್ತಿದೆ. ಯಾವುದೇ ಸರಿಯಾದ ವ್ಯೂಹಾತ್ಮಕ ಯೋಜನೆ ಇಲ್ಲದೆ, ಎನ್ ಪಿಎ ಹೆಚ್ಚಾಗಿ ನಷ್ಟ ಮುಂದುವರಿದಿದೆ. ಬ್ಯಾಂಕ್ ನಲ್ಲೂ ಸತತವಾಗಿ ವಿಥ್ ಡ್ರಾ ಮುಂದುವರಿದಿದೆ ಮತ್ತು ನಗದು ಕಡಿಮೆ ಆಗಿದೆ. ಜತೆಗೆ ಗಂಭೀರವಾದ ಆಡಳಿತಾತ್ಮಕ ಸಮಸ್ಯೆಗಳಿದ್ದವು. ಅದರಿಂದಾಗಿ ಬ್ಯಾಂಕ್ ಫಲಿತಾಂಶ ಇಳಿಮುಖ ಆಗುತ್ತಾ ಬಂತು. ಬ್ಯಾಂಕ್ ಅನ್ನು ಈಗ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಅಡಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಿಂದ ಇಡಲಾಗಿತ್ತು ಎಂದು ಆರ್ ಬಿಐ ತಿಳಿಸಿದೆ.
ಕೇಂದ್ರ ಬಜೆಟ್ನಲ್ಲಿ ಬ್ಯಾಂಕ್ ಠೇವಣಿ ಪರಿಹಾರ 1 ಲಕ್ಷದಿಂದ 5 ಲಕ್ಷ ರುಪಾಯಿ ಏರಿಕೆ ಹಿಂದಿನ ಕಾರಣಗಳು
ಈ ಮೇಲ್ಕಂಡ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ವಾಸಾರ್ಹ ಪುನಶ್ಚೇತನ ಯೋಜನೆ ಇಲ್ಲದಿರುವುದರಿಂದ ಹೂಡಿಕೆದಾರರ ಹಿತ ರಕ್ಷಣೆಗಾಗಿ ಹಾಗೂ ಬ್ಯಾಂಕ್ ನ ಆರ್ಥಿಕ ಹಿತಾಸಕ್ತಿ ಮತ್ತು ಬ್ಯಾಂಕಿಂಗ್ ಸ್ಥಿರತೆಗಾಗಿ ಬೇರೆ ಪರ್ಯಾಯ ಇಲ್ಲ. ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949ರ ಸೆಕ್ಷನ್ 45ರ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಲಾಗಿದೆ.
ಆರ್ ಬಿಐನಿಂದ ಲಕ್ಷ್ಮೀವಿಲಾಸ್ ಬ್ಯಾಂಕ್ ಮಂಡಳಿಯನ್ನು ಸೂಪರ್ ಸೀಡ್ ಮಾಡಲಾಗಿದೆ. ಲಕ್ಷ್ಮೀವಿಲಾಸ್ ಬ್ಯಾಂಕ್ ಅನ್ನು ಸಿಂಗಾಪೂರ ಡಿಬಿಎಸ್ ಬ್ಯಾಂಕ್ ಅಂಗಸಂಸ್ಥೆಯಾದ ಡಿಬಿಎಸ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೀಘ್ರವೇ ವಿಲೀನ ಮಾಡುವುದಾಗಿ ಆರ್ ಬಿಐ ಘೋಷಣೆ ಮಾಡಿದೆ.