ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಭೂಮಿ ಮತ್ತು ಫ್ಲಾಟ್ ಅನ್ನು ಖರೀದಿ ಮಾಡುವುದೆಂದರೆ ನಮ್ಮ ಕೈಸುಡುವುದು ಖಂಡಿತ. ಬೆಂಗಳೂರಿನಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಾ ಸಾಗುತ್ತಿರುವಂತೆ ಆಸ್ತಿ ಮೌಲ್ಯವು ಕೂಡಾ ಏರಿಕೆಯಾಗುತ್ತಿದೆ.
ಹೌದು, ಅಕ್ಟೋಬರ್ 1 ರಿಂದ ಬೆಂಗಳೂರಿನ ಭೂಮಿ ಹಾಗೂ ಫ್ಲಾಟ್‌ಗಳ ಮೌಲ್ಯದಲ್ಲಿ ಭಾರೀ ಪ್ರಮಾಣದಲ್ಲಿ ಜಿಗಿತ ಕಂಡುಬಂದಿದೆ. ಇನ್ನು ಬೆಂಗಳೂರು ಮಾತ್ರವಲ್ಲ ಮಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿಯಲ್ಲಿಯೂ ಆಸ್ತಿ ಬೆಲೆ ಶೀಘ್ರ ಜಿಗಿತವಾಗಲಿದೆ. ಆದರೆ ಭೂಮಿ ಮತ್ತು ಫ್ಲಾಟ್ ಬೆಲೆ ಯಾಕೆ ಹೆಚ್ಚಾಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಭೂಮಿ, ಫ್ಲಾಟ್ ಬೆಲೆ ಏರಿಕೆಗೆ ಕಾರಣ
ಕಳೆದ ಐದು ವರ್ಷಗಳಿಂದ ಆಸ್ತಿಗಳ ಮಾರ್ಗಸೂಚಿ ದರಗಳಲ್ಲಿ (Guidance value) ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಐದು ವರ್ಷದಲ್ಲಿ ಬದಲಾವಣೆ ಮಾಡದ ಕಾರಣದಿಂದಾಗಿ ರಾಜ್ಯ ಸರ್ಕಾರವು ಈಗ ಆಸ್ತಿಗಳ ಮಾರ್ಗಸೂಚಿ ದರ ಬದಲಾವಣೆ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದೆ. ಈ ಪರಿಷ್ಕರಣೆ ಬಳಿಕ ಭೂಮಿ, ಫ್ಲಾಟ್ ಬೆಲೆ ಏರಿಕೆಯಾಗಿದೆ.
ರಾಜ್ಯ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಆಸ್ತಿಗಳ ಮಾರ್ಗಸೂಚಿ ದರವನ್ನು ಶೇಕಡ 25 ರಿಂದ 30 ರಷ್ಟು ಏರಿಕೆ ಮಾಡಿದೆ. ಈ ಕಾರಣ ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಆಸ್ತಿ ಬೆಲೆಯು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡಿದ ಬೆನ್ನಲ್ಲೇ ಬೆಂಗಳೂರಿನ ಹಲವು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಒಂದು ವಾರದಿಂದ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಕ್ಟೋಬರ್ 1 ಕ್ಕಿಂತ ಮೊದಲು ಆಸ್ತಿ ನೋಂದಣಿಯನ್ನು ಪೂರ್ಣಗೊಳಿಸಲು ಜನರು ಮುಂದಾಗಿದ್ದರು ಎಂದು ವರದಿಯಾಗಿದೆ.
ಈ ನೂತನ ದರದ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, "ಕಾನೂನು ಪ್ರಕಾರವಾಗಿ ನೋಂದಣಿ ಇಲಾಖೆಯು ಪ್ರತಿ ವರ್ಷ ಆಸ್ತಿಗಳ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಆದರೆ ಕಳೆದ ಐದು ವರ್ಷದಿಂದ ಪರಿಷ್ಕರಣೆ ಮಾಡಲಾಗಿಲ್ಲ. ಇದು ಕಪ್ಪು ಹಣ ಸಂಗ್ರಹ, ವಹಿವಾಟಿಗೆ ಪರೋಕ್ಷವಾಗಿ ದಾರಿ ಮಾಡಿಕೊಟ್ಟಿದೆ. ಅದರಿಂದಾಗಿ ಆಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಅನಿವಾರ್ಯವಾಯಿತು," ಎಂದು ಹೇಳಿದ್ದಾರೆ.
ಮೊದಲು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಷ್ಕೃತ ದರವನ್ನು ಜಾರಿ ಮಾಡಲಾಗುತ್ತದೆ. ಅದಾದ ಬಳಿಕ ಬೇರೆ ಜಿಲ್ಲೆಯಲ್ಲಿ ಉಪಸಮಿತಿ ರಚನೆ ಮಾಡಿ ಹಂತಹಂತವಾಗಿ ಹೊಸ ಮಾರ್ಗಸೂಚಿ ದರವನ್ನು ಜಾರಿಗೆ ತರಲಾಗುತ್ತದೆ ಎಂದು ಕೂಡಾ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಏನಿದು ಆಸ್ತಿಗಳ ಮಾರ್ಗಸೂಚಿ ದರ?
ಆಸ್ತಿಗಳ ಮಾರ್ಗಸೂಚಿ ದರವೆಂದರೆ ಸ್ಥಳೀಯ ಮಾರುಕಟ್ಟೆ ದರಗಳನ್ನು ಅವಲಂಬಿಸಿ ಸರ್ಕಾರವು ನಿಗದಿಪಡಿಸಿದ ಆಸ್ತಿಯ ಕನಿಷ್ಠ ಮಾರಾಟ ಬೆಲೆಯಾಗಿದೆ. ಇನ್ನು ಆಸ್ತಿಯ ಮೌಲ್ಯದ ಮೇಲೆ ಶೇಕಡ 5.6 ರಷ್ಟು ಸ್ಟ್ಯಾಂಪ್ ಡ್ಯೂಟಿ, ಸೆಸ್ ಮತ್ತು ಹೆಚ್ಚುವರಿ ಶುಲ್ಕವನ್ನು ಖರೀದಿದಾರರು ಪಾವತಿಸಬೇಕಾಗುತ್ತದೆ. ಇನ್ನು ಶೇಕಡ 1 ರಷ್ಟು ನೋಂದಣಿ ಶುಲ್ಕವನ್ನು ಕೂಡಾ ಪಾವತಿಸಬೇಕಿದೆ.


Click it and Unblock the Notifications