ಕಳೆದ ವರ್ಷದಲ್ಲಿ ಹಲವಾರು ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿನ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಆರಂಭ ಮಾಡಿದ ಉದ್ಯೋಗ ಕಡಿತವು ಈ ವರ್ಷವೂ ಕೂಡಾ ಮುಂದುವರಿದಿದೆ. ಜನವರಿಯಲ್ಲಿ ಅಮೆಜಾನ್ ಸುಮಾರು 18 ಸಾವಿ ಉದ್ಯೋಗಿಗಳನ್ನು ವಜಾಗೊಳಿಸುವ ಘೋಷಣೆಯನ್ನು ಮಾಡಿದೆ. ಇದೀಗ ಎರಡನೇ ಹಂತದ ಉದ್ಯೋಗ ಕಡಿತವನ್ನು ಅಮೆಜಾನ್ ಮಾಡಿದೆ. ಈ ಎರಡನೇ ಹಂತದ ಉದ್ಯೋಗ ಕಡಿತದಲ್ಲಿ ಸಂಸ್ಥೆಯು ಸುಮಾರು 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ಹೇಳಿಕೊಂಡಿದೆ. ಭಾರತಕ್ಕೂ ಈ ಉದ್ಯೋಗ ಕಡಿತ ಪ್ರಭಾವ ಬೀರಲಿದೆ.
ಈ ಹಿಂದೆ ಉದ್ಯೋಗ ಕಡಿತ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಅಮೆಜಾನ್ ಯಾವೆಲ್ಲ ಸೆಕ್ಷನ್‌ಗಳಿಂದ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿತ್ತು. ಅದರಂತೆಯೇ ಈ ಎರಡನೇ ಹಂತದಲ್ಲಿಯೂ ವಿವರಣೆಯನ್ನು ನೀಡಿದೆ. ಸಂಸ್ಥೆಯು ನೀಡಿದ ಮಾಹಿತಿ ಪ್ರಕಾರವಾಗಿ ಈ ಬಾರಿ ಎಡಬ್ಲ್ಯೂಎಸ್, ಸಾಮಾನ್ಯ ಉದ್ಯೋಗಿಗಳು, ಅನುಭವ ಹೊಂದಿರುವವರು, ಟೆಕ್ನಾಲಜಿ (ಪಿಎಕ್ಸ್‌ಟಿ), ಜಾಹೀರಾತು, ಟ್ವಿಚ್ ಮೊದಲಾದ ವಿಭಾಗಗಳಿಂದ ಉದ್ಯೋಗ ಕಡಿತವನ್ನು ಮಾಡಲಾಗುತ್ತದೆ.

ಈ ಹಿಂದೆ ಉದ್ಯೋಗ ಕಡಿತದ ವೇಳೆ ಸಿಇಒ ಹೇಳಿದ್ದೇನು?
ಈ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಉದ್ಯೋಗಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. "ಈ ನಿರ್ಧಾರವು ಅತೀ ಕಷ್ಟಕರವಾದುದ್ದು. ಸಂಸ್ಥೆಯ ದೀರ್ಘಾವಧಿಯ ಯಶಸ್ವಿಗಾಗಿ ಈ ರೀತಿಯಾಗಿ ಒಂದು ಸಂಸ್ಥೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳುವುದು ಮುಖ್ಯವಾಗುತ್ತದೆ," ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿಕೊಂಡಿದ್ದಾರೆ. ಈ ಹಿಂದೆ ಉದ್ಯೋಗ ಕಡಿತ ಘೋಷಣೆ ಮಾಡಿದಾಗ, "ಇಷ್ಟೊಂದು ಮಂದಿಯನ್ನು ಕೆಲಸದಿಂದ ವಜಾ ಮಾಡುವುದರಿಂದ ಜನರಿಗೆ ತೊಂದರೆ ಉಂಟಾಗಲಿದೆ ಎಂದು ನಾವು ತಿಳಿದಿದ್ದೇವೆ. ನಾವು ಈ ನಿರ್ಧಾರವನ್ನು ಅತೀ ಸರಳವಾಗಿ ತೆಗೆದುಕೊಂಡಿಲ್ಲ," ಎಂದು ಸಂಸ್ಥೆಯ ಸಿಇಒ ತಿಳಿಸಿದ್ದಾರೆ.
ಇತ್ತೀಚೆಗೆ ಮತ್ತೆ ಹಲವಾರು ಸಂಸ್ಥೆಗಳು ಎರಡನೇ ಹಂತದ ಉದ್ಯೋಗ ಕಡಿತವನ್ನು ಘೋಷಣೆ ಮಾಡುತ್ತಿದೆ. ಮೆಟಾ ಸುಮಾರು ಹತ್ತು ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಹೇಳಿಕೊಂಡಿದೆ. ಇನ್ನು ಅಮೆಜಾನ್ ಸಂಸ್ಥೆಯು 18 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗುವುದು, ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಎರಡೇ ತಿಂಗಳಿನಲ್ಲಿ ಸಂಸ್ಥೆಯು ಮತ್ತೊಂದು ಹಂತದ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಡೆದಿದ್ದು ಏನು?
ನವೆಂಬರ್ 2022ರಲ್ಲಿ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಮೊದಲ ಬಾರಿಗೆ ಸ್ವಯಂ ಆಗಿ ಉದ್ಯೋಗ ಕಡಿತದ ಆಫರ್ ಅನ್ನು ಪಿಎಕ್ಸ್‌ಟಿ ಸಿಬ್ಬಂದಿಗಳಿಗೆ ನೀಡಿದೆ. 2023ರಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗುತ್ತದೆ ಎಂದು ಕೂಡಾ ಆಂಡಿ ಜಾಸ್ಸಿ ಸೂಚನೆ ನೀಡಿದ್ದರು. ಜನವರಿಯಲ್ಲಿ 18,000 ಉದ್ಯೋಗ ಕಡಿತದ ಘೋಷಣೆಯನ್ನು ಮಾಡಿದೆ. ಪ್ರಮುಖವಾಗಿ ಅಮೆಜಾನ್ ಸ್ಟೋರ್ ಹಾಗೂ ಪಿಎಕ್ಸ್‌ಟಿಯಲ್ಲಿ ಉದ್ಯೋಗ ಕಡಿತ ಘೋಷಿಸಲಾಗಿದೆ. ಇನ್ನು ಈ ಹಿಂದಿನ ಉದ್ಯೋಗ ಕಡಿತದೊಂದಿಗೆ ಈ ಉದ್ಯೋಗ ಕಡಿತವನ್ನು ಸೇರ್ಪಡೆ ಮಾಡಿಕೊಂಡಿಲ್ಲ ಎಂದು ಕೂಡಾ ಅಮೆಜಾನ್ ಸಿಇಒ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಎರಡನೇ ಹಂತದ ಉದ್ಯೋಗ ಕಡಿತದ ಬಗ್ಗೆ ಸಂಪೂರ್ಣ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ. ಏಪ್ರಿಲ್ ಅಂತ್ಯದ ವೇಳೆಗೆ ಪ್ರಕ್ರಿಯೆ ಸಂಪೂರ್ಣವಾಗಲಿದೆ ಎಂದು ಕೂಡಾ ಉಲ್ಲೇಖಿಸಿದ್ದಾರೆ. ಉದ್ಯೋಗ ಕಳೆದುಕೊಳ್ಳುವವರಿಗೆ ಅಮೆಜಾನ್ ಪರಿಹಾರವನ್ನು ಒದಗಿಸಲಿದೆ. ಪ್ರತ್ಯೇಕ ಪಾವತಿ, ಆರೋಗ್ಯ ವಿಮೆ ಪ್ರಯೋಜನ, ಇತರೆಡೆ ಉದ್ಯೋಗ ಪಡೆಯಲು ಸಹಾಯ ಮಾಡಲಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಸಂಸ್ಥೆ ಒಟ್ಟಾಗಿ 640 ಮಿಲಿಯನ್ ಡಾಲರ್ ಅನ್ನು ಪರಿಹಾರ ನೀಡಲು ಬಳಸಿದೆ.


Click it and Unblock the Notifications