ಇ-ಕಾಮರ್ಸ್ ದೈತ್ಯ ಸಂಸ್ಥೆಯಾದ ಅಮೆಜಾನ್ ಈಗಾಗಲೇ ಜಾಗತಿಕವಾಗಿ ತಮ್ಮ ಸಂಸ್ಥೆಯಿಂದ 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಘೋಷಿಸಿದೆ. ಈ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ತನ್ನ ಉದ್ಯೋಗಿಗಳಿಗೆ ನೀಡಿದ ನೋಟಿಸ್ ಮೂಲಕ ತಿಳಿದು ಬಂದಿದೆ. ಈ ನಡುವೆ ಭಾರತದಲ್ಲಿ ಎಷ್ಟು ಮಂದಿಯನ್ನು ವಜಾಗೊಳಿಸಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ಲಭ್ಯವಾದ ಮಾಹಿತಿಯ ಪ್ರಕಾರ ಅಮೆಜಾನ್ ಇಂಡಿಯಾ ಭಾರತದಲ್ಲಿ 1 ಲಕ್ಷ ಉದ್ಯೋಗಿಗಳ ಪೈಕಿ ಸುಮಾರು 1000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧಾರ ಮಾಡಿದೆ. ಈ ಬಗ್ಗೆ ಹಲವಾರು ಮಾಧ್ಯಮಗಳು ವರದಿ ಮಾಡಿದೆ. ಜಾಗತಿಕವಾಗಿ ಪ್ರಮುಖ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿನ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಅಮೆಜಾನ್ ಕೂಡಾ ಈ ಪ್ರಕ್ರಿಯೆಗೆ ಮುಂದಾಗಿದೆ.
ಆರ್ಥಿಕವಾಗಿ ಅಸ್ಥಿರತೆ ಉಂಟಾಗಿರುವ ಕಾರಣದಿಂದಾಗಿ ಜಾಗತಿಕವಾಗಿ 18,000 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಲಾಗುವುದು ಎಂದು ಈ ಹಿಂದೆ ಅಮೆಜಾನ್ ಹೇಳಿದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, "ಈ 18 ಸಾವಿರ ಮಂದಿಯನ್ನು ವಜಾಗೊಳಿಸುವ ಅಮೆಜಾನ್‌ನ ನಿರ್ಧಾರವು ಭಾರತದ 1000 ಮಂದಿಯ ಮೇಲೆ ಪ್ರಭಾವ ಉಂಟು ಮಾಡಲಿದೆ."

ವಕ್ತಾರರು ಹೇಳುವುದು ಏನು?
ಇನ್ನು ಭಾರತದಲ್ಲಿ ಸುಮಾರು 1 ಲಕ್ಷ ಮಂದಿ ಅಮೆಜಾನ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಭಾರತದ ಅಮೆಜಾನ್ ಉದ್ಯೋಗಿಗಳ ಪೈಕಿ ಶೇಕಡ 1ರಷ್ಟು ಜನರಿಗೆ ಉದ್ಯೋಗ ನಷ್ಟದ ಪರಿಣಾಮ ಬೀರಲಿದೆ ಎಂಬ ಮಾಹಿತಿಯು ಕೂಡಾ ಲಭ್ಯವಾಗಿದೆ. ಇನ್ನು ಅಮೆಜಾನ್ ವಕ್ತಾರರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಈ ಹಿಂದೆಯೇ ಅಮೆಜಾನ್‌ನಲ್ಲಿ 18 ಸಾವಿರ ಮಂದಿಯನ್ನು ವಜಾಗೊಳಿಸಲಾಗುವುದು ಎಂದು ಸಂಸ್ಥೆಯ ಸಿಇಒ ತಿಳಿಸಿದ್ದಾರೆ.
ತಮ್ಮ ಸಿಬ್ಬಂದಿಗಳಿಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ನೀಡಿದ ನೋಟಿಸ್‌ನಲ್ಲಿ, "ನವೆಂಬರ್‌ನಲ್ಲಿ ನಾವು ಉದ್ಯೋಗ ಕಡಿತ ಮಾಡಿದ ಬಳಿಕ ಈಗ ಮತ್ತೊಮ್ಮೆ ಘೋಷಣೆಯನ್ನು ಮಾಡುತ್ತೇವೆ. ನಾವು 18 ಸಾವಿರ ಜನರನ್ನು ಉದ್ಯೋಗದಿಂದ ಕಡಿತ ಮಾಡುತ್ತೇವೆ," ಎಂದು ತಿಳಿಸಿದ್ದಾರೆ. "ಇಷ್ಟೊಂದು ಮಂದಿಯನ್ನು ಕೆಲಸದಿಂದ ವಜಾ ಮಾಡುವುದರಿಂದ ಜನರಿಗೆ ತೊಂದರೆ ಉಂಟಾಗಲಿದೆ ಎಂದು ನಾವು ತಿಳಿದಿದ್ದೇವೆ. ನಾವು ಈ ನಿರ್ಧಾರವನ್ನು ಅತೀ ಸರಳವಾಗಿ ತೆಗೆದುಕೊಂಡಿಲ್ಲ," ಎಂದು ಕೂಡಾ ಸಂಸ್ಥೆಯ ಸಿಇಒ ಉಲ್ಲೇಖ ಮಾಡಿದ್ದಾರೆ.
ಅಮೆಜಾನ್‌ನಲ್ಲಿರುವ ಉದ್ಯೋಗಿಗಳೆಷ್ಟು?
ಡಿಸೆಂಬರ್ 31, 2021ರ ಪ್ರಕಾರ ಅಮೆಜಾನ್‌ನಲ್ಲಿ ಸರಿಸುಮಾರು 16,08,000 ಮಂದಿ ಖಾಯಂ ಆಗಿ ಹಾಗೂ ಪಾರ್ಟ್ ಟೈಮ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಹಿಂದೆ ಅಮೆಜಾನ್‌ನಿಂದ 20 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸುದ್ದಿಯಾಗಿತ್ತು. ಅದಕ್ಕೂ ಮೊದಲು 10 ಸಾವಿರ ಮಂದಿಯನ್ನು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಸುದ್ದಿಯಾಗಿತ್ತು.


Click it and Unblock the Notifications