ಡಿಸ್ನಿಯು ಮತ್ತೆ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲು ಮತ್ತು ಸಂಸ್ಥೆಯಲ್ಲಿ ಪುನರ್ ರಚನೆ ಮಾಡಲು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಫೆಬ್ರವರಿ ಸುಮಾರು 7000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದ ಡಿಸ್ನಿ ಸಂಸ್ಥೆಯು ಈಗ ಸುಮಾರು 4000 ಮಂದಿಯನ್ನು ವಜಾಗೊಳಿಸುವ ಸಿದ್ಧತೆಯನ್ನು ಮಾಡಿಕೊಂಡಿದೆ. ವೆಚ್ಚವನ್ನು ಕಡಿತಗೊಳಿಸಲು ಮ್ಯಾನೇಜರ್‌ಗಳಿಗೆ ಮಾಹಿತಿ ನೀಡಲಾಗಿದೆ, ಮತ್ತು ಯಾವೆಲ್ಲ ಉದ್ಯೋಗಿಗಳನ್ನು ಮುಂದಿನ ವಾರಗಳಲ್ಲಿ ಕೆಲಸದಿಂದ ವಜಾಗೊಳಿಸಬಹುದು ಎಂದು ಪಟ್ಟಿ ಮಾಡಲುವಂತೆಯೂ ತಿಳಿಸಿದೆ.
ಉದ್ಯೋಗವನ್ನು ಕಳೆದುಕೊಳ್ಳುವ ವ್ಯಕ್ತಿಗಳ ಪಟ್ಟಿಯನ್ನು ಮ್ಯಾನೇಜರ್‌ಗಳಿಗೆ ಸಿದ್ಧಪಡಿಸಲು ಡಿಸ್ನಿ ಸಂಸ್ಥೆಯು ತಿಳಿಸಿದ್ದರೂ ಕೂಡಾ ಸಂಸ್ಥೆಯು ಉದ್ಯೋಗ ಕಡಿತವನ್ನು ಮಾಡುವಾಗ ಹಂತ ಹಂತವಾಗಿ ಮಾಡುತ್ತದೆಯೇ ಅಥವಾ ಪಟ್ಟಿಯಲ್ಲಿನ ಎಲ್ಲರನ್ನು ಒಂದೇ ಬಾರಿಗೆ ಕೆಲಸದಿಂದ ತೆಗೆದುಹಾಕುತ್ತದೆಯೇ ಎಂಬ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಆದರೆ ಏಪ್ರಿಲ್‌ನಲ್ಲಿ ಡಿಸ್ನಿ ಸಂಸ್ಥೆಯಲ್ಲಿನ ಒಟ್ಟು 4000 ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ವರದಿಯು ಹೇಳಿದೆ.

ಡಿಸ್ನಿ ಉದ್ಯೋಗ ಕಡಿತದ ಬಗ್ಗೆ ಅಧಿಕ ಮಾಹಿತಿ
ಡಿಸ್ನಿಯ ವಾರ್ಷಿಕ ಸಭೆಯು ಏಪ್ರಿಲ್ 3ರಂದು ನಡೆಸಲಾಗುತ್ತಿದೆ, ಇದಕ್ಕೂ ಮುನ್ನ ಈ ಉದ್ಯೋಗ ಕಡಿತ ಮಾಹಿತಿ ಲಭ್ಯವಾಗಿದೆ. ಮನರಂಜನಾ ಕ್ಷೇತ್ರದ ಸಂಸ್ಥೆಯಾದ ಡಿಸ್ನಿ ಮನರಂಜನಾ ಪ್ರದರ್ಶನಗಳಲ್ಲಿ ಪರಿಣತಿ ಹೊಂದಿರುವ ಸ್ಟ್ರೀಮಿಂಗ್ ಸೇವೆಯಾದ ಹೂಲೂವನ್ನು ನಿಲ್ಲಿಸುವುದೇ ಅಥವಾ ಮುಂದುವರೆಸುವುದೇ ಎಂಬ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಲ್ಲಿ ಮೂರನೇ ಎರಡರಷ್ಟು ಡಿಸ್ನಿ, ಮೂರನೇ ಒಂದು ಭಾಗವನ್ನು ಕಾಮ್‌ಕ್ಯಾಸ್ಟ್ ಕಾರ್ಪೊರೇಷನ್ ಹೊಂದಿದೆ. ಇನ್ನು ವಯಸ್ಕರಿಗೆ ಆಧಾರಿತವಾಗಿ ನೀಡುತ್ತಿದ್ದ ಮನರಂಜನಾ ಕಾರ್ಯಕ್ರಮಗಳ ಕಡಿತವನ್ನು ಡಿಸ್ನಿ ಇತ್ತೀಚೆಗೆ ಘೋಷಣೆ ಮಾಡಿದೆ.
7,000 ಮಂದಿ ವಜಾಗೊಳಿಸಿದ್ದ ಸಂಸ್ಥೆ
ಡಿಸ್ನಿ ಸಂಸ್ಥೆಯಲ್ಲಿ 7,000 ಮಂದಿಯನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಸಂಸ್ಥೆಯು ಈ ಹಿಂದೆ ಘೋಷಣೆ ಮಾಡಿದೆ. ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಸಂಸ್ಥೆಯು ಈ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಇಒ ಬಾಬ್ ಈಗರ್, "ನಾವು ಈಗ ಎದುರಿಸುತ್ತಿರುವ ಸವಾಲನ್ನು ನಿರ್ವಹಣೆ ಮಾಡುವುದು ಮುಖ್ಯವಾಗುತ್ತದೆ. ನಾನು ಈ ನಿರ್ಧಾರವನ್ನು ಅತೀ ಸರಳವೆಂದು ಪರಿಗಣಿಸುವುದಿಲ್ಲ," ಎಂದಿದ್ದಾರೆ.
ಈ ಹಿಂದೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಟ್ವಿಟ್ಟರ್‌ನಿಂದ ಹಿಡಿದು, ಗೂಗಲ್‌ವರೆಗೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ. ಜೂಮ್ ಸಂಸ್ಥೆ 1,300 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಸೇಲ್‌ಫೋರ್ಸ್‌ನಲ್ಲಿ ಶೇಕಡ 10ರಷ್ಟು ಅಂದರೆ 8000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಕಾಯಿನ್‌ಬೇಸ್ ಎಂಬ ಕ್ರಿಪ್ಟೋಕರೆನ್ಸಿ ಸಂಸ್ಥೆಯು ಶೇಕಡ 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಂದರೆ 950 ಮಂದಿಯನ್ನು ವಜಾಗೊಳಿಸಿದೆ. ಮೈಕ್ರೋಸಾಫ್ಟ್ 10000 ಮಂದಿಯನ್ನು ವಜಾಗೊಳಿಸಿದೆ. ಅಂದರೆ ಶೇಕಡ 5ರಷ್ಟು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಡಿಸ್ನಿಯಲ್ಲಿ ಹಲವಾರು ಹಣಕಾಸು ಸವಾಲುಗಳು ಇದೆ ಎಂಬುವುದನ್ನು ಈ ವೆಚ್ಚ ಕಡಿತವು ತೋರಿಸುತ್ತದೆ. ಅದು ಕೂಡಾ ಮುಖ್ಯವಾಗಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಸಂಸ್ಥೆಯು ಭಾರೀ ಸವಾಲುಗಳನ್ನು ಕಂಡಿದೆ. ಪ್ರಸಿದ್ಧ ಸಂಸ್ಥೆಯಾಗಿದ್ದರೂ ಕೂಡಾ ಡಿಸ್ನಿ ಸ್ಟ್ರೀಮಿಂಗ್ ಉದ್ಯಮದಲ್ಲಿ ಸಾಕಷ್ಟು ಸ್ಪರ್ಧೆಯನ್ನು ಎದುರಿಸುತ್ತಿದೆ. ಇದು ಕಾರ್ಯಾಚರಣೆಯನ್ನು ಸುಗಮಗೊಳಿಸುವ ಮತ್ತು ವೆಚ್ಚ ಕಡಿತ ಮಾಡುವ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.


Click it and Unblock the Notifications