ಟ್ವಿಟ್ಟರ್‌ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ಭಾರತದ ಕೂ ಸಂಸ್ಥೆಯು ಕೂಡಾ ಈಗ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಗುರುವಾರ ಈ ಬಗ್ಗೆ ಘೋಷಣೆ ಮಾಡಿರುವ ಸಂಸ್ಥೆಯು ಒಂದು ವರ್ಷದ ಅವಧಿಯಲ್ಲಿ ಶೇಕಡ 30ರಷ್ಟು ಅಥವಾ 260 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದೆ.
ಹಾಗೆಯೇ ಇನ್ನು ಹೆಚ್ಚಿನ ಉದ್ಯೋಗ ಕಡಿತವನ್ನು ಮಾಡುವ ಉದ್ದೇಶವನ್ನು ಕೂ ಸಂಸ್ಥೆ ಹೊಂದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. "ನಾವು ಇತ್ತೀಚೆಗೆ ಜನವರಿ 2023ರಲ್ಲಿ ಫಂಡ್ ರೈಸ್ ಮಾಡಿದ್ದೇವೆ. 10 ಮಿಲಿಯನ್ ಡಾಲರ್ ಫಂಡ್‌ರೈಸ್ ಮಾಡಲಾಗಿದೆ. ನಮ್ಮಲ್ಲಿ ಉತ್ತಮ ಬಂಡವಾಳವಿದೆ," ಎಂದು ಸಂಸ್ಥೆಯು ಹೇಳಿದೆ.

ಹಾಗೆಯೇ, "ಈಗಾಗಲೇ ನಾವು ಫಂಡ್ ರೈಸ್ ಮಾಡಿದ್ದೇವೆ. ಈಗ ಮತ್ತೆ ಫಂಡ್ ರೈಸ್ ಮಾಡುವ ಉದ್ದೇಶವನ್ನು ನಾವು ಹೊಂದಿಲ್ಲ. ನಮ್ಮ ಆದಾಯವು ಉತ್ತಮವಾಗಿ ಬೆಳವಣಿಗೆ ಕಾಣುತ್ತಿದೆ. ಭವಿಷ್ಯದಲ್ಲಿ ಯಾವುದೇ ಅಗತ್ಯ ಸಂದರ್ಭ ಬಂದಾಗ ನಾವು ಫಂಡ್ ರೈಸ್ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ," ಎಂದು ಕೂ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 2022ರಲ್ಲಿ ಕೂ ಸಂಸ್ಥೆಯು ಸುಮಾರು 15 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಆ ಸಂದರ್ಭದಲ್ಲಿ ಆಪರೇಷನಲ್ ಮತ್ತು ಬ್ಯಾಕೆಂಡ್ ತಂಡದಿಂದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಪ್ರಮುಖವಾಗಿ ಇಂದಿನ ವಹಿವಾಟಿನ ಈ ತಂಡದ ಅಗತ್ಯವಿದೆಯೇ ಎಂದು ನೋಡಿಕೊಂಡು ಕೆಲವು ಉದ್ಯೋಗ ಕಡಿತ ಮಾಡಲಾಗಿದೆ.
ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ
ಈ ಅವಧಿಯಲ್ಲಿ ಎಲ್ಲಾ ಗಾತ್ರದ ವ್ಯವಹಾರಗಳು ಸಮರ್ಥ ಮತ್ತು ಸಂಪ್ರದಾಯವಾದಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಕಂಪನಿ ಹೇಳಿದೆ. "ಇದಕ್ಕೆ ಅನುಗುಣವಾಗಿ ನಾವು ವರ್ಷದ ಅವಧಿಯಲ್ಲಿ ನಮ್ಮ ಉದ್ಯೋಗಿಗಳ ಪೈಕಿ ಶೇಕಡ 30ರಷ್ಟು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ. ಪರಿಹಾರ ಪ್ಯಾಕೇಜ್‌ಗಳು, ಆರೋಗ್ಯ ಪ್ರಯೋಜನ, ಔಟ್‌ಪ್ಲೇಸ್‌ಮೆಂಟ್ ಸೇವೆಗಳ ಮೂಲಕ ಉದ್ಯೋಗ ಕಳೆದುಕೊಂಡವರಿಗೆ ಸಹಾಯ ಮಾಡಿದ್ದೇವೆ, ಬೆಂಬಲಿಸಿದ್ದೇವೆ," ಎಂದು ಸಂಸ್ಥೆಯು ಹೇಳಿದೆ.
ಇತರೆ ಸ್ಟಾರ್ಟ್‌ಅಪ್‌ಗಳಂತೆ ಕೂ ಕೂಡಾ ತನ್ನ ಆಪ್ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಾ ಸಾಗಿದೆ. ಹಾಗೆಯೇ ಪ್ರಸ್ತುತ ಮಾರುಕಟ್ಟೆ ಸ್ಥಿತಿ, ಬಾಹ್ಯ ವ್ಯವಸ್ಥೆ, ಜಾಗತಿಕ ಹಿಂಜರಿತದ ಪ್ರಭಾವವು ಕೂಡಾ ಕೂ ಸಂಸ್ಥೆಯ ಮೇಲೆ ಬೀರಿದೆ ಎಂದು ಸ್ಟೇಟ್‌ಮೆಂಟ್‌ನಲ್ಲಿ ಕೂ ಸಂಸ್ಥೆ ತಿಳಿಸಿದೆ.
ವಿಶ್ವದಲ್ಲಿ ಅತೀ ಹೆಚ್ಚು ಲಾಭವನ್ನು ಹೊಂದಿರುವ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಆದರೆ ನಾವು ಈಗಷ್ಟೇ ಬೆಳವಣಿಗೆ ಹೊಂದುತ್ತಿರುವ ಸ್ಟಾರ್ಟ್‌ಅಪ್ ಸಂಸ್ಥೆಯಾಗಿದೆ. ಹಾಗಿರುವಾಗ ನಮ್ಮ ಸಂಸ್ಥೆಯ ಮೇಲೆಯೂ ಜಾಗತಿಕ ಬೆಳವಣಿಗೆಗಳು ಪ್ರಭಾವ ಉಂಟು ಮಾಡುತ್ತದೆ. ಈ ವೇಳೆ ಸಂಸ್ಥೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ನಾವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿಕೆಯಲ್ಲಿ ಕೂ ಹೇಳಿದೆ.
ಟೈಗರ್‌ಗ್ಲೋಬಲ್- ನೇತೃತ್ವದ ಕೂ ಸಂಸ್ಥೆಯು 2020ರಲ್ಲಿ ಬಹುಭಾಷ್ಯ ಮೈಕ್ರೋ ಬ್ಲಾಗಿಂಗ್ ಆಪ್ ಕೂ ಅನ್ನು ಆರಂಭ ಮಾಡಿದೆ. ಇದು ಭಾರತೀಯ ಆಪ್ ಆಗಿದೆ. ಟ್ವಿಟ್ಟರ್‌ನಂತೆಯೇ ಈ ಆಪ್‌ನಲ್ಲಿ ಬಳಕೆದಾರರು ತಮ್ಮ ಭಾವನೆಗಳನ್ನು ಪೋಸ್ಟ್ ಮಾಡಬಹುದಾಗಿದೆ. ಪ್ರಸ್ತುತ ಸುಮಾರು 60 ಮಿಲಿಯನ್ ಜನರು ಕೂ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ವಿಶ್ವದಲ್ಲೇ ಎರಡನೇ ಅತೀ ದೊಡ್ಡ ಮೈಕ್ರೋ ಬ್ಲಾಗಿಂಗ್ ಆಪ್ ಆಗಿದೆ.


Click it and Unblock the Notifications