ವಿಶ್ವ ಅತೀ ದೊಡ್ಡ ಫಾಸ್ಟ್ ಫುಡ್ ತಯಾಕರ ಸಂಸ್ಥೆಯಾದ ಮೆಕ್‌ಡೊನಾಲ್ಡ್ಸ್‌ಗೂ ಕೂಡಾ ಹಣದುಬ್ಬರದ ಬಿಸಿ ತಟ್ಟಿದೆ. ಈಗಾಗಲೇ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದ್ದು, ಅದಕ್ಕೆ ಕಾರಣವನ್ನು ಸಂಶ್ಥೆಯಲ್ಲಿ ವೆಚ್ಚ ಕಡಿತ ಮಾಡುವ ಗುರಿ ಎಂದು ಹೇಳಿಕೊಂಡಿದೆ. ಈ ನಡುವೆ ಮೆಕ್‌ಡೊನಾಲ್ಡ್ಸ್ ಯುಎಸ್‌ನಲ್ಲಿರುವ ತನ್ನ ಎಲ್ಲ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ ಎಂದು ವರದಿಯಾಗಿದೆ. ಹಾಗೆಯೇ ಸಂಸ್ಥೆಯಲ್ಲಿ ಉದ್ಯೋಗ ಕಡಿತ ನಡೆಸಲು ಕೂಡಾ ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೆಕ್‌ಡೊನಾಲ್ಡ್ಸ್ ಸಂಸ್ಥೆಯು ಯುಎಸ್‌ನಲ್ಲಿ ಎಲ್ಲ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಹಾಗೆಯೇ ಹೊಸದಾಗಿ ಉದ್ಯೋಗ ಕಡಿತವನ್ನು ಮಾಡಲು, ಈ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಲು ತಯಾರಿಯನ್ನು ನಡೆಸಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಸಂಸ್ಥೆಯು ಕಳೆದ ವಾರ ತನ್ನ ಯುಎಸ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ಮಾಹಿತಿ ನೀಡಿದೆ. ಉದ್ಯೋಗಿಗಳು ಸೋಮವಾರದಿಂದ ಬುಧವಾರದವರೆಗೆ ವರ್ಕ್ ಫ್ರಮ್ ಹೋಮ್ ಮಾಡಬೇಕು ಎಂದು ಕಳೆದ ವಾರ ತಿಳಿಸಿದೆ.

ಎಷ್ಟು ಮಂದಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತೆ?
ತಮ್ಮ ಸಂಸ್ಥೆಯಲ್ಲಿ ನಡೆಯಲಿರುವ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ವರ್ಚುವಲ್ ಆಗಿ ತಿಳಿಸುವ ಉದ್ದೇಶದಿಂದ ಮೆಕ್‌ಡೊನಾಲ್ಡ್ಸ್ ಯುಎಸ್‌ನಲ್ಲಿನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ತಿಳಿಸಿದೆ ಎಂದು ವರದಿಯು ಹೇಳಿದೆ. ಆದರೆ ಎಷ್ಟು ಉದ್ಯೋಗಿಗಳಿಗೆ ಮೆಕ್‌ಡೊನಾಲ್ಡ್ಸ್ ಪಿಂಕ್ ಸ್ಲಿಪ್ ನೀಡಲಿದೆ ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ. "ಏಪ್ರಿಲ್ 3ರಿಂದ ಆರಂಭವಾಗುವ ವಾರದಲ್ಲಿ ಸಂಸ್ಥೆಯಲ್ಲಿ ಸ್ಥಾನ ಮತ್ತು ಹುದ್ದೆ ವಿಚಾರದಲ್ಲಿ ನಾವು ಪ್ರಮುಖ ನಿರ್ಧಾರವನ್ನು ಘೋಷಣೆ ಮಾಡಲಿದ್ದೇವೆ," ಎಂದು ಮೆಕ್‌ಡೊನಾಲ್ಡ್ಸ್ ಇಮೇಲ್ ಮೂಲಕ ತಿಳಿಸಿದೆ ಎಂದು ವರದಿ ಹೇಳಿದೆ.
GitHub: ಭಾರತದ ಸಂಪೂರ್ಣ ಇಂಜಿನಿಯರಿಂಗ್ ತಂಡ ವಜಾಗೊಳಿಸಿದ ಗಿಟ್‌ಹಬ್!
ಇನ್ನು ಈ ವಾರದಲ್ಲಿ ನಿಗದಿಪಡಿಸಲಾದ ಎಲ್ಲ ಸಭೆಗಳನ್ನು ರದ್ದು ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶನ ನೀಡಲಾಗಿದೆ. ವ್ಯವಹಾರಿಕ ಉದ್ದೇಶದಿಂದಾಗಿ ಸಂಸ್ಥೆಯಲ್ಲಿ ಉದ್ಯೋಗಿಗಳ ಕಾರ್ಯವೈಖರಿಯನ್ನು ಪರಿಶೀಲನೆ ಮಾಡಲಾಗುವುದು. ಇದರ ಭಾಗವಾಗಿ ಸಂಸ್ಥೆಯ ಕೆಲವು ವಿಭಾಗಗಳಲ್ಲಿ ಉದ್ಯೋಗ ಕಡಿತ ನಡೆಸಲಾಗುವುದು, ಕೆಲವು ವಿಭಾಗಗಳನ್ನು ವಿಸ್ತರಣೆ ಮಾಡಲಾಗುವುದು ಎಂದು ಜನವರಿಯಲ್ಲಿ ಈ ಫಾಸ್ಟ್ ಫುಡ್ ತಯಾರಕ ಸಂಸ್ಥೆ ಮೆಕ್‌ಡೊನಾಲ್ಡ್ಸ್ ತಿಳಿಸಿದೆ.
ಉದ್ಯೋಗ ಕಡಿತ ಘೋಷಣೆ ನಿರೀಕ್ಷೆ
ಮೆಕ್‌ಡೊನಾಲ್ಡ್ಸ್ ಸಂಸ್ಥೆಯಲ್ಲಿ ಬುಧವಾರ ಉದ್ಯೋಗ ಕಡಿತವನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತ ಮತ್ತು ಹಣದುಬ್ಬರದ ನಡುವೆ ಹಲವಾರು ಸಂಸ್ಥೆಗಳು ವೆಚ್ಚ ಕಡಿಮೆ ಮಾಡಲು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಗೂಗಲ್, ಅಮೆಜಾನ್, ಮೆಟಾ (ಫೇಸ್‌ಬುಕ್) ಸೇರಿದಂತೆ ಹಲವಾರು ಸಂಸ್ಥೆಗಳು ಈಗಾಗಲೇ ಉದ್ಯೋಗ ಕಡಿತವನ್ನು ಮಾಡಿದೆ. ಇನ್ನು ಕೆಲವು ಸಂಸ್ಥೆಗಳು ಎರಡನೇ ಹಂತದ ಉದ್ಯೋಗ ಕಡಿತವನ್ನು ಘೋಷಿಸಿದೆ.
ಯುಎಸ್ ಟೆಕ್ ಸಂಸ್ಥೆಗಳಲ್ಲಿ ನಡೆದ ಉದ್ಯೋಗ ಕಡಿತ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಭಾರತೀಯರಿಗೆ ಪ್ರಭಾವ ಉಂಟಾಗಿದೆ. ತಾತ್ಕಾಲಿಕ ವಿಸಾ ಮೂಲಕ ಯುಎಸ್‌ನಲ್ಲಿ ಉದ್ಯೋಗದಲ್ಲಿದ್ದ ಭಾರತೀಯರು ಈಗ ಉದ್ಯೋಗ ಕಳೆದುಕೊಂಡ ಹೊಸ ಉದ್ಯೋಗ ಹುಡುಕಾಟಕ್ಕೆ ಹೆಚ್ಚು ಸಮಯ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. H-1B ವಿಸಾ ಹೊಂದಿರುವವರು ಸಾಮಾನ್ಯವಾಗಿ ಒಂದು ಉದ್ಯೋಗವನ್ನು ಕಳೆದುಕೊಂಡ ಬಳಿಕ ಇನ್ನೊಂದು ಉದ್ಯೋಗದ ಹುಡುಕಾಟದವರೆಗೆ ಒಟ್ಟು 60 ದಿನ (2 ತಿಂಗಳು) ಯುಎಸ್‌ನಲ್ಲಿ ಉಳಿಯುವ ಅವಕಾಶವಿದೆ.
ಇನ್ನು ಇತ್ತೀಚೆಗೆ ಓಪನ್ ಸೋರ್ಸ್ ಡೆವಲಪರ್ ಪ್ಲಾಟ್‌ಫಾರ್ಮ್ ಆದ ಗಿಟ್‌ಹಬ್ ತನ್ನ ಸಂಸ್ಥೆಯಲ್ಲಿರುವ ಭಾರತದಲ್ಲಿ ಸಂಪೂರ್ಣ ಇಂಜಿನಿಯರಿಂಗ್ ತಂಡವನ್ನು ವಜಾಗೊಳಿಸಿದೆ. ಅತೀ ದೊಡ್ಡ ಡೆವಲಪರ್ ಸಂಸ್ಥೆಯಾದ ಗಿಟ್‌ಹಬ್ ಭಾರತದಲ್ಲಿ ಮಾಡಿದ ಈ ಉದ್ಯೋಗ ಕಡಿತವು ಸರಿಸುಮಾರು 100 ಮಂದಿಯ ಮೇಲೆ ಪ್ರಭಾವ ಉಂಟು ಮಾಡಿದೆ.


Click it and Unblock the Notifications