ಉದ್ಯೋಗ ಹುಡುಕಾಟಕ್ಕೆ ಸಹಾಯವಾಗುವ ಆಪ್ ಆಗಿಯೇ ಪ್ರಸಿದ್ಧಿಯನ್ನು ಪಡೆದಿರುವ ಲಿಂಕ್ಡಿನ್ ಸುಮಾರು 716 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಹಾಗೆಯೇ ಚೀನಾದ ಮೇಲೆ ಹೆಚ್ಚು ಕೇಂದ್ರಿಕರಿಸಿದ ಉದ್ಯೋಗ ಹುಡುಕಾಟ ಮಾಡಲು ಸಹಾಯವಾಗುವ ಆಪ್ ಅನ್ನು ಸ್ಥಗಿತಗೊಳಿಸಿದೆ. ಜಾಗತಿಕವಾಗಿ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು, ಬೇಡಿಕೆ ಕಡಿಮೆಯಾಗುತ್ತಿರುವಂತೆ ಲಿಂಕ್ಡಿನ್ ಈ ನಿರ್ಧಾರ ತೆಗೆದುಕೊಂಡಿದೆ.
ಮೈಕ್ರೋಸಾಫ್ಟ್ ಮೂಲದ ಸಂಸ್ಥೆಯಾದ ಲಿಂಕ್ಡಿನ್‌ನಲ್ಲಿ ಕಳೆದ ವರ್ಷ ಪ್ರತಿ ತ್ರೈಮಾಸಿಕದಲ್ಲಿ ಆದಾಯವು ಹೆಚ್ಚಳವಾಗುತ್ತಾ ಸಾಗಿದೆ. ಆದರೆ ಈಗ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿರುವಂತೆ ಲಿಂಕ್ಡಿನ್‌ನಲ್ಲಿಯೂ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಲಿಂಕ್ಡಿನ್‌ನಲ್ಲಿ ಒಟ್ಟಾಗಿ ಸುಮಾರು 20 ಸಾವಿರ ಉದ್ಯೋಗಿಗಳಿದ್ದು, 716 ಉದ್ಯೋಗ ಕಡಿತವೆಂದರೆ ಸುಮಾರು ಶೇಕಡ 3.5ರಷ್ಟು ಜನರಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ.

ಲಿಂಕ್ಡಿನ್ ಸಾಮಾನ್ಯವಾಗಿ ಜಾಹೀರಾತು ಮಾರಾಟ ಹಾಗೂ ನೇಮಕಾತಿ ಮತ್ತು ಮಾರಾಟ ವೃತ್ತಿಪರರ ಚಂದಾದಾರಿಕೆಯ ಮೂಲಕ ಆದಾಯವನ್ನು ಗಳಿಸಲಾಗುತ್ತದೆ. ಸಿಇಒ ರಿಯಾನ್ ರೋಸ್ಲಾನ್ಸ್ಕಿ ಉದ್ಯೋಗಿಗಳಿಗೆ ಪತ್ರವನ್ನು ಬರೆದಿದ್ದಾರೆ. ಉದ್ಯೋಗ ಕಡಿತವು ಕಂಪನಿಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ವೇಗವಾಗಿ ನಿರ್ಧಾರವನ್ನು ಕೈಗೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
2,70,000 ಟೆಕ್ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ
ಚೀನಾ ಕೇಂದ್ರಿತ ಉದ್ಯೋಗ ಹುಡುಕಾಟ ಆಪ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ. ಆದರೆ ಲಿಂಕ್ಡಿನ್ ಚೀನಾದಲ್ಲಿ ಕಾರ್ಯನಿರ್ವಹಣೆಯಲ್ಲಿ ಇರಲಿದ್ದು, ಸಂಸ್ಥೆಗಳ ನೇಮಕಾತಿ, ಹೊರ ದೇಶದ ಉದ್ಯೋಗಿಗಳ ತರಬೇತಿಗಾಗಿ ಸಹಾಯ ಮಾಡಲಿದೆ. ಕಳೆದ ಆರು ತಿಂಗಳಿನಲ್ಲಿ ಸುಮಾರು 2,70,000 ಟೆಕ್ ಸಂಸ್ಥೆಗಳು ಜಾಗತಿಕವಾಗಿ ಉದ್ಯೋಗ ಕಡಿತವನ್ನು ಮಾಡಿದೆ. ಅಮೆಜಾನ್, ಫೇಸ್‌ಬುಕ್, ಗೂಗಲ್ ಕೂಡಾ ಉದ್ಯೋಗ ಕಡಿತ ಮಾಡಿದೆ.
2016ರಲ್ಲಿ ಮೈಕ್ರೋಸಾಫ್ಟ್ 26 ಬಿಲಿಯನ್ ಡಾಲರ್‌ಗೆ ಲಿಂಕ್ಡಿನ್ ಅನ್ನು ಖರೀದಿ ಮಾಡಿದೆ. ಮೈಕ್ರೋಸಾಫ್ಟ್ ಇತ್ತೀಚೆಗೆ ಸುಮಾರು 10000 ಉದ್ಯೋಗ ಕಡಿತ ಮಾಡಿದೆ. ಎಐ, ಇಂಟರ್‌ನೆಟ್ ಮೊದಲಾದ ಕಾರ್ಯಗಳಲ್ಲಿದ್ದ ಉದ್ಯೋಗಿಗಳು ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್ ಮಾತ್ರವಲ್ಲದೆ ಅಮೆಜಾನ್, ಮೆಟಾ, ಗೂಗಲ್ ಕೂಡಾ ಉದ್ಯೋಗ ಕಡಿತ ಮಾಡಿದ.ೆ
ಮೆಟಾ ಸುಮಾರು 21 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಗೂಗಲ್ ಸುಮಾರು 12 ಸಾವಿರ ಉದ್ಯೋಗಿಗಳನ್ನು ಜನವರಿಯಲ್ಲಿ ವಜಾಗೊಳಿಸಿದೆ. ಅಮೆಜಾನ್‌ನಲ್ಲಿ ಸುಮಾರು 27 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ. ಈ ಎಲ್ಲ ಸಂಸ್ಥೆಗಳು ಕೂಡಾ ಹಣದುಬ್ಬರದ ನಡುವೆ ಸಂಸ್ಥೆಯಲ್ಲಿನ ವೆಚ್ಚವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ ಎಂದು ಹೇಳಿಕೊಂಡಿದೆ.
ಇನ್ನು ಇತ್ತೀಚೆಗೆ ಶಾಫಿಫೈನ್ಲಲಿ ಸುಮಾರು 2000 ಮಂದಿಗೆ ಪಿಂಕ್ ಸ್ಲಿಪ್ ಅನ್ನು ನೀಡಲಾಗಿದೆ. ಕ್ಲಬ್‌ಹೌಸ್‌ನಲ್ಲಿ ಶೇಕಡ 50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಡಿಸ್ನಿಯಲ್ಲಿ ಹಲವಾರು ಹಂತಗಳಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಈ ತಿಂಗಳಲ್ಲಿ 4000 ಉದ್ಯೋಗ ಕಡಿತವನ್ನು ಡಿಸ್ನಿ ಘೋಷಣೆ ಮಾಡಿದೆ.
ಕೂ ಸಂಸ್ಥೆಯು ಕೂಡಾ ಈ ಉದ್ಯೋಗ ಕಡಿತ ಮಾಡುತ್ತಿರುವ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಕೂ ಸಂಸ್ಥೆಯಲ್ಲಿ ಶೇಕಡ 30ರಷ್ಟು ಅಂದರೆ 260ರಷ್ಟು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ.
ದಿನಸಿ, ಅಗತ್ಯ ವಸ್ತುಗಳ ಡೆಲಿವರಿ ಮಾಡುವ ಸಂಸ್ಥೆಯಾದ ಡೊನ್ಜೊದಲ್ಲಿ 300 ಮಂದಿಯನ್ನು ವಜಾಗೊಳಿಸಿದ್ದರೆ. ಗಿತ್‌ಹಬ್ ಸಂಪೂರ್ಣ ಭಾರತೀಯ ತಂಡವನ್ನು ವಜಾಗೊಳಿಸಿದೆ. ಆಕ್ಸೆಂಚರ್ ಸಂಸ್ಥೆಯಲ್ಲಿ 19000 ಮಂದಿಯನ್ನು ವಜಾ ಮಾಡಲಾಗಿದೆ. ಗೋ ಡ್ಯಾಡಿಯಲ್ಲಿ ಶೇಕಡ 8ರಷ್ಟು ಉದ್ಯೋಗ ಕಡಿತ ಮಾಡಲಾಗಿದೆ. ಯಾಹೂವಿಲ್ಲಿ 1000 ಮಂದಿಯನ್ನು ವಜಾಗೊಳಿಸಲಾಗಿದೆ.


Click it and Unblock the Notifications