ಪ್ರಸ್ತುತ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಮುಖ್ಯವಾಗಿ ಟೆಕ್ ಸಂಸ್ಥೆಗಳು ವೆಚ್ಚ ಕಡಿತ ಮಾಡುವ ನೆಪದಲ್ಲಿ ಹಲವಾರು ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸುತ್ತಿದೆ. ಈ ನಡುವೆ ಬ್ರಿಟಿಷ್ ಮಲ್ಟಿನ್ಯಾಷನಲ್ ಟೆಲಿಕಮ್ಯೂನಿಕೇಷನ್ ಸಂಸ್ಥೆಯಾದ ವೊಡಾಫೋನ್ ಸುಮಾರು 11000 ಉದ್ಯೋಗ ಕಡಿತವನ್ನು ಮಾಡುವ ನಿರ್ಧಾರ ಮಾಡಿದೆ.
ಟೆಲಿಕಾಂ ಸಂಸ್ಥೆಯ ಕಾರ್ಯತಂತ್ರದ ಯೋಜನೆಯ ಭಾಗವಾಗಿ ಈ ಉದ್ಯೋಗ ಕಡಿಯವನ್ನು ಮಾಡಲಾಗುತ್ತಿದೆ. ಮುಂದಿನ 3 ವರ್ಷಗಳ ಅವಧಿಯಲ್ಲಿ ಒಟ್ಟಾಗಿ 11000 ಉದ್ಯೋಗ ಕಡಿತವನ್ನು ಮಾಡಲು ಸಂಸ್ಥೆಯು ನಿರ್ಧಾರ ಮಾಡಿದೆ. ವೊಡಾಫೋನ್‌ನ ಹೊಸ ಸಿಇಒ ಮಾರ್ಗರಿಟಾ ಡೆಲ್ಲಾ ವ್ಯಾಲೆ ಹಣಕಾಸು ವರ್ಷ 2023ರಲ್ಲಿ ಕಾರ್ಯಕ್ಷಮತೆಯು ಹೆಚ್ಚು ಉತ್ತಮವಾಗಿಲ್ಲದ ಕಾರಣದಿಂದಾಗಿ ಈ ನಿರ್ಧಾರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಣಕಾಸು ವರ್ಷ 2023ರ ವರದಿಯಲ್ಲಿ ಡೆಲ್ಲಾ ವ್ಯಾಲೆ, "ನಾನು ವೊಡಾಫೋನ್‌ಗಾಗಿ ನನ್ನ ಯೋಜನೆಗಳನ್ನು ಪ್ರಕಟಿಸುತ್ತಿದ್ದೇನೆ. ನಮ್ಮ ಕಾರ್ಯಕ್ಷಮತೆ ಸಾಕಷ್ಟು ಉತ್ತಮವಾಗಿಲ್ಲ. ಕಾರ್ಯನಿರ್ವಹಣೆಯನ್ನು ಮುಂದುವರಿಸಬೇಕಾದರೆ ವೊಡಾಫೋನ್ ಬದಲಾಗಬೇಕು," ಎಂದು ಹೇಳಿದ್ದಾರೆ. ಗ್ರಾಹಕರು, ಸರಳತೆ ಮತ್ತು ಬೆಳವಣಿಗೆಗೆ ಹೆಚ್ಚು ಗಮನ ಹರಿಸುವುದಾಗಿ ಹೊಸ ಸಿಇಒ ಹೇಳಿಕೊಂಡಿದ್ದಾರೆ.
ನಾಲ್ಕು ವರ್ಷಗಳಲ್ಲಿ ಬದಲಾವಣೆಯನ್ನು ತರಲು ವೊಡಾಫೋನ್ ಈಗಾಗಲೇ ಕ್ರಿಯಾ ಯೋಜನೆಯನ್ನು ಹೊಂದಿದೆ. ಮೂರು ಆದ್ಯತೆಗಳ ಮೇಲೆ ಕೇಂದ್ರೀಕರಿಸಿದೆ. ಅದುವೇ ಗ್ರಾಹಕರು, ಸರಳತೆ ಮತ್ತು ಬೆಳವಣಿಗೆ ಎಂದು ತಿಳಿಸಿದ್ದಾರೆ. "ನಾವು ನಮ್ಮ ಸಂಸ್ಥೆಯನ್ನು ಸರಳಗೊಳಿಸುತ್ತೇವೆ. ನಾವು ನಮ್ಮ ಸಂಸ್ಥೆಯಲ್ಲಿನ ಸ್ಪರ್ಧಾತ್ಮಕತೆಯನ್ನು ಮತ್ತೆ ಹೆಚ್ಚಿಸಲು ಉದ್ಯೋಗ ಕಡಿತ ಮಾಡುತ್ತೇವೆ. ನಮ್ಮ ಗ್ರಾಹಕರು ನಿರೀಕ್ಷಿಸುವ ಗುಣಮಟ್ಟದ ಸೇವೆಯನ್ನು ನೀಡಲು ಮತ್ತು ವೊಡಾಫೋನ್‌ನಲ್ಲಿ ಬೆಳವಣಿಗೆ ತರಲು ಕಾರ್ಯನಿರ್ವಹಣೆ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
"ಸರಳತೆಯನ್ನು ಸಾಧಿಸುವ ನಿಟ್ಟಿನಲ್ಲಿ ಎಚ್‌ಕ್ಯೂ ಮತ್ತು ಸ್ಥಳೀಯ ಮಾರುಕಟ್ಟೆಗಳ ಸರಳೀಕರಣದೊಂದಿಗೆ ಮೂರು ವರ್ಷಗಳಲ್ಲಿ 11,000 ಉದ್ಯೋಗ ಕಡಿತವನ್ನು ಯೋಜಿಸಲಾಗಿದೆ," ಎಂದು ಸಿಇಒ ಮಾರ್ಗರಿಟಾ ಡೆಲ್ಲಾ ವ್ಯಾಲೆ ತಿಳಿಸಿದ್ದಾರೆ. "ನಾವು ವಾಣಿಜ್ಯ ಚಟುವಟಿಕೆಯನ್ನು ಹೆಚ್ಚಳ ಮಾಡಲು, ಸಂಪನ್ಮೂಲಗಳನ್ನು ಹೆಚ್ಚಿಸಲು, ಸರಳವಾದ ಸಂಸ್ಥೆಯಾಗಬೇಕಾಗುತ್ತದೆ," ಎಂದು ಒತ್ತಿ ನುಡಿದಿದ್ದಾರೆ.
ಇನ್ನು ನಾವು ಗ್ರಾಹಕರ ವಿಚಾರಕ್ಕೆ ಬಂದಾಗ ವೊಡಾಫೋನ್ ಹಣಕಾಸು ವರ್ಷ 2024ರಲ್ಲಿ ಗ್ರಾಹಕರ ಅನುಭವ ಮತ್ತು ಬ್ರ್ಯಾಂಡ್‌ಗೆ ಗಮನಾರ್ಹ ಹೂಡಿಕೆಗಳನ್ನು ಮರುಹಂಚಿಕೆ ಮಾಡಿದೆ. ಗ್ರಾಹಕ ಮಾರುಕಟ್ಟೆಗಳಲ್ಲಿ ಗೆಲ್ಲಲು, ವೊಡಾಫೋನ್ ಮೂಲಭೂತ ಅಂಶಗಳ ಮೇಲೆ ಅಧಿಕ ಗಮನ ಹರಿಸಲು ಆರಂಭ ಮಾಡಿದೆ. ಗ್ರಾಹಕರ ನಿರೀಕ್ಷೆಯಂತೆ ಸರಳ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದೆ.
ಕಳೆದ ವರ್ಷದಿಂದಲೇ ಆರಂಭವಾಗಿದೆ ಉದ್ಯೋಗ ಕಡಿತ
ಜಾಗತಿಕವಾಗಿ ಆರ್ಥಿಕ ಹಿಂಜರಿತದ ಆತಂಕ, ಹಣದುಬ್ಬರದ ನಡುವೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಉದ್ಯೋಗ ಕಡಿತ ಮಾಡಿದ ಸಂಸ್ಥೆಗಳು ಪ್ರಮುಖವಾಗಿ ನೀಡಿರುವ ಕಾರಣ ವೆಚ್ಚ ಕಡಿತಗೊಳಿಸುವುದು ಮತ್ತು ಸಂಸ್ಥೆಯ ಬೆಳವಣಿಗೆಗಾಗಿ ರಚನಾತ್ಮಕ ಬದಲಾವಣೆಯಾಗಿದೆ. ಅದರಲ್ಲೂ ಮುಖ್ಯವಾಗಿ 2022ರಿಂದ ಈವರೆಗೆ ಟೆಕ್ ವಲಯದಲ್ಲಿ ಅಧಿಕ ಉದ್ಯೋಗ ಕಡಿತ ನಡೆದಿದೆ.
ಆರ್ಥಿಕ ಹಿಂಜರಿತದ ಆತಂಕದ ನಡುವೆ ಪ್ರಮುಖವಾಗಿ ಟೆಕ್ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಒಂದೇ ಬಾರಿಗೆ ಸಾವಿರಾರು ಜನರನ್ನು ಸಂಸ್ಥೆಯಿಂದ ತೆಗೆದುಹಾಕಲಾಗಿದೆ. 365 ಡೇಟಾಸೈನ್ಸ್ ಸ್ಟಡಿ ಪ್ರಕಾರ ಕೊರೊನಾ ವೈರಸ್ ಸಾಂಕ್ರಾಮಿಕದಲ್ಲಿ ಟೆಕ್ ವಲಯದಲ್ಲಿ ನಡೆದ ಉದ್ಯೋಗ ಕಡಿತಕ್ಕಿಂತ ಅಧಿಕವಾಗಿ 2022ರಲ್ಲಿ ಉದ್ಯೋಗ ಕಡಿತ ನಡೆದಿದೆ. 2022ರಲ್ಲಿ 150000 ಮಂದಿಯನ್ನು ವಜಾಗೊಳಿಸಲಾಗಿದೆ, ಈ ಟ್ರೆಂಡ್ ಮುಂದುವರಿದಿದ್ದು 2023ರ ಜನವರಿ ತಿಂಗಳಲ್ಲೇ 68,500 ಹೊಸ ಉದ್ಯೋಗ ಕಡಿತ ಮಾಡಲಾಗಿದೆ.


Click it and Unblock the Notifications