ಕೊರೊನಾವೈರಸ್ ಸೋಂಕು ದೇಶಾದ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಬೃಹತ್ ಯೋಜನೆಗೆ ಚಿಂತನೆ ನಡೆಸಿದೆ.
ಸೋಂಕು ಹರಡುವಿಕೆ ತಡೆಗೆ ನಿರ್ಬಂಧಗಳನ್ನು ವಿಸ್ತರಿಸುತ್ತಿರುವ ಕಾರಣ ಜನರು ಅಗತ್ಯ ವಸ್ತುಗಳಿಗೆ ಪರದಾಡುವುದನ್ನು ತಪ್ಪಿಸಲು ದೇಶಾದ್ಯಂತ 20 ಲಕ್ಷ ಸುರಕ್ಷಾ ಮಳಿಗೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, 50ಕ್ಕೂ ಹೆಚ್ಚು ಕಂಪನಿಗಳ ಜೊತೆ ಮಾತುಕತೆ ನಡೆಸಿದೆ.

"ದೇಶದಲ್ಲಿ ಕಿರಾಣಿ ಅಂಗಡಿಗಳ ರೀತಿಯಲ್ಲಿ ಸುರಕ್ಷಾ ಮಳಿಗೆಗಳನ್ನು ತೆರೆದು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳೊಂದಿಗೆ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಈ ಕುರಿತು ನಿಯಮಾವಳಿಗಳನ್ನು ರೂಪಿಸುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಮೂಲಕ ಕೈ ತೊಳೆದು ಬರುವಂತೆ ಸೂಚಿಸಲಾಗುವುದು. ಅಂಗಡಿ ಬಳಿ ಜನರು ಮುಟ್ಟುವ, ಒಡಾಡುವ ಸ್ಥಳಗಳನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುವುದು.
ಸಿಬ್ಬಂದಿ ಕೂಡ ಮಾಸ್ಕ್, ಗ್ಲೌಸ್ ಬಳಸುವಂಥ ವ್ಯವಸ್ಥೆ ಇರಲಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಸುರಕ್ಷತಾ ಸ್ಟೋರ್ ಸ್ಥಾಪಿಸಲಾಗುವುದು. ಈ ಕುರಿತು ಅಗತ್ಯ ವಸ್ತುಗಳ ಸರಬರಾಜು ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ" ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವಾಲಯದ ಕಾರ್ಯದರ್ಶಿ ಪವನ್ ಕುಮಾರ್ ಅಗರ್‌ವಾಲ್ ತಿಳಿಸಿದ್ದಾರೆ.
ಕೋವಿಡ್-19 ಅನ್ನು ಎದುರಿಸಲು ಉತ್ಪಾದನಾ ಘಟಕಗಳಿಂದ ಹಿಡಿದು ಚಿಲ್ಲರೆ ಮಾರಾಟ ಮಳಿಗೆಗಳವರೆಗೆ ಸಂಪೂರ್ಣ ಪೂರೈಕೆ ಸರಪಳಿಯಲ್ಲಿ ಸರಿಯಾದ ನಿಯಮಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಕಡಿವಾಣ ಹಾಕಲಿದೆ.


Click it and Unblock the Notifications