ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಆ ದೇಶದ ಪೂರ್ವ ಭಾಗದ ಮೇಲೆ ಮರುಭೂಮಿಯ ಮಿಡತೆಗಳ ದಾಳಿ ಆ ಪರಿಯಲ್ಲಿ ಆಗಿದೆ. ಕಳೆದ ಶುಕ್ರವಾರ ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ ನಂತರ ನಂತರ ಪ್ರಧಾನಿ ಇಮ್ರಾನ್ ಖಾನ್ ತುರ್ತು ಪರಿಸ್ಥಿತಿಯ ಘೋಷಣೆ ಮಾಡಿದ್ದಾರೆ.
ಎರಡು ದಶಕಗಳ ನಂತರ ಭೀಕರವಾದ ಮಿಡತೆಗಳ ದಾಳಿಯನ್ನು ಅನುಭವಿಸುತ್ತಿದ್ದೇವೆ. ಈ ಆತಂಕವನ್ನು ಎದುರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ಸಚಿವ್ ಫಿರ್ದೋಸ್ ಅಷಿಕ್ ಅವಾನ್ ಶನಿವಾರ ತಿಳಿಸಿದ್ದಾರೆ.
ಈ ಮರುಭೂಮಿಯ ಮಿಡತೆಗಳು ದೊಡ್ಡ ಸಸ್ಯಾಹಾರಿಗಳು. ನೋಡುವುದಕ್ಕೆ ಹಸಿರು ಮಿಡತೆಗಳ ರೀತಿ ಕಾಣುತ್ತವೆ. ಕಳೆದ ಜೂನ್ ತಿಂಗಳಲ್ಲಿ ಇರಾನ್ ನಿಂದ ಪಾಕಿಸ್ತಾನಕ್ಕೆ ಬಂದಿವೆ. ಈಗಾಗಲೇ ಹತ್ತಿ, ಗೋಧಿ, ಜೋಳ ಮತ್ತಿತರ ಬೆಳೆಗಳನ್ನು ನಾಶಪಡಿಸಿವೆ. ಪೂರಕವಾದ ವಾತಾವರಣ, ಸರ್ಕಾರದ ವಿಳಂಬ ಸ್ಪಂದನೆಯ ಕಾರಣದಿಂದಾಗಿ ಈ ಮಿಡತೆಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿ, ಬೆಳೆ ಇರುವ ಪ್ರದೇಶಗಳ ಮೇಲೆ ದಾಳಿ ನಡೆಸಿವೆ.

ಇವುಗಳ ದಾಳಿ ಅದೆಂಥ ದೊಡ್ಡ ಪರಿಯಲ್ಲಿ ವಿನಾಶಕಾರಿ ಅಂದರೆ, ಪಾಕಿಸ್ತಾನದಲ್ಲಿ ಈಗ ಆಹಾರ ಅಭದ್ರತೆ ಕಾಡುತ್ತಿದೆ. ರಾಷ್ಟ್ರೀಯ ಆಹಾರ ಸುರಕ್ಷತಾ ಸಚಿವ ಮಖ್ದೂಮ್ ಖುಸ್ರೋ ಭಕ್ತಿಯಾರ್ ಮಾತನಾಡಿ, ಮಿಡತೆಗಳು ಈಗ ಪಾಕಿಸ್ತಾನ- ಭಾರತದ ಗಡಿಯಲ್ಲಿ ಇದೆ. ಇದಕ್ಕೂ ಮುನ್ನ ಸಿಂಧ್ ಮತ್ತು ಬಲೂಚಿಸ್ತಾನ್ ನಲ್ಲಿ ಇದ್ದವು ಎಂದಿದ್ದಾರೆ.
ಮೂರು ಲಕ್ಷ ಎಕರೆ ಪ್ರದೇಶದಲ್ಲಿ ಈ ಮಿಡತೆಗಳ ವಿರುದ್ಧ ಕಾರ್ಯಾಚರಣೆ ಮಾಡಲಾಗಿದೆ. ಇಪ್ಪತ್ತು ಸಾವಿರ ಹೆಕ್ಟೇರ್ ನಲ್ಲಿ ಔಷಧ ಸಿಂಪಡಣೆ ಮಾಡಲಾಗಿದೆ. ಬೆಳೆ ಉಳಿಸಿಕೊಳ್ಳುವ ಸಲುವಾಗಿ ವಿವಿಧ ಸಂಘ- ಸಂಸ್ಥೆಗಳು, ಸಶಸ್ತ್ರ ಪಡೆ ಹೀಗೆ ವಿವಿಧ ಪಡೆಗಳು ಕಾರ್ಯಾಚರಣೆಗೆ ಇಳಿದಿವೆ.
ಇಪ್ಪತ್ತೇಳು ವರ್ಷಗಳ ಹಿಂದೆ ಪಾಕಿಸ್ತಾನ ಇದೇ ರೀತಿಯಲ್ಲಿ ಮಿಡತೆಗಳ ದಾಳಿ ಎದುರಿಸಿತ್ತು. ಈ ಬಾರಿ ಭಾರತ ಮತ್ತು ಪೂರ್ವ ಆಫ್ರಿಕಾ ದೇಶಗಳ ಮೇಲೂ ಈ ಮಿಡತೆಗಳ ಪರಿಣಾಮ ಆಗುತ್ತಿದೆ.
ಭಾನುವಾರದಂದು ಸೋಮಾಲಿಯಾದಲ್ಲೂ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಸೋಮಾಲಿಯಾ ಜನರ ಮತ್ತು ಸಾಕು ಪ್ರಾಣಿಗಳ ಆಹಾರ ಮೂಲವೇ ಆತಂಕದಲ್ಲಿ ಇದೆ ಎಂದು ಅಲ್ಲಿನ ಕೃಷಿ ಸಚಿವಾಲಯ ಹೇಳಿಕೆ ನೀಡಿದೆ. ಈ ಮಿಡತೆಗಳು ಭಾರೀ ಪ್ರಮಾಣದಲ್ಲಿ ಕೃಷಿ ವ್ಯವಸ್ಥೆಗೆ ನಷ್ಟ ಉಂಟು ಮಾಡಿವೆ. ಹಸಿವೆ ತಂದೊಡ್ಡುತ್ತಿದೆ.
ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಪಾಕಿಸ್ತಾನ ಭಾಗದಲ್ಲಿ ಕಾಣಿಸಿಕೊಂಡಿರುವ ಮಿಡತೆಯ ಪರಿಣಾಮ ಪಂಜಾಬ್ ಮೇಲೆ ಹೇಗೆ ಆಗಬಹುದು ಎಂದು ವಿವರಿಸಿದ್ದರು.
ಇತ್ತ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವ ಪಾಕಿಸ್ತಾನ ಮಿಡತೆಗಳಿಂದ ಸೃಷ್ಟಿಯಾಗಿರುವ ಬಿಕ್ಕಟಿನಿಂದ ಆಚೆ ಬರುವುದಕ್ಕೆ ಏಳುನೂರಾ ಮೂವತ್ತು ಕೋಟಿ ಪಾಕಿಸ್ತಾನಿ ರುಪಾಯಿಗಳನ್ನು ಮೀಸಲಿಟ್ಟಿದೆ. ಈಗಾಗಲೇ ಸಿಂಧ್, ದಕ್ಷಿಣ ಪಂಜಾಬ್ ಮತ್ತು ಖೈಬರ್ ಪಂಖ್ತುಖ್ವಾದಲ್ಲಿ ಲಕ್ಷಾಂತರ ರುಪಾಯಿ ಬೆಳೆ ನಷ್ಟ ಆಗಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.


Click it and Unblock the Notifications