ಬೆಂಗಳೂರು, ಏಪ್ರಿಲ್ 26: ಏಪ್ರಿಲ್ 26 ರಂದು ಲೋಕಸಭಾ ಚುನಾವಣೆಗೆ ಮತದಾನ ಮಾಡಿ ತಮ್ಮ ಬೆರಳಿಗೆ ಶಾಯಿ ಹಾಕಿಸಿಕೊಳ್ಳುವ ನಾಗರಿಕರಿಗೆ ಬೆಂಗಳೂರಿನ ಹಲವಾರು ಹೋಟೆಲ್‌ಗಳು ರಿಯಾಯಿತಿಗಳು, ಉಚಿತ ಆಹಾರ ಮತ್ತು ವಿವಿಧ ಕೊಡುಗೆಗಳನ್ನು ನೀಡಲು ಮುಂದಾಗಿವೆ.
ಈ ಮೂಲಕ ನಗರದ ಹೊಟೇಲ್ ಉದ್ಯಮಿಗಳು ಮತದಾರರನ್ನು ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ಕೊಡುಗೆಯನ್ನು ಮತದಾನ ದಿನ ಮಾತ್ರ ಆಯ್ದ ಹೋಟೆಲ್‌ಗಳು ನೀಡಿವೆ.

ನಗರದಲ್ಲಿ ಯಾವತ್ತೂ ಮತದಾನದ ಪ್ರಮಾಣ ಉತ್ತಮವಾಗಿರದೇ ಇರುವುದರಿಂದ ಮತದಾನಕ್ಕೆ ಉತ್ತೇಜನ ನೀಡಲು ಬಯಸುವುದಾಗಿ ಹೋಟೆಲ್ ಮಾಲೀಕರು ಹೇಳಿದ್ದಾರೆ. "ನಾವು ಮತದಾರರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಅದಕ್ಕಾಗಿಯೇ ನಾವು ಈ ಆಲೋಚನೆಯನ್ನು ಮಾಡಿದ್ದೇವೆ" ಎಂದು ನೃಪತುಂಗ ರಸ್ತೆಯಲ್ಲಿರುವ ಹೋಟೆಲ್ ನಿಸರ್ಗ ಗ್ರ್ಯಾಂಡ್‌ನ ಮಾಲೀಕ ಎಸ್‌ಪಿ ಕೃಷ್ಣರಾಜ್ ಹೇಳಿದ್ದಾರೆ.
ಮತದಾನದ ನಂತರ ಹೋಟೆಲ್‌ಗೆ ಭೇಟಿ ನೀಡುವ ಎಲ್ಲಾ ಮತದಾರರಿಗೆ ಉಚಿತ ಖಾಲಿ ದೋಸೆ, ಲಡ್ಡು ಮತ್ತು ಜ್ಯೂಸ್ ಅನ್ನು ನೀಡುತ್ತೇವೆ ಎಂದು ನಿಸರ್ಗ ಗ್ರ್ಯಾಂಡ್ ಘೋಷಿಸಿದೆ. ಕೃಷ್ಣರಾಜ್ ಅವರು "2018 ರಿಂದ ಪ್ರತಿ ಚುನಾವಣೆಯ ಸಮಯದಲ್ಲಿ ಉಚಿತ ಆಹಾರವನ್ನು ನೀಡುತ್ತಿದ್ದೇವೆ. ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಮ್ಮನ್ನು ಭೇಟಿ ಮಾಡಿದವರು ಈ ಚುನಾವಣೆಯಲ್ಲೂ ನಾವು ಯಾವುದೇ ಆಫರ್‌ಗಳನ್ನು ನಡೆಸುತ್ತಿದ್ದೇವೆಯೇ ಎಂದು ವಿಚಾರಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ಕಳೆದ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಾಗ ನಿಸರ್ಗ ಗ್ರ್ಯಾಂಡ್‌ನಲ್ಲಿ 51,000 ಜನ ಸೇರಿದ್ದರು. ಈ ವರ್ಷ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಬುಧವಾರವಷ್ಟೇ ಹೈಕೋರ್ಟ್‌ನಿಂದ ಅನುಮತಿ ಪಡೆದಿರುವುದರಿಂದ ಇನ್ನೂ ಹಲವು ಹೋಟೆಲ್‌ಗಳು ಗುರುವಾರದೊಳಗೆ ಇಂತಹ ಘೋಷಣೆಗಳನ್ನು ಮಾಡಬಹುದಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ (ಬಿಬಿಎಚ್‌ಎ) ಅಧ್ಯಕ್ಷ ಪಿ ಸಿ ರಾವ್ ಹೇಳಿದ್ದಾರೆ.
ಕೆಲವು ಹೋಟೆಲ್‌ಗಳು ಉಚಿತ ಆಹಾರ ನೀಡುತ್ತಿದ್ದರೆ, ಇನ್ನೂ ಅನೇಕ ಹೋಟೆಲ್‌ಗಳು ಬಿಲ್‌ನಲ್ಲಿ ರಿಯಾಯಿತಿ ನೀಡುತ್ತಿವೆ. ಶುಕ್ರವಾರದಂದು ಚುನಾವಣೆಗಳನ್ನು ಪರಿಗಣಿಸಿ ಕೆಲವು ಮಳಿಗೆಗಳು ವಾರಾಂತ್ಯದ ಮೂಲಕ ಕೊಡುಗೆಗಳನ್ನು ಮುಂದುವರಿಸಲು ನಿರ್ಧರಿಸಿವೆ. ಹೋಟೆಲ್‌ಗಳ ಹೊರತಾಗಿ, ಅನೇಕ ಬೇಕರಿಗಳು ತಮ್ಮ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿವೆ. ಬೇಗೂರಿನ ಅಯ್ಯಂಗಾರ್ಸ್ ಓವನ್ ಫ್ರೆಶ್ ತಮ್ಮ ಉತ್ಪನ್ನಗಳ ಮೇಲೆ ಶಾಯಿ ಹಾಕಿದ ಬೆರಳುಗಳನ್ನು ತೋರಿಸುವವರಿಗೆ 10% ರಿಯಾಯಿತಿಯನ್ನು ಘೋಷಿಸಿದೆ.
"ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಮತದಾನವನ್ನು ಹಬ್ಬದಂತೆ ಆಚರಿಸಬೇಕು. ಇದು ನಮ್ಮ ಮತದಾನದ ಹಬ್ಬವನ್ನು ಆಚರಿಸುವ ವಿಧಾನವಾಗಿದೆ ಎಂದು ಅಯ್ಯಂಗಾರ್ ಓವನ್ ಫ್ರೆಶ್ ಸಂಸ್ಥಾಪಕ ಜಿ ಕೆ ಪ್ರಮೋದ್ ಹೇಳಿದ್ದಾರೆ.
ಹೋಟೆಲ್‌ಗಳು ಬಿರುಸಿನ ವ್ಯಾಪಾರವನ್ನು ನಿರೀಕ್ಷಿಸುತ್ತಿವೆ. ಮತದಾನದ ದಿನದಂದು ಪಕ್ಷದ ಕಾರ್ಯಕರ್ತರು ಮತ್ತು ಅಧಿಕಾರಿಗಳು ಫೀಲ್ಡ್‌ನಲ್ಲಿ ಇರುವುದರಿಂದ ವ್ಯಾಪಾರದಲ್ಲಿ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಅನೇಕ ಹೋಟೆಲ್‌ಗಳು ಹೆಚ್ಚಿನ ಸಂಖ್ಯೆಯ ಆಹಾರ ಪ್ಯಾಕೆಟ್‌ಗಳನ್ನು ಮಾರಾಟ ಮಾಡಲು ನಿರೀಕ್ಷಿಸುತ್ತಿವೆ. ರಜೆ ದಿನವಾದ್ದರಿಂದ ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಹೆಚ್ಚಿನ ಕುಟುಂಬಗಳು ಬರುವ ನಿರೀಕ್ಷೆಯಲ್ಲಿ ಹೊಟೇಲ್ ಉದ್ಯಮಿಗಳು ಇದ್ದಾರೆ.


Click it and Unblock the Notifications