"ಮೊನ್ನೆ ಕೇಳಿಕೊಂಡು ಹೋಗಿದ್ನಲ್ಲಾ, ಆ ಟೀವಿ ಸ್ಟಾಕ್ ಬಂತಾ? ಇನ್ನು ಮೂರು ದಿನ ಬಿಟ್ಟು ಬನ್ನಿ, ಆ ಮೊಬೈಲ್ ಫೋನ್ ಬಂದಿರುತ್ತೆ ಅಂದರಲ್ಲಾ ಬಂತಾ?" -ಕಳೆದ ಹತ್ತು ದಿನದಿಂದ ಭಾರತದಲ್ಲಿ ಹಲವಾರು ಮಳಿಗೆಗಳಲ್ಲಿ ಮೊಬೈಲ್ ಫೋನ್, ಟೀವಿ ಮಾರಾಟವು ಮುಂಚಿನ ಭರಾಟೆಯಿಂದ ಆಗುತ್ತಿಲ್ಲ.
ಶಿಯೋಮಿ, ಟಿಸಿಎಲ್, ರಿಯಾಲ್ಮಿ ಬ್ರ್ಯಾಂಡಿನ ಉತ್ಪನ್ನಗಳು ಸಾಮಾನ್ಯವಾಗಿ ಯಾವ ಪ್ರಮಾಣದಲ್ಲಿ ಗೋದಾಮಿನಿಂದ ಮಳಿಗೆಗಳಿಗೆ ಹೋಗುತ್ತವೋ ಅದರ 10ರಿಂದ 20 ಪರ್ಸೆಂಟ್ ಮಾತ್ರ ಮಾರಾಟಕ್ಕೆ ಕಳುಹಿಸಲಾಗುತ್ತಿದೆ. ಚೀನಾದಲ್ಲಿ ವ್ಯಾಪಿಸಿರುವ ಕೊರೊನಾದ ಕಾರಣಕ್ಕೆ ಉತ್ಪಾದನೆಗೆ, ಆ ಮೂಲಕ ಸರಬರಾಜಿಗೆ ಭರ್ತಿ ಪೆಟ್ಟು ಬಿದ್ದಿದೆ.
ಐಫೋನ್ XR, 7ಕ್ಕೆ ಯಾವುದೇ ಸಮಸ್ಯೆಯಾಗಿಲ್ಲ
ಹಾಗಂತ ಚೀನಾ ಮೂಲದ ಕಂಪೆನಿಗಳಷ್ಟೇ ಅಲ್ಲ, ಅಮೆರಿಕ ಮೂಲದ ಚೀನಾದಲ್ಲಿ ಉತ್ಪಾದನೆ ಆಗುವ ಆಪಲ್ ಉತ್ಪನ್ನಗಳು ಸಹ ದೊರೆಯುತ್ತಿಲ್ಲ ಭಾರತದಲ್ಲಿ ಹಲವು ಕಡೆ ಐಫೋನ್ 11ರ ಸರಣಿ ಸಿಗುತ್ತಿಲ್ಲ. ಅದೇ ರೀತಿ ಆಪಲ್ ವಾಚ್ ಸಹ ಖಾಲಿ ಖಾಲಿ. ಏಕೆಂದರೆ, ಅವುಗಳ ಉತ್ಪಾದನೆ ಆಗುತ್ತಿದ್ದದ್ದು ಚೀನಾದಲ್ಲಿ. ಅವು 'ಮೇಡ್ ಇನ್ ಚೀನಾ' ಪ್ರಾಡಕ್ಟ್ ಗಳು. ಭಾರತದಲ್ಲೇ ತಯಾರಾಗುವ ಐಫೋನ್ XR, 7ಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಟಿಸಿಎಲ್, ಶಿಯೋಮಿ ಟೀವಿಗಳು ಪೂರೈಕೆ ಆಗದ ಕಾರಣಕ್ಕೆ ಮಳಿಗೆಗಳಲ್ಲಿ ಖರೀದಿಗೆ ಸಿಗುತ್ತಿಲ್ಲ. ಅಂದ ಹಾಗೆ ಏರ್ ಕಂಡೀಷನರ್ ಗಳ ಮಾರುಕಟ್ಟೆಗೆ ಶಿಯೋಮಿ ಕಾಲಿಡಬೇಕಿತ್ತು. ಅದನ್ನು ಕೆಲವು ವಾರಗಳ ಕಾಲ ಮುಂದಕ್ಕೆ ಹಾಕಿದೆ.
ಸ್ಮಾರ್ಟ್ ಫೋನ್, ಏಸಿಗಳ ಬೆಲೆಯಲ್ಲಿ 5ರಿಂದ 10 ಪರ್ಸೆಂಟ್ ಏರಿಕೆ
ನಾಲ್ಕನೇ ಅತಿ ದೊಡ್ಡ ಸ್ಮಾರ್ಟ್ ಫೋನ್ ಬ್ರ್ಯಾಂಡ್ ರಿಯಾಲ್ಮಿಗೆ C3 ಮತ್ತು 5i ಸ್ಮಾರ್ಟ್ ಫೋನ್ ಮಾಡೆಲ್ ಗಳನ್ನು ಪೂರೈಸುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಚಿಲ್ಲರೆ ಮಾರಾಟಗಾರರು ಹೇಳುವ ಪ್ರಕಾರ, ಐಫೋನ್, ಮ್ಯಾಕ್ ಬುಕ್ ಕಂಪ್ಯೂಟರ್ ಮತ್ತು ಆಪಲ್ ವಾಚ್ ಗಳಿಗೆ ಈ ಮುಂಚಿನಂತೆ ಆಫ್ ಲೈನ್ ಸ್ಟೋರ್ ಗಳಲ್ಲಿ ರಿಯಾಯಿತಿ ನೀಡುತ್ತಿಲ್ಲ. ಚೀನಾದ ಘಟಕಗಳು ಕಾರ್ಯ ನಿರ್ವಹಿಸುವುದಕ್ಕೆ ಆರಂಭಿಸಿದರೂ ಒಟ್ಟು ಸಾಮರ್ಥ್ಯದ 35ರಿಂದ 50 ಪರ್ಸೆಂಟ್ ನಷ್ಟು ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆ ಕಾರಣಕ್ಕೆ ಕೆಲವು ಬಿಡಿ ಭಾಗಗಳ ಬೆಲೆ ಈಗಾಗಲೇ ಏರಿಕೆ ಆಗಿದೆ. ತಯಾರಕರು ಟೀವಿ ಮಾರಾಟ ಬೆಲೆಯನ್ನು ಏರಿಕೆ ಮಾಡಬೇಕಾಗಿದೆ. ಕೆಲವು ಸ್ಮಾರ್ಟ್ ಫೋನ್ ಮತ್ತು ಏಸಿಗಳ ಬೆಲೆಯನ್ನು ಈ ತಿಂಗಳಿನಿಂದಲೇ 5ರಿಂದ 10 ಪರ್ಸೆಂಟ್ ಏರಿಕೆ ಮಾಡಲಾಗಿದೆ.
ಮುಂದಿನ ತಿಂಗಳಿಂದ "ದಾಸ್ತಾನು ಇಲ್ಲ"
ಹಲವು ಬ್ರ್ಯಾಂಡ್ ಗಳದು ಪೂರೈಕೆಯೇ ಸಮಸ್ಯೆಯಾಗಿದೆ. ಯಾವಾಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಬಹುದು ಎಂಬ ಅಂದಾಜು ಸಹ ಇಲ್ಲ. ಒಂದು ವೇಳೆ ಈಗಿನ ಸ್ಥಿತಿಯೇ ಮುಂದುವರಿದರೆ ಮುಂದಿನ ತಿಂಗಳಿಂದ "ದಾಸ್ತಾನು ಇಲ್ಲ" ಎಂಬಂಥ ಸನ್ನಿವೇಶದಲ್ಲಿ ಇರುತ್ತೇವೆ. ರಿಯಾಲ್ಮಿ, ಟಿಸಿಎಲ್ ಮತ್ತು ಶಿಯೋಮಿಯಂಥ ಬ್ರ್ಯಾಂಡ್ ಗಳು ನಮಗೆ ಸಾಮಾನ್ಯವಾಗಿ ಎಷ್ಟು ಬೇಡಿಕೆ ಬರುತ್ತದೋ ಅದರ 10ರಿಂದ 20 ಪರ್ಸೆಂಟ್ ಮಾತ್ರ ಪೂರೈಕೆಯಾಗುತ್ತಿದೆ ಎಂದು ಮಾರಾಟಗಾರರು ಹೇಳುತ್ತಾರೆ. ಶಿಯೋಮಿ ಇಂಡಿಯಾದ ವಕ್ತಾರರು ಮಾತನಾಡಿ, ಚೀನಾದಲ್ಲಿ ತುಂಬ ಸಮಯ ಉತ್ಪಾದನೆ ಸ್ಥಗಿತವಾಗಿತ್ತು. ಅದರ ಪರಿಣಾಮವು ಮಾರ್ಚ್ ಆರಂಭದಲ್ಲಿ ಟೀವಿ ಪೂರೈಕೆ ಮೇಲೆ ಆಗಿದೆ. ಭಾರತದಲ್ಲಿನ ಬೇಡಿಕೆ ಸರಿತೂಗಿಸಲು ನಾವು ಶ್ರಮಿಸುತ್ತಿದ್ದೇವೆ. ಸದ್ಯದಲ್ಲೇ ಪರಿಸ್ಥಿತಿ ಹತೋಟಿಗೆ ತರುತ್ತೇವೆ ಎಂದು ಹೇಳಿದ್ದೇವೆ.
ದಕ್ಷಿಣ ಕೊರಿಯಾದ ಮೇಲೂ ಕೊರೊನಾ ಎಫೆಕ್ಟ್
ಏರ್ ಕಂಡೀಷನರ್, ಇಂಪೋರ್ಟೆಡ್ ಟೀವಿ, ವಾಷಿಂಗ್ ಮಷೀನ್, ರೆಫ್ರಿಜರೇಟರ್ ಗಳು ಅಗತ್ಯ ಪ್ರಮಾಣದಲ್ಲಿ ದೊರೆಯುವುದೋ ಇಲ್ಲವೋ ಎಂಬ ಆತಂಕದಲ್ಲಿ ಭಾರತದಲ್ಲಿ ದಾಸ್ತಾನು ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಏಕೆಂದರೆ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡುವವರು ಅವಲಂಬಿತವಾಗಿರುವುದು ಚೀನಾದ ಮೇಲೆ. ಇನ್ನು ಕೊರೊನಾ ವೈರಾಣು ದಕ್ಷಿಣ ಕೊರಿಯಾದಲ್ಲೂ ವ್ಯಾಪಿಸಿರುವ ಕಾರಣಕ್ಕೆ ಅಲ್ಲಿ ಉತ್ಪಾದನೆಯಾಗುವ ಸ್ಯಾಮ್ಸಂಗ್, ಎಲ್.ಜಿ. ಉತ್ಪನ್ನಗಳ ಮೇಲೂ ಪರಿಣಾಮವಾಗಿದೆ.
ಆಪಲ್ ಮುಂಚೆಯೇ ಘೋಷಣೆ ಮಾಡಿತ್ತು
ಚೀನಾದ ಉತ್ಪಾದನಾ ವಲಯಕ್ಕೆ ಬಿದ್ದ ಹೊಡೆತದ ಪರಿಣಾಮದ ಬಗ್ಗೆ ಮೊದಲು ತಿಳಿಸಿದ್ದು ಆಪಲ್. ಕಳೆದ ತಿಂಗಳು ಈ ಬಗ್ಗೆ ತಿಳಿಸಿದ ಆಪಲ್, ಚೀನಾದಲ್ಲಿ ಉತ್ಪಾದನೆ ನಿರೀಕ್ಷೆಗಿಂತ ಕಡಿಮೆ ಆಗಿರುವುದದಿಂದ ತೊಂದರೆ ಆಗಿದೆ ಎಂದು ತಿಳಿಸಿತ್ತು. ಆಪಲ್ ನ ಎಕ್ಸ್ ಕ್ಲೂಸಿವ್ ಸ್ಟೋರ್ ನ ವಿತರಕರು ಮಾತನಾಡಿ, ಏಪ್ರಿಲ್ ಹೊತ್ತಿಗೆ ಪೂರೈಕೆ ಸಹಜ ಸ್ಥಿತಿಗೆ ಬರಬಹುದು. ಆ ಹೊತ್ತಿಗೆ ಉತ್ಪನ್ನವನ್ನು ಅಮೆರಿಕ ಮತ್ತು ಯುರೋಪ್ ನಿಂದ ಬರುವ ಹಾಗೆ ಯೋಜನೆ ಮಾಡಲಾಗಿದೆ. ಕಳೆದ ವಾರ ವ್ಯಾಪಾರ 50% ಇಳಿಮುಖವಾಗಿದೆ. ಮಾರ್ಚ್ ನಲ್ಲಿ ಇನ್ನಷ್ಟು ಸಮಸ್ಯೆಯಾಗಬಹುದು ಎಂದು ಹೇಳಿದ್ದಾರೆ.


Click it and Unblock the Notifications