ನೀವು ಈಗಾಗಲೇ ಹೆಸರಾಂತ ಡೆಲಿವರಿ ಪ್ಲಾಟ್ ಫಾರ್ಮ್ ಗಳಾದ ಬಿಗ್ ಬ್ಯಾಸ್ಕೆಟ್ ಅಥವಾ ಅಮೆಜಾನ್ ಪ್ಯಾಂಟ್ರಿಯಲ್ಲಿ ಮಾವಿನಹಣ್ಣು ಆರ್ಡರ್ ಮಾಡಿದ್ದೀರಾ? ಆದರೆ ಮಾವಿನ ಹಣ್ಣನ್ನು ಲ್ಯಾಂಬೋರ್ಗಿನಿ ಕಾರಿನಲ್ಲಿ ಡೆಲಿವರಿ ಮಾಡುವುದನ್ನು ಕೇಳಿದ್ದೀರಾ? ದುಬೈನಲ್ಲಿ ಸೂಪರ್ ಮಾರ್ಕೆಟ್ ವೊಂದು ಲಾಂಬೋರ್ಗಿನಿಯಲ್ಲಿ ಡೆಲಿವರಿ ನೀಡುತ್ತಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ದುಬೈನಲ್ಲಿರುವ ಪಾಕಿಸ್ತಾನದ ಸೂಪರ್ ಮಾರ್ಕೆಟ್ ಮ್ಯಾನೇಜಿಂಗ್ ಡೈರೆಕ್ಟರ್ ಮೊಹಮ್ಮದ್ ಜೆಹನ್ ಜೆಬ್ ಮಾತನಾಡಿ, ರಾಜನು ರಾಜನ ರೀತಿಯಲ್ಲೇ ಪ್ರಯಾಣಿಸಬೇಕು ಎನ್ನುತ್ತಾರೆ. ಜೆಹನ್ ಜೆಬ್ ಅವರು ಖರೀದಿದಾರರ ಮನೆ ಬಾಗಿಲಿಗೇ ಮಾವಿನ ಹಣ್ಣನ್ನು ತಲುಪಿಸುತ್ತಾರೆ ಹಾಗೂ ಅವರನ್ನು ತಮ್ಮ ಹಸಿರು ಲ್ಯಾಂಬೋರ್ಗಿನಿಯಲ್ಲಿ ಒಂದು ಸುತ್ತು ಹಾಕಿಸುತ್ತಾರೆ.
ಕನಿಷ್ಠ ನೂರು ದಿರ್ಹಾಮ್ ಆರ್ಡರ್
ಈ ಹೊಸ ಡೆಲಿವರಿ ಬಗೆಯನ್ನು ಪಾಕಿಸ್ತಾನ ಸೂಪರ್ ಮಾರ್ಕೆಟ್ ಕಳೆದ ವಾರ ಫೇಸ್ ಬುಕ್ ಪುಟದಲ್ಲಿ ಶುರು ಮಾಡಿತು. ನಮ್ಮದು ಹೊಸ ಡೆಲಿವರಿ ವಾಹನ. ನಿಮ್ಮ ಮನೆ ಬಾಗಿಲಿಗೆ ಲ್ಯಾಂಬೋರ್ಗಿನಿಯಲ್ಲಿ ಡೆಲಿವರಿ ಮಾಡಲಾಗುತ್ತದೆ. ಜತೆಗೆ ಉಚಿತವಾಗಿ ಗ್ರಾಹಕರಿಗೆ ಸುತ್ತು ಹಾಕಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಗ್ರಾಹಕರು ಕನಿಷ್ಠ ನೂರು ದಿರ್ಹಾಮ್ ನಷ್ಟು ಹಣ್ಣು ಆರ್ಡರ್ ಮಾಡಬೇಕು.
ಮಕ್ಕಳಿಗಾಗಿಯೇ ರೂಪಿಸಿದ್ದು
ಈ ಆಲೋಚನೆಯಿಂದ ಜನರ ಮುಖದ ಮೇಲೊಂದು ನಗು ಮೂಡಿಸಿತು ಹಾಗೂ ಇದರಲ್ಲೇನೋ ವಿಶೇಷ ಇದೆ ಎನಿಸಿತು ಎನ್ನುತ್ತಾರೆ ಜೆಹನ್ ಜೆಬ್. ಕೊರೊನಾ ಕಾರಣಕ್ಕೆ ಮನೆಯಲ್ಲಿ ಇರುವ ಮಕ್ಕಳಿಗಾಗಿಯೇ ಇದನ್ನು ರೂಪಿಸಿದ್ದು. ಇದರಿಂದ ಅವರು ಹೆಚ್ಚು ಖುಷಿಪಡುತ್ತಿದ್ದಾರೆ. ಜತೆಗೆ ವಯಸ್ಕರಿಗೂ ಥ್ರಿಲ್ ಇದೆ ಎಂದು ಹೇಳುತ್ತಾರೆ.
ದಿನದಲ್ಲಿ ಗರಿಷ್ಠ ಹನ್ನೆರಡು ಆರ್ಡರ್
ಒಂದು ಆರ್ಡರ್ ಗೆ ಒಂದು ಗಂಟೆಗಿಂತ ಸ್ವಲ್ಪ ಹೆಚ್ಚು ಸಮಯ ಹಿಡಿಸುತ್ತದೆ. ಒಂದು ದಿನಕ್ಕೆ ಏಳರಿಂದ ಎಂಟು ಹೋಮ್ ಡೆಲಿವರಿ ಮಾಡ್ತೀವಿ. ಕೆಲವು ಸಲ ಆ ಸಂಖ್ಯೆ ಹನ್ನೆರಡರ ತನಕ ಹೋಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನು ಕಾರಿನಲ್ಲಿ ಸುತ್ತು ಹಾಕಿದ ವಿಡಿಯೋಗಳನ್ನು ಇಂಟರ್ ನೆಟ್ ನಲ್ಲಿ ಹಾಕುತ್ತಿರುವ ಗ್ರಾಹಕರು, ತಮ್ಮ ಖುಷಿ ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications