"ಬಾಯ್ಕಾಟ್ ಚೀನಾ ಉತ್ಪನ್ನಗಳು" ಎಂಬ ಧ್ವನಿಗೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಇಂಡಿಯಾದ (ಎಂಎಸ್ ಐ) ಅಧ್ಯಕ್ಷ ಆರ್.ಸಿ. ಭಾರ್ಗವ ಕೆಲವು ಮಹತ್ವದ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರು ಪ್ರಸ್ತಾವ ಮಾಡಿರುವ ಪ್ರಮುಖಾಂಶಗಳು ಹೀಗಿವೆ.
* ಚೀನಾ ಉತ್ಪನ್ನಗಳನ್ನು ಬೇಡ ಅನ್ನಬೇಕಾದರೆ ಭಾರತದಲ್ಲಿ ಉತ್ಪಾದನೆ ಸ್ಪರ್ಧಾತ್ಮಕ ಬೆಲೆಗೆ, ವ್ಯಾಪಕವಾಗಿ ಎಲ್ಲರನ್ನೂ ತಲುಪುವಂತೆ ಆಗಬೇಕು. ಆದರೆ ನೆನಪಿಟ್ಟುಕೊಳ್ಳಬೇಕು, ನೆರೆಯ ದೇಶದ ಉತ್ಪನ್ನಗಳು ಬೇಡ ಅನ್ನೋದಾದರೆ ಇಲ್ಲಿನ ಸರಕಿಗೆ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ.
* ದೀರ್ಘಾವಧಿ ಕಾಲದಿಂದ ಯಾವುದನ್ನಾದರೂ ಆಮದು ಮಾಡಿಕೊಳ್ಳುವುದು ಯಾರ ಪಾಲಿನ ವಾಣಿಜ್ಯ ಹಿತಾಸಕ್ತಿ ಆಗಿರುವುದಿಲ್ಲ. ಭಾರತದಲ್ಲಿ ಆ ವಸ್ತು ಸಿಗುತ್ತಿರುವುದಿಲ್ಲ ಅಥವಾ ಬೆಲೆ- ಗುಣಮಟ್ಟದ ವಿಷಯ ಆಗಿರುತ್ತದೆ.
* ಯಾವುದೇ ಉತ್ಪನ್ನವನ್ನು ಆಮದು ಮಾಡಿಕೊಳ್ಳುತ್ತಾ ಕಾಲಾಂತರದಲ್ಲಿ ದುಬಾರಿ ಆಗುತ್ತಾ ಹೋಗುತ್ತದೆ. ಅದರಲ್ಲೂ ರುಪಾಯಿ ಮೌಲ್ಯ ಕುಸಿಯುತ್ತಾ ಬೆಲೆಯೂ ಹೆಚ್ಚಾಗುತ್ತದೆ. ಉದಾಹರಣೆ, ಹತ್ತು ವರ್ಷದ ಹಿಂದಿನಿಂದ ಒಂದು ಉತ್ಪನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದಲ್ಲಿ ಅದರ ಇಂದಿನ ಬೆಲೆ 60- 70 ಪರ್ಸೆಂಟ್ ಹೆಚ್ಚಾಗಿರುತ್ತದೆ.
* ಆದ್ದರಿಂದ ಇದರಲ್ಲಿ ಯಾರ ವಾಣಿಜ್ಯ ಹಿತಾಸಕ್ತಿಯೂ ಇರಲ್ಲ. ಒಂದು ವೇಳೆ ಆಮದು ಮುಂದುವರಿಸಿದ್ದರೆ ಅದಕ್ಕೆ ಕಾರಣ ಆಯ್ಕೆಗಳು ಕಡಿಮೆ ಇರುತ್ತದೆ ಎಂಬುದಕ್ಕಷ್ಟೇ ಆಗಿರುತ್ತದೆ.

ಭಾರತದಲ್ಲೇ ಸ್ಪರ್ಧಾತ್ಮಕ ಬೆಲೆಗೆ ತಯಾರಾಗಬೇಕು
* ಈಗ ವ್ಯಕ್ತ ಆಗುತ್ತಿರುವ ಭಾವನೆ ಅನುಸಾರ ಉತ್ತರ ನೀಡಬೇಕು ಅಂದರೆ, ಭಾರತದ ಉತ್ಪನ್ನಗಳನ್ನು ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ, ಇನ್ನಷ್ಟು ವ್ಯಾಪಕವಾಗಿ, ವಿಸ್ತೃತವಾಗಿ ದೊರೆಯುವಂತೆ ಮಾಡಬೇಕು. ಪ್ರಧಾನಮಂತ್ರಿ ಮೋದಿ ಅವರು ಹೇಳುತ್ತಿರುವ ಆತ್ಮನಿರ್ಭರ್ ಅಂದರೆ ಇದೇ. ಒಂದು ವೇಳೆ ಹೆಚ್ಚು ಉತ್ಪನ್ನಗಳನ್ನು ಭಾರತದಲ್ಲೇ ಸ್ಪರ್ಧಾತ್ಮಕ ಬೆಲೆಗೆ ಮಾಡಲು ಆರಂಭಿಸಿದರೆ ಜನರು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುತ್ತಾರೆ.
* ಈಗ ಭಾರತ- ಚೀನಾ ಗಡಿಯಲ್ಲಿ ಆಗುತ್ತಿರುವ ಬೆಳವಣಿಗೆಗೆ ಜನರಲ್ಲಿ ಸಹಜವಾಗಿ ಚೀನಾ ವಿರೋಧಿ ಭಾವನೆ ವ್ಯಕ್ತ ಆಗುತ್ತಿದೆ. ಇದು ನಮಗೆ ಪಾಕಿಸ್ತಾನದ ಜತೆಗೂ ಆಗಿದೆ. ಆದರೆ ಇದು ನೀತಿ ಆಗಿಲ್ಲ. ನೀತಿ ನಿರೂಪಕರು ಇದನ್ನು ನೀತಿಯನ್ನಾಗಿ ಮಾಡುವ ಅಥವಾ ಮಾಡದಿರುವ ಮುನ್ನ ಎಚ್ಚರಿಕೆಯಿಂದ ಯೋಚಿಸಬೇಕು. ಜನಪ್ರಿಯ ಭಾವನೆಗಳಿಗೆ ಪ್ರತಿಕ್ರಿಯೆ ನೀಡಬಾರದು.
* ಯಾರಾದರೂ ಏಕೆ ಅಮದು ಮಾಡಿಕೊಳ್ಳುತ್ತಾರೆ? ಒಂದೋ ಆ ಉತ್ಪನ್ನವನ್ನು ಭಾರತದಲ್ಲಿ ಮಾಡಲ್ಲ ಅಥವಾ ಭಾರತದಲ್ಲಿ ತಯಾರಿಸಿದ ಉತ್ಪನ್ನ ವಿಪರೀತ ದುಬಾರಿ ಆಗಿರುತ್ತದೆ.
ನಮಗೆ ಅನುಕೂಲವೋ ಅಥವಾ ಅನನುಕೂಲವೋ?
* ಒಂದು ವೇಳೆ ಅಗತ್ಯ ಅಲ್ಲದ ವಸ್ತುಗಳ ಆಮದನ್ನು ನಿಲ್ಲಿಸಿದರೆ ಯಾವ ಪರಿಣಾಮವೂ ಆಗಲ್ಲ. ಒಂದು ವೇಳೆ ಅಗತ್ಯ ಇರುವಂಥದ್ದಾದರೆ ಆಮದು ನಿಲ್ಲಿಸಿದಲ್ಲಿ ಚೀನಾಗಿಂತ ಭಾರತಕ್ಕೆ ಸಮಸ್ಯೆ ಆಗುತ್ತದೆ. ಆಮದು ನಿಲ್ಲಿಸುವುದರಿಂದ ಒಟ್ಟಾರೆ ನಮ್ಮ ಕಾರ್ಖಾನೆಗೆ ಏನು ಆಗುತ್ತದೆ ಎಂಬುದನ್ನು ಗಮನಿಸಬೇಕು. ಆಮದು ನಿಲ್ಲಿಸಿದರೆ ನಮಗೆ ಅನುಕೂಲವೊ ಅಥವಾ ಅನನುಕೂಲವೋ ಎಂಬುದರ ಮೌಲ್ಯಮಾಪನ ಮಾಡಬೇಕು.
* ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಅಂತಿಮವಾಗಿ ಬೆಲೆ ನೀಡುವವರು ಯಾರು? ಗ್ರಾಹಕರು. ಯಾರು ಚಿನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಿ ಅಂತಿದ್ದಾರೋ ಅವರೇ ಕೆಲವು ಪ್ರಕರಣಗಳಲ್ಲಿ ಹೆಚ್ಚು ಹಣವನ್ನೇ ಅದೇ ಉತ್ಪನ್ನಗಳಿಗೆ ನೀಡಬೇಕಾಗುತ್ತದೆ. ಅದಕ್ಕೆ ಅವರು ಸಿದ್ಧರಿದ್ದಾರಾ?
* ಭಾವನಾತ್ಮಕವಾಗಿ ನಿರ್ಧಾರ ಮಾಡುವ ಮುನ್ನ ಚೀನಾದಿಂದ ಆಮದು ಮಾಡಿಕೊಳ್ಳುವ ಬಗ್ಗೆ ಸಾಧಕ- ಬಾಧಕಗಳನ್ನು ಅಳೆದು ನೋಡಬೇಕು.
* ಈಗ ಕಾರು ಉತ್ಪಾದನಾ ಕ್ಷೇತ್ರಕ್ಕೆ ಎರಡು ಪರ್ಸೆಂಟ್ ನಷ್ಟು ಉತ್ಪನ್ನಗಳು ಚೀನಾದಿಂದ ಬರುತ್ತಿವೆ ಅಂದುಕೊಳ್ಳಿ. ಆ ಎರಡು ಪರ್ಸೆಂಟ್ ಆಮದು ನಿಲ್ಲಿಸಿದರೆ, ನಮ್ಮಲ್ಲಿ ಕಾರು ಉತ್ಪಾದನೆ ನಿಲ್ಲುತ್ತದೆ ಅಂದರೆ ಯಾರಿಗೆ ನಷ್ಟ? ಭಾರತಕ್ಕೋ ಅಥವಾ ಇನ್ಯಾವುದಕ್ಕೆ? ನಮ್ಮಲ್ಲಿ ಎಷ್ಟು ಉದ್ಯೋಗ ನಷ್ಟವಾಗುತ್ತದೆ? ಎಷ್ಟು ಮಂದಿಯ ಜೀವನ? ಎಷ್ಟು ತೆರಿಗೆ ನಷ್ಟವಾಗುತ್ತದೆ? ಇನ್ನು ಚೀನಾ ಕಂಪೆನಿಗಳ ಕಾರು ಬುಕ್ಕಿಂಗ್ ಗಳನ್ನು ಕ್ಯಾನ್ಸಲ್ ಮಾಡಿಕೊಳ್ಳುತ್ತಿರುವುದು ಜನರ ಭಾವನಾತ್ಮಕ ಪ್ರತಿಕ್ರಿಯೆ. ಅದು ನನಗೆ ಅರ್ಥವಾಗುತ್ತದೆ ಎಂದು ಭಾರ್ಗವ ಹೇಳಿದ್ದಾರೆ.


Click it and Unblock the Notifications