ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಜುಕಿ ಶುಕ್ರವಾರ ಸಬ್ ಸ್ಕ್ರಿಪ್ಷನ್ ಪ್ರೋಗ್ರಾಂ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಸುಲಭವಾಗಿ ಕಾರಿನ ಮಾಲೀಕತ್ವ ಪಡೆಯಬಹುದು. ಇದಕ್ಕಾಗಿ ಮಾರುತಿ ಸುಜುಕಿ ಹಾಗೂ ಮೈಲ್ಸ್ ಆಟೋಮೊಟಿವ್ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ಹೈದರಾಬಾದ್ ಮತ್ತು ಪುಣೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು.
ಸಬ್ ಸ್ಕ್ರಿಪ್ಷನ್ ಅಂದರೆ ಗ್ರಾಹಕರು ಕಾರನ್ನು ತಿಂಗಳ ಲೆಕ್ಕದಲ್ಲಿ ಬಾಡಿಗೆಗೆ ಪಡೆಯುವುದು. ಆದರೆ ಕನಿಷ್ಠ ಇಷ್ಟು ಅವಧಿಗೆ ತಮ್ಮ ಬಳಿ ಇಟ್ಟುಕೊಳ್ಳಬೇಕು. ಆದರೆ ಡೌನ್ ಪೇಮೆಂಟ್, ಕಾರಿನ ನಿರ್ವಹಣೆ, ಇನ್ಷೂರೆನ್ಸ್ ನಂಥ ಜವಾಬ್ದಾರಿ ಸಬ್ ಸ್ಕ್ರಿಪ್ಷನ್ ಪ್ರೋಗ್ರಾಂನವರಿಗೆ ಇರುವುದಿಲ್ಲ. ಹೀಗೆ ಮಾಡುವುದರಿಂದ ಖರ್ಚಿನ ಹೊಣೆ ಶಾಶ್ವತವಾಗಿ ಇರುವುದಿಲ್ಲ ಹಾಗೂ ತಮಗೆ ಬೇಕಾದಂತೆ ಕಾರುಗಳನ್ನು ಬದಲಿಸಿಕೊಳ್ಳಲು ಅವಕಾಶ ಸಹ ಇದೆ.
ಎಷ್ಟು ತಿಂಗಳ ಅವಧಿ ಸಬ್ ಸ್ಕ್ರಿಪ್ಷನ್?
ಕಾರನ್ನು ಖರೀದಿ ಮಾಡದೆ ಅದರ ಅನುಕೂಲಗಳೇನು ಎಂದು ತಿಳಿಯಲು ಬಯಸುವವರಿಗೆ ಇದರಿಂದ ಒಳ್ಳೆ ಆಫರ್ ಗಳಿವೆ. ಮಾರುತಿ ಸುಜುಕಿ ಅರೆನಾದಿಂದ ಹೊಸ ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ, ಎರ್ಟಿಗಾ ಮತ್ತು ನೆಕ್ಸಾದಿಂದ ಹೊಸ ಬಲೊನೋ, ಸಿಯಾಜ್ ಮತ್ತು XL6 ಅನ್ನು 12, 18, 24, 30, 36, 42, 48 ತಿಂಗಳ ಅವಧಿಗೆ ಸಬ್ ಸ್ಕ್ರೈಬ್ ಆಗಬಹುದು.
ಗ್ರಾಹಕರಿಗೆ ಬೈಬ್ಯಾಕ್ ಆಯ್ಕೆ
ಸ್ವಿಫ್ಟ್ LXIಗೆ ತಿಂಗಳ ಎಲ್ಲ ಸಬ್ ಸ್ಕ್ರಿಪ್ಷನ್ ಶುಲ್ಕ ಸೇರಿ ಪುಣೆಯ ಗ್ರಾಹಕರು 17,600 ರುಪಾಯಿ ಪಾವತಿಸಿದರೆ, ಹೈದರಾಬಾದ್ ನಲ್ಲಿ (ಎಲ್ಲ ತೆರಿಗೆ ಸೇರಿ) 18,350 ರುಪಾಯಿ ಪಾವತಿಸುತ್ತಾರೆ. ಯಾವುದೇ ಡೌನ್ ಪೇಮೆಂಟ್ ಇರುವುದಿಲ್ಲ. ಸಬ್ ಸ್ಕ್ರಿಪ್ಷನ್ ಅವಧಿ ಮುಗಿದ ಮೇಲೆ ಗ್ರಾಹಕರಿಗೆ ಬೈಬ್ಯಾಕ್ ಆಯ್ಕೆ ಇರುತ್ತದೆ.
ಶೂನ್ಯ ಡೌನ್ ಪೇಮೆಂಟ್
ಶೂನ್ಯ ಡೌನ್ ಪೇಮೆಂಟ್, ಸಂಪೂರ್ಣ ನಿರ್ವಹಣೆ, ಇನ್ಷೂರೆನ್ಸ್, 24X7 ರಸ್ತೆ ಬದಿ ನೆರವು ಇರುತ್ತದೆ. ಇದರ ಜತೆಗೆ ಮರುಮಾರಾಟದ ಬಗ್ಗೆ ಆಲೋಚಿಸುವ ಅಗತ್ಯ ಇಲ್ಲ. ಸಬ್ ಸ್ಕ್ರಿಪ್ಷನ್ ನಲ್ಲೇ ಇವೆಲ್ಲವೂ ಒಳಗೊಂಡಿರುತ್ತದೆ. ವಾಹನ ನಿರ್ವಹಣೆ, ಇನ್ಷೂರೆನ್ಸ್ ಕವರೇಜ್, ರಸ್ತೆ ಬದಿಯ ನೆರವನ್ನು ಮಾರುತಿ ಸುಜುಕಿ ಡೀಲರ್ ಚಾನೆಲ್ ಮೂಲಕ ಮೈಲ್ಸ್ ನಿರ್ವಹಿಸುತ್ತದೆ ಎಂದು ಮೈಲ್ಸ್ ಸಿಇಒ ಸಾಕ್ಷಿ ವಿಜ್ ತಿಳಿಸಿದ್ದಾರೆ.


Click it and Unblock the Notifications