ಬೆಂಗಳೂರು, ಮಾರ್ಚ್ 28: ತಮಿಳುನಾಡಿನ ಈರೋಡ್‌ನ ಹಾಲಿ ಲೋಕಸಭಾ ಸಂಸದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಎ ಗಣೇಶಮೂರ್ತಿ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಎಂಡಿಎಂಕೆ ನಾಯಕ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಬಳಿಕ ಮಾರ್ಚ್ 24 ರಂದು ಗಂಭೀರ ಸ್ಥಿತಿಯಲ್ಲಿ ಈರೋಡ್‌ನ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಟಿಕೆಟ್‌ನಿಂದ ಆಯ್ಕೆಯಾಗಿದ್ದ ಗಣೇಶಮೂರ್ತಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತಪಾಸಣೆಯ ನಂತರ ಅವರನ್ನು ಐಸಿಯುಗೆ ದಾಖಲಿಸಲಾಯಿತು. ವೆಂಟಿಲೇಟರ್‌ನಲ್ಲಿ ಇರಿಸಲಾಯಿತು ಎಂದು ಪಿಟಿಐ ತಿಳಿಸಿದೆ. ನಂತರ ಲೋಕಸಭಾ ಸಂಸದರನ್ನು ಸಮೀಪದ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 5.05ಕ್ಕೆ ನಿಧನರಾದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನಗರಾಭಿವೃದ್ಧಿ ಮತ್ತು ವಸತಿ ಖಾತೆ ರಾಜ್ಯ ಸಚಿವ ಎಸ್ ಮುತ್ತುಸಾಮಿ, ಮೊಡಕುರಿಚಿಯ ಬಿಜೆಪಿ ಶಾಸಕ ಡಾ ಸಿ ಸರಸ್ವತಿ, ಎಐಎಡಿಎಂಕೆ ನಾಯಕ ಕೆ ವಿ ರಾಮಲಿಂಗಂ ಸೇರಿದಂತೆ ಹಲವು ರಾಜಕಾರಣಿಗಳು ಗಣೇಶಮೂರ್ತಿ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಧಾವಿಸಿದ್ದರು.
ಮೂರು ಬಾರಿ ಸಂಸದರಾಗಿದ್ದ ಗಣೇಶಮೂರ್ತಿ ಅವರು ಎಂಡಿಎಂಕೆ ಶ್ರೇಣಿಯಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈರೋಡ್ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷವು ಟಿಕೆಟ್ ನೀಡಲು ನಿರಾಕರಿಸಿದ್ದಕ್ಕಾಗಿ ಅವರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿತ್ತು. ಡಿಎಂಕೆ ಈರೋಡ್‌ನಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ತಿರುಚ್ಚಿ ಕ್ಷೇತ್ರವನ್ನು ಎಂಡಿಎಂಕೆಗೆ ನೀಡಲು ನಿರ್ಧರಿಸಿದೆ. ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಅವರ ಪುತ್ರ ದುರೈ ವೈಕೋ ಅವರನ್ನು ತಿರುಚ್ಚಿಯಿಂದ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಕೊಯಮತ್ತೂರಿಗೆ ದೌಡಾಯಿಸಿದ ವೈಕೋ, ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಗಣೇಶಮೂರ್ತಿ ಅಸಮಾಧಾನಗೊಂಡಿರುವುದನ್ನು ನಿರಾಕರಿಸಿದರು. ಸೀಟು (ಪಕ್ಷದ ಟಿಕೆಟ್) ವಿಚಾರದಲ್ಲಿ ಅವರು ಸಂತಸಗೊಂಡಿದ್ದರು. ಅವರು ನನ್ನನ್ನು ಎರಡು ಬಾರಿ ಭೇಟಿಯಾದರು. ಅವರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಅವರು ಉತ್ತಮ ಮನಸ್ಥಿತಿಯಲ್ಲಿದ್ದರು. ಅವರು ಅಂತಹ ಹೆಜ್ಜೆ ಇಟ್ಟಿದ್ದಾರೆ ಮತ್ತು ನಿಧನರಾದರು ಎಂದು ನಾನು ನಂಬಲು ಸಾಧ್ಯವಿಲ್ಲ. ನಾವು ನಮ್ಮ ಆಳವಾದ ಗೌರವವನ್ನು ಸಲ್ಲಿಸುತ್ತೇವೆ" ಎಂದು ವೈಕೋ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.


Click it and Unblock the Notifications