ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಇಡಿ ಹಲವಾರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ನರೇಶ್ ಗೋಯಲ್‌ರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಶಕ್ಕೆ ಪಡೆದುಕೊಂಡಿದೆ.
74 ವರ್ಷದ ನರೇಶ್ ಗೋಯಲ್‌ರನ್ನು ಶನಿವಾರ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಅಲ್ಲಿ ಇಡಿ ಗೋಯಲ್‌ರ ಕಸ್ಟಡಿಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದೆ. ಈ ಹಿಂದೆ ನವೆಂಬರ್ 2018 ರ ಹೊತ್ತಿಗೆ ನಷ್ಟ ಹೆಚ್ಚಳದಿಂದಾಗಿ ಜೆಟ್ ಏರ್‌ವೇಸ್ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಮಾರ್ಚ್ 2019ರಲ್ಲಿ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ನಿರ್ದೇಶಕರ ಮಂಡಳಿಯಿಂದ ಕೆಳಗಿಳಿದಿದ್ದಾರೆ.

ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್‌ನ ಗೋಯಲ್, ಅವರ ಪತ್ನಿ ಅನಿತಾ ಮತ್ತು ಏರ್‌ವೇಸ್‌ನ ಕೆಲವು ಮಾಜಿ ಕಂಪನಿ ಅಧಿಕಾರಿಗಳ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಎಫ್‌ಐಆರ್ ದಾಖಲು ಮಾಡಿದ ಬಳಿಕ ಹಣ ವರ್ಗಾವಣೆ ಪ್ರಕರಣವು ಬೆಳಕಿಗೆ ಬಂದಿದೆ.
ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್ (ಜೆಐಎಲ್) ಗೆ 848.86 ಕೋಟಿ ರೂಪಾಯಿಗಳ ಸಾಲವನ್ನು ಬ್ಯಾಂಕ್ ಮಂಜೂರು ಮಾಡಿದೆ. ಆದರೆ ಈ ಪೈಕಿ 538.62 ಕೋಟಿ ರೂಪಾಯಿ ಸಾಲ ಬಾಕಿ ಇದೆ ಎಂದು ಆರೋಪಿಸಿ ಬ್ಯಾಂಕಿನ ದೂರಿನ ಆಧಾರದಲ್ಲಿ ಎಫ್‌ಐರ್ ದಾಖಲಿಸಲಾಗಿದೆ.
ಜುಲೈ 29, 2021 ರಂದು ಖಾತೆಯನ್ನು "ವಂಚನೆ" ಎಂದು ಘೋಷಿಸಲಾಗಿದೆ ಎಂದು ಸಿಬಿಐ ಹೇಳಿತ್ತು. ಜೆಐಎಲ್‌ನ ವಿಧಿವಿಜ್ಞಾನ ಲೆಕ್ಕಪರಿಶೋಧನೆಯು "ಸಂಬಂಧಿತ ಕಂಪನಿಗಳಿಗೆ" ಒಟ್ಟು ಕಮಿಷನ್ ರೂಪದಲ್ಲಿ 1,410.41 ಕೋಟಿ ರೂಪಾಯಿಗಳನ್ನು ಸಂಸ್ಥೆ ಪಾವತಿಸಿದೆ ಎಂದು ತೋರಿಸಿದೆ ಎಂದು ಬ್ಯಾಂಕ್ ಆರೋಪಿಸಿದೆ.
"ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್ (ಜೆಐಎಲ್) ನ ಮಾದರಿ ಒಪ್ಪಂದದ ಪ್ರಕಾರ, ಜನರಲ್ ಸೆಲ್ಲಿಂಗ್ ಏಜೆಂಟ್‌ಗಳ (ಜಿಎಸ್‌ಎ) ವೆಚ್ಚಗಳನ್ನು ಜೆಐಎಲ್ ಅಲ್ಲ ಜಿಎಸ್‌ಎ ಭರಿಸಬೇಕಾಗಿತ್ತು. ಆದರೆ ಜಿಎಸ್‌ಎಗೆ ಹೊಂದಿಕೆಯಾಗದ 403.27 ಕೋಟಿ ರೂಪಾಯಿ ಮೊತ್ತದ ವಿವಿಧ ವೆಚ್ಚಗಳನ್ನು ಜೆಐಎಲ್ ಪಾವತಿಸಿದೆ ಎಂದು ಗಮನಿಸಲಾಗಿದೆ," ಎಂದು ಈಗ ಸಿಬಿಐ ಎಫ್‌ಐಆರ್‌ನ ಭಾಗವಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪ ಏನು ಹೇಳುತ್ತದೆ?
ಗೋಯಲ್ ಕುಟುಂಬದ ಇತರ ಸಿಬ್ಬಂದಿಯ ಸಂಬಳ, ಫೋನ್ ಬಿಲ್‌ಗಳು ಮತ್ತು ವಾಹನ ವೆಚ್ಚಗಳಂತಹ ವೈಯಕ್ತಿಕ ವೆಚ್ಚಗಳನ್ನು ಜೆಐಎಲ್ ಪಾವತಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇತರ ಆರೋಪಗಳ ಜೊತೆಗೆ, ಮುಂಗಡ ಮತ್ತು ಹೂಡಿಕೆ ಮಾಡುವ ಮೂಲಕ ಜೆಟ್ ಲೈಟ್ (ಇಂಡಿಯಾ) ಲಿಮಿಟೆಡ್ (ಜೆಎಲ್‌ಎಲ್) ಮೂಲಕ ಹಣವನ್ನು ಸಹ ಸೋರಿಕೆ ಮಾಡಲಾಗಿದೆ ಎಂದು ಫೊರೆನ್ಸಿಕ್ ಲೆಕ್ಕಪರಿಶೋಧನೆಯ ವೇಳೆ ಹೊರಬಿದ್ದಿದೆ.


Click it and Unblock the Notifications