ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್‌ರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು (ಆಗಸ್ಟ್ 4) ತಿರಸ್ಕರಿಸಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಡಿಎಚ್‌ಎಫ್‌ಎಲ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಾ ಕಪೂರ್ ಮಾರ್ಚ್ 2020 ರಿಂದ ಜೈಲಿನಲ್ಲಿದ್ದಾರೆ.
ಯೆಸ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 4300 ಕೋಟಿ ರುಪಾಯಿಯ ಹಗರಣದಲ್ಲಿ ಕಪೂರ್ ಹೆಸರು ಇದೆ. ಭಾರತದ ನಾಲ್ಕನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಯೆಸ್ ಬ್ಯಾಂಕ್ ನಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಹದಿಮೂರು ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಅದರಲ್ಲಿ ಕಪೂರ್ ಹೆಂಡತಿ, ಮೂವರು ಹೆಣ್ಣುಮಕ್ಕಳು ಸಹ ಇದ್ದಾರೆ.

ಸದ್ಯಕ್ಕೆ ಜೈಲಿನಲ್ಲಿ ಇರುವ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಗೆ ಸೇರಿದ ಲಂಡನ್ ನಲ್ಲಿನ 127 ಕೋಟಿ ರುಪಾಯಿ ಮೌಲ್ಯದ ವಿಲಾಸಿ ಬಂಗಲೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) 2020ರಲ್ಲೇ ವಶಕ್ಕೆ ಪಡೆದಿದೆ. ಲಂಡನ್ 77 ಸೌತ್ ಆಡ್ಲೆ ಸ್ಟ್ರೀಟ್ ನ ಈ ಅಪಾರ್ಟ್ ಮೆಂಟ್ ಮಾರ್ಕೆಟ್ ಮೌಲ್ಯ 13.5 ಮಿಲಿಯನ್ ಪೌಂಡ್ ಇದೆ. ಈ ಆಸ್ತಿಯನ್ನು 2017ರಲ್ಲಿ 9.9 ಮಿಲಿಯನ್ ಪೌಂಡ್ ಅಥವಾ 93 ಕೋಟಿ ರುಪಾಯಿಗೆ ಖರೀದಿ ಮಾಡಲಾಗಿದೆ.
ಕೊರೊನಾ ಲಾಕ್‌ಡೌನ್‌ಗೂ ಮುಂಚೆ ರಾಣಾ ಕಪೂರ್ ಬಂಧನವಾಯಿತು. ಆ ಸಂದರ್ಭದಲ್ಲಿ ಯೆಸ್ ಬ್ಯಾಂಕ್ ಗ್ರಾಹಕರಿಗೆ ತಿಂಗಳಿಗೆ ಗರಿಷ್ಠ 50 ಸಾವಿರ ರುಪಾಯಿ ಮಾತ್ರ ವಿಥ್ ಡ್ರಾ ಮಾಡಬಹುದು ಎಂದು ಆರ್ ಬಿಐ ಮಿತಿ ಹಾಕಿತ್ತು.
ಇನ್ನು ಈ ಪ್ರಕರಣದಲ್ಲಿ ಸಿಬಿಐ ಸುಮಾರು 100 ಪುಟಗಳ ಮೊದಲ ಚಾರ್ಜ್‌ಶೀಟ್ ಮಾಡಿದ್ದು ಅದರಲ್ಲಿ ಎಂಟು ಜನರ ವಿರುದ್ಧದ ಆರೋಪಗಳು ಮೋಸ, ವಂಚನೆ, ಪಿತೂರಿ, ಭ್ರಷ್ಟಾಚಾರ ಮತ್ತು ಸಾಲ ನೀಡುವ ಮಾನದಂಡಗಳ ಉಲ್ಲಂಘನೆಯನ್ನು ನಮೂದಿಸಿದೆ. ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರು ಕಪಿಲ್ ಮತ್ತು ಧೀರಜ್ ವಾಧವನ್ ಅವರೊಂದಿಗೆ ಡಿಎಚ್‌ಎಫ್‌ಎಲ್‌ಗೆ ಹೆಚ್ಚಿನ ಸಾಲವನ್ನು ನೀಡಿದ್ದಕ್ಕಾಗಿ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ವೈಯಕ್ತಿಕ ಹಿತಾಸಕ್ತಿಗಾಗಿ ಬ್ಯಾಂಕ್ ಹೆಚ್ಚಿನ ಮೌಲ್ಯದ ಸಾಲಗಳನ್ನು ವಿಸ್ತರಿಸಿದೆ ಎಂದು ಆರೋಪಿಸಲಾಗಿದೆ.


Click it and Unblock the Notifications