ಚೀನಾ ದೇಶವು ಗಡಿ ಕ್ಯಾತೆ ತೆಗೆದಿದೆ. ಭಾರತೀಯರ ರಕ್ತ ಕುದಿಯುತ್ತಿದ್ದು, ತಾವು ಬಳಸುವ ಯಾವುದೇ ಉತ್ಪನ್ನದಲ್ಲಿ 'ಮೇಡ್ ಇನ್ ಚೀನಾ' ಎಂಬುದನ್ನು ನೋಡಿದರೆ ಮತ್ತಷ್ಟು ವ್ಯಗ್ರರಾಗುತ್ತಿದ್ದಾರೆ. ಇದೀಗ ದ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಒಂದು ಪಟ್ಟಿ ಬಿಡುಗಡೆ ಮಾಡಿದೆ.
ಅದರಲ್ಲಿ 500ಕ್ಕೂ ಹೆಚ್ಚು ಮೇಡ್ ಇನ್ ಚೀನಾ ಉತ್ಪನ್ನಗಳಿದ್ದು, ಜೂನ್ 16ರಂದು ಭಾರತ ಮತ್ತು ಚೀನಾ ಮಧ್ಯೆ ಗಡಿ ಉದ್ವಿಗ್ನತೆ ಹೆಚ್ಚಾದ ಮೇಲೆ, ಆ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ನಿರ್ಧರಿಸಲಾಗಿದೆ.
ಆ ಉತ್ಪನ್ನಗಳ ಪಟ್ಟಿಯಲ್ಲಿ ಆಟಿಕೆಗಳು, ಹತ್ತಿ ಬಟ್ಟೆ, ಟೆಕ್ಸ್ ಟೈಲ್ಸ್, ನಿತ್ಯ ಬಳಸುವ ವಸ್ತುಗಳು, ಅಡುಗೆ ಮನೆ ವಸ್ತುಗಳು, ಪೀಠೋಪಕರಣ, ಹಾರ್ಡ್ ವೇರ್, ಪಾದರಕ್ಷೆ, ಹ್ಯಾಂಡ್ ಬ್ಯಾಗ್, ಲಗೇಜ್, ಎಲೆಕ್ಟ್ರಾನಿಕ್ಸ್, ಕಾಸ್ಮೆಟಿಕ್ಸ್, ಎಲೆಕ್ಟ್ರಾನಿಕ್ಸ್, ವಾಚ್ ಗಳು, ರತ್ನಗಳು ಮತ್ತು ಆಭರಣ, ವಾಹನ ಬಿಡಿ ಭಾಗಗಳು ಮುಂತಾದವು... ಹೀಗೆ ಕಂಡುಬರುತ್ತವೆ.
ಐನೂರಕ್ಕೂ ಹೆಚ್ಚು ಉತ್ಪನ್ನಗಳು ಬಾಯ್ಕಾಟ್
ಭಾರತದ ಉತ್ಪನ್ನ- ನಮ್ಮ ಹೆಮ್ಮೆ ಎಂಬ ಅಭಿಯಾನವನ್ನೇ ಆರಂಭಿಸಿದೆ CAIT. ಪಟ್ಟಿಯಲ್ಲಿನ ಚೀನಾದ ಐನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಬಾಯ್ಕಾಟ್ ಮಾಡಿ, ಅದರ ಬದಲಿಗೆ ಭಾರತದ ಉತ್ಪನ್ನಗಳನ್ನು ಬಳಸುವ ಬಗ್ಗೆ ತಿಳಿಸಲಾಗಿದೆ. ಮೊದಲ ಹಂತವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ 1 ಲಕ್ಷ ಕೋಟಿ ರುಪಾಯಿಯಷ್ಟು ಉತ್ಪನ್ನದ ಕೊರತೆಯನ್ನು ಡಿಸೆಂಬರ್ 2021ರೊಳಗೆ ತುಂಬಿಕೊಳ್ಳಲು ಗುರಿ ಹಾಕಿಕೊಳ್ಳಲಾಗಿದೆ. ಸದ್ಯಕ್ಕೆ ವಾರ್ಷಿಕವಾಗಿ ಚೀನಾದಿಂದ 5.25ಲಕ್ಷ ಕೋಟಿ ರುಪಾಯಿಯಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತವಾಗಿ ಭಾರತದಲ್ಲೇ ಉತ್ಪಾದಿಸಬಹುದಾದ ವಸ್ತುಗಳ ಕಡೆಗೆ ಗಮನ ಕೇಂದ್ರೀಕರಿಸಲಾಗುತ್ತದೆ. ಆದರೆ ಆಮದು ಮಾಡಿಕೊಳ್ಳುವಾಗ ಬೆಲೆಯು ನಿರ್ಧಾರಿತ ಅಂಶವಾಗಿರುತ್ತದೆ.
ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತದೆ
CAIT ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭರ್ತಿಯಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಮನಿಕಂಟ್ರೋಲ್ ಜತೆ ಮಾತನಾಡಿ, ಈ ವಸ್ತುಗಳನ್ನು ಉತ್ಪಾದಿಸಲು ವಿಶೇಷ ತಂತ್ರಜ್ಞಾನ ಅಗತ್ಯ ಇಲ್ಲ. ಇವುಗಳನ್ನು ಭಾರತದಲ್ಲೇ ಉತ್ಪಾದಿಸಬಹುದು, ಚೀನಾದ ಆಮದು ವಸ್ತುಗಳ ಬದಲಿಗೆ ಬಳಸಬಹುದು. ಇದರಿಂದ ಚೀನಾದ ಮೇಲಿನ ಅವಲಂಬನೆ ತಪ್ಪುತ್ತದೆ. ನಿರ್ದಿಷ್ಟವಾದ ತಂತ್ರಜ್ಞಾನದ ಅಗತ್ಯ ಇರುವ ಉತ್ಪನ್ನಗಳನ್ನು ಸದ್ಯಕ್ಕೆ ಈ ಪಟ್ಟಿಯಲ್ಲಿ ಸೇರಿಸುವುದಿಲ್ಲ. ಪರ್ಯಾಯ ವ್ಯವಸ್ಥೆಯಾಗಿ ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಆಗುವ ತನಕ ಅಥವಾ ಮಿತ್ರ ರಾಷ್ಟ್ರಗಳಲ್ಲಿ ಉತ್ಪಾದನೆ ಆಗುವವರೆಗೆ ಚೀನಾದ ಕೆಲವು ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವುದರಿಂದ ಹೊರಗಿಡಬೇಕಾಗುತ್ತದೆ ಎಂದಿದ್ದಾರೆ.
ಸರ್ಕಾರದಿಂದ ಬೆಂಬಲ ನೀಡುವಂತೆ ಮನವಿ
ಇನ್ನೂ ಒಂದು ವಿಚಾರ ಏನೆಂದರೆ, ಈ ಬಗ್ಗೆ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಜತೆಗೆ CAIT ಮಾತುಕತೆ ನಡೆಸಲು ನಿರ್ಧರಿಸಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ, ಉದ್ಯಮಿಗಳಿಗೆ ಹಾಗೂ ಸ್ಟಾರ್ಟ್ ಅಪ್ ಗಳಿಗೆ ಸರ್ಕಾರದ ಬೆಂಬಲ ನೀಡುವಂತೆ ಮನವಿ ಮಾಡಲು ತೀರ್ಮಾನಿಸಲಾಗಿದೆ.


Click it and Unblock the Notifications