ಕೊರೊನಾವೈರಸ್ ಭಾರತಕ್ಕೆ ಕಾಲಿಟ್ಟಾಗಿನಿಂದ ಯಾವೊಂದು ಉದ್ಯಮವು ಉದ್ದಾರ ಆಗಿಲ್ಲ. ಹೀಗಿರುವಾಗ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕನಾದ ಮುಕೇಶ್ ಅಂಬಾನಿಗೂ ಬಿಟ್ಟಿರಲಿಲ್ಲ. ಕೊರೊನಾ ಹಾವಳಿಗೆ ತುತ್ತಾಗಿದ್ದು ಆರ್‌ಐಎಲ್ ಉದ್ಯಮವು ನಷ್ಟ ಅನುಭವಿಸಿತ್ತು. ಪರಿಣಾಮ ಮುಕೇಶ್ ಅಂಬಾನಿ ಏಷ್ಯಾದ ನಂಬರ್ 1 ಪಟ್ಟದಿಂದ ಕೆಳ ಜಾರಿದ್ದರು. ಆದರೆ ಇದೀಗ ಫೇಸ್‌ಬುಕ್ ಜೊತೆ ಕೈ ಜೋಡಿಸಿದ್ದೇ ತಡ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂಬರ್ 1 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.
ಫೇಸ್‌ಬುಕ್ 5.7 ಬಿಲಿಯನ್ ಅಮೆರಿಕನ್ ಡಾಲರ್ ಅಥವಾ ಭಾರತದ ರುಪಾಯಿಗಳಲ್ಲಿ 43,574 ಕೋಟಿ ರುಪಾಯಿಗಳನ್ನು ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಈ ಹೇಳಿಕೆಯು ಹೊರಬೀಳುತ್ತಿದ್ದಂತೆ ಅಂಬಾನಿಯು ಏಷ್ಯಾದ ಶ್ರೀಮಂತರ ಪಟ್ಟಿಯಿಂದ ಜಿಗಿತ ಕಂಡರು. ಇದಕ್ಕೆ ಕಾರಣ ಏನು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಜಿಯೋದಲ್ಲಿ 10 ಪರ್ಸೆಂಟ್ ಪಾಲು ಖರೀದಿಸಿದ ಫೇಸ್‌ಬುಕ್
ಫೇಸ್‌ಬುಕ್ ಮಾಲೀಕ ಮಾರ್ಕ್ ಜುಗರ್‌ಬರ್ಗ್ ಭಾರತದ ಬೃಹತ್ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋದ 10 ಪರ್ಸೆಂಟ್ ಪಾಲು ಖರೀದಿ ಮಾಡುವುದಾಗಿ ಬುಧವಾರ ಘೋಷಿಸಿದರು. ಈ ಘೋಷಣೆಯು ಹೊರಬೀಳುತ್ತಿದ್ದಂತೆ ಷೇರುಪೇಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಭಾರೀ ಜಿಗಿತವನ್ನೇ ಕಂಡು ಬಿಟ್ಟಿದೆ. ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್ ರಿಲಯನ್ಸ್ ಜೊತೆ ಕೈ ಜೋಡಿಸಿದ ಸುದ್ದಿ ಕೇಳಿ ಹೂಡಿಕೆದಾರರು ರಿಲಯನ್ಸ್ ಮೇಲೆ ಹೂಡಿಕೆ ಹೆಚ್ಚಿಸಿದ್ದಾರೆ.
ಒಂದೇ ದಿನದಲ್ಲಿ 49.2 ಬಿಲಿಯನ್ ಡಾಲರ್ ಬಾಚಿಕೊಂಡ ರಿಲಯನ್ಸ್
ಫೇಸ್‌ಬುಕ್ ಹಾಗೂ ರಿಲಯನ್ಸ್ ಜಿಯೊ ನಡುವಿನ ಒಪ್ಪಂದವು ಹೊರಬೀಳುತ್ತಿದ್ದಂತೆ ಷೇರುಪೇಟೆಯಲ್ಲಿ ಹೂಡಿಕೆದಾರರು ತಾ ಮುಂದು, ನಾ ಮುಂದು ಎಂಬಂತೆ ಷೇರು ಖರೀದಿಸಲು ಶುರು ಮಾಡಿದರು. ಇದರ ಪರಿಣಾಮ ಬುಧವಾರ (ಏಪ್ರಿಲ್ 22) ಒಂದೇ ದಿನದಲ್ಲಿ ಅಂಬಾನಿ ಸಂಸ್ಥೆ 49.2 ಬಿಲಿಯನ್ ಅಮೆರಿಕನ್ ಡಾಲರ್ ಬಾಚಿಕೊಂಡಿತು. ಈ ಮೂಲಕ ಅಂಬಾನಿಯ ವೈಯಕ್ತಿಯ ಆದಾಯವು ಏರಿಕೆಯಾಗಿತು.
'ಜಾಕ್ ಮಾ'ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ
ಕೊರೊನಾ ಹಾವಳಿಯಿಂದ ಏಷ್ಯಾದ ನಂಬರ್ 1 ಶ್ರೀಮಂತ ಎಂಬ ಹಣೆಪಟ್ಟ ಕಳೆದುಕೊಂಡಿದ್ದ ಮುಕೇಶ್ ಅಂಬಾನಿ ಒಂದೇ ಒಂದು ಡೀಲ್‌ನಿಂದ ಮತ್ತೆ ಇಡೀ ಏಷ್ಯಾಕ್ಕೆ ನಂಬರ್ 1 ಶ್ರೀಮಂತನಾಗಿ ಪಟ್ಟ ಅಲಂಕರಿಸಿದ್ದಾರೆ. ಚೀನಾದ ನಂಬರ್ 1 ಶ್ರೀಮಂತ ಜಾಕ್ ಮಾ ಅವರಿಗಿಂತ 3.2 ಬಿಲಿಯನ್ ಡಾಲರ್‌ಗೂ ಅಧಿಕ ಆದಾಯಗಳಿಸಿದ್ದಾರೆ. ಈ ಮೂಲಕ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
ನಂಬರ್ 1 ರೇಸ್‌ನಲ್ಲಿ ಜಾಕ್ ಮಾ ಕಳೆದುಕೊಂಡಿದ್ದು ಎಷ್ಟು ಗೊತ್ತಾ?
ಚೀನಾ ಮೂಲದ ಅಲಿಬಾಬಾ ಗ್ರೂಪ್‌ನ ಮಾಜಿ ಮುಖ್ಯಸ್ಥ ಜಾಕ್ ಮಾ, ಬುಧವಾರ ಒಂದೇ ದಿನದಲ್ಲಿ ಬರೋಬ್ಬರಿ 1 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಜಾಕ್ ಮಾ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ(WHO)ಗೆ 100 ಮಿಲಿಯನ್ ಮಾಸ್ಕ್‌ಗಳನ್ನು ರವಾನಿಸಿತ್ತು. ಇದರ ನಿರ್ವಹಣಾ ವೆಚ್ಛವನ್ನು ಭರಿಸಿದ್ದರಿಂದ ಜಾಕ್ ಮಾ ಆದಾಯದಲ್ಲಿ ಕುಸಿತ ಕಂಡಿತು.
ಇದೇ ವೇಳೆ ಅಂಬಾನಿ ಅವರ ತೈಲ ವ್ಯಾಪಾರದಲ್ಲಿ 14 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿತ್ತು. ಆದರೆ ಫೇಸ್‌ಬುಕ್ ಮತ್ತು ಜಿಯೋ ನಡುವಿನ ಒಪ್ಪಂದದ ಪರಿಣಾಮವಾಗಿ ರಿಲಿಯನ್ಸ್ ಇಂಡಸ್ಟ್ರೀಸ್ ಭಾರೀ ಲಾಭವನ್ನೇ ಗಳಿಸಿತು. ಇದು ಮುಕೇಶ್ ಅವರ ವೈಯಕ್ತಿಕ ಆದಾಯದ ಏರಿಕೆಗೂ ಕಾರಣವಾದ ಪರಿಣಾಮ ಜಾಕ್ ಮಾ ಅವರನ್ನು ಹಿಂದಿಕ್ಕಿದ್ದಾರೆ.
ಜಿಯೊ ಜೊತೆ ಕೈ ಜೋಡಿಸಿದ ಫೇಸ್‌ಬುಕ್‌ಗೆ ಏನು ಲಾಭ?
ವಿಶ್ವದ ಬೃಹತ್ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ಭಾರತದ ಅತ್ಯಂತ ಪ್ರಬಲ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋಗೆ ಗಾಳ ಹಾಕಲು ಕಾರಣ ಏನಿರಬಹುದು ಎಂದು ಇಡೀ ವಿಶ್ವವೇ ಅಚ್ಚರಿಯಿಂದ ನೋಡಿದೆ. ಇದಕ್ಕೆ ಬಲವಾದ ಕಾರಣವೂ ಕಂಡು ಬರುತ್ತದೆ. ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡುವ ಮೂಲಕ ಫೇಸ್‌ಬುಕ್ ಇದೀಗ ಜಿಯೋದ ಅತೀ ದೊಡ್ಡ ಷೇರುದಾರನಾಗಿ ಮಾರ್ಪಟ್ಟಿದೆ. ಅಂದರೆ ಜಿಯೋದ ಸುಮಾರು 38.8 ಕೋಟಿ ಗ್ರಾಹಕರ ಬೃಹತ್ ಪಡೆಯ ಲಾಭ ಇದೀಗ ಫೇಸ್‌ಬುಕ್‌ಗೆ ದೊರೆಯಲಿದೆ.
ಇಷ್ಟಲ್ಲದೆ ಭಾರತದಲ್ಲಿರುವ ಸುಮಾರು 6 ಕೋಟಿಗೂ ಅಧಿಕ ಸಣ್ಣ ಉದ್ಯಮಗಳಿಗೆ, ರಿಟೇಲ್ ವ್ಯಾಪಾರಿಗಳಿಗೆ ಡಿಜಿಟಲ್ ಅವಕಾಶಗಳನ್ನು ಸೃಷ್ಟಿಸಲು ಜಿಯೋ-ಫೇಸ್‌ಬುಕ್ ನಡುವಿನ ಒಪ್ಪಂದ ಸಹಾಯಕಾರಿಯಾಗಲಿದೆ. ಈ ಮೂಲಕ ಭಾರತಕ್ಕೆ ಹೊಸ ಸುವರ್ಣಾವಕಾಶ ದೊರೆಯಲಿದೆ.
ತಂತ್ರಜ್ಞಾನ ಕ್ಷೇತ್ರದ ದೈತ್ಯವಾಗಿ ಬೆಳೆಯುವ ಮುನ್ಸೂಚನೆ ಕೊಟ್ಟ ಅಂಬಾನಿ
ಲಾಭವಿಲ್ಲದೆ ಒಂದು ಹೆಜ್ಜೆಯನ್ನು ಮುಂದಿಡದ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ನಡೆಗೆ ಜಗತ್ತು ಅಚ್ಚರಿ ವ್ಯಕ್ತಪಡಿಸಿದ್ದರ ಜೊತೆಗೆ ಅವರ ಜಾಣ್ಮೆಗೆ ವಿಶ್ಲೇಷಕರು ಭೇಷ್ ಎಂದಿದ್ದಾರೆ. ಏಕೆಂದರೆ ರಿಲಯನ್ಸ್ ಸಂಸ್ಥೆಯ ವಿವಿಧ ವಿಭಾಗದಲ್ಲಿ ಆಗುತ್ತಿದ್ದ ನಷ್ಟವನ್ನು ಕೇವಲ ಫೇಸ್‌ಬುಕ್ ಮೂಲಕ ಒಪ್ಪಂದದ ಮೂಲಕ ಬಗೆಹರಿಸಿಕೊಂಡಿದ್ದಾರೆ.
ಈಗಾಗಲೇ ಅತಿ ಕಡಿಮೆ ಬೆಲೆಯಲ್ಲಿ ಡೇಟಾ ನೀಡುವ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದ ಅಂಬಾನಿಯ ಈ ನಡೆ ಸಹಜವಾಗಿಯೇ ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲವನ್ನೇ ಸೃಷ್ಟಿಸಿದೆ.


Click it and Unblock the Notifications