ಮುಕೇಶ್ ಅಂಬಾನಿ ತಮ್ಮ ಒಡೆತನದ ಸುದ್ದಿ ಮಾಧ್ಯಮ ಸಂಸ್ಥೆಗಳನ್ನು ಭಾರತದ ಟೈಮ್ಸ್ ಗ್ರೂಪ್ ಗೆ ಮಾರಾಟ ಮಾಡಲು ಮಾತುಕತೆ ನಡೆಸುತ್ತಿರುವ ಬಗ್ಗೆ 'ಬ್ಲೂಮ್ ಬರ್ಗ್ ಕ್ವಿಂಟ್' ವರದಿ ಮಾಡಿದೆ. ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಮುಕೇಶ್ ಅಂಬಾನಿ, ಸದ್ಯಕ್ಕೆ ನಷ್ಟದಲ್ಲಿರುವ ಮಾಧ್ಯಮ ವ್ಯವಹಾರಗಳನ್ನು ಮಾರಲು ನಿರ್ಧರಿಸಿದ್ದಾರೆ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ಮುದ್ರಕರಾದ ಬೆನೆಟ್ ಅಂಡ್ ಕೋಲ್ಮನ್ ಕಂಪೆನಿಯಿಂದ ಸಲಹೆಗಾರರನ್ನು ನೇಮಿಸಲಿದ್ದು, ಮುಕೇಶ್ ಅಂಬಾನಿ ಒಡೆತನದ ನೆಟ್ ವರ್ಕ್ 18 ಮೀಡಿಯಾ ಮತ್ತು ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ ನ ಮೌಲ್ಯಮಾಪನ ಮಾಡಿಸಲಿದೆ ಎಂದು ವರದಿ ಆಗಿದೆ.
ಒಟ್ಟಾರೆಯಾಗಿ ಮಾರಾಟ ಮಾಡಬೇಕಾ ಅಥವಾ ಷೇರು ಪ್ರಮಾಣವನ್ನು ಇಂತಿಷ್ಟು ಎಂದು ಮಾರಬೇಕಾ ಎಂಬ ಆಯ್ಕೆಗಳ ಬಗ್ಗೆ ಮುಕೇಶ್ ಅಳೆದು- ತೂಗಿ ನೋಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಾತುಕತೆ ಇನ್ನೂ ಆರಂಭದ ಹಂತದಲ್ಲಿದೆ. ಅದು ವ್ಯವಹಾರ ಕುದುರುವ ಮಟ್ಟಕ್ಕೆ ಆಗುತ್ತದೆ ಅಂತಿಲ್ಲ. ಇನ್ನು ಬೆನೆಟ್ ಅಂಡ್ ಕೋಲ್ಮನ್ ಕಡೆಯಿಂದ ಈ ಬಗ್ಗೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಇನ್ನು ರಿಲಯನ್ ಇಂಡಸ್ಟ್ರೀಸ್ ನ ವಕ್ತಾರರು ಮಾತನಾಡಿ, ಅವಕಾಶಗಳ ಪರಾಮರ್ಶೆ ಮಾಡುತ್ತಿರುವುದಾಗಿಯೂ ಮತ್ತು ಹೆಚ್ಚೇನೂ ಮಾತನಾಡುವುದಿಲ್ಲ ಅಂತಲೂ ತಿಳಿಸಿದ್ದಾರೆ.
ಸೋನಿ ಕಾರ್ಪೊರೇಷನ್ ಗೆ ನೆಟ್ ವರ್ಕ್ 18 ಮನರಂಜನಾ ವಿಭಾಗವನ್ನು ಮಾರಲಿದೆ ಎಂದು ವರದಿ ಆಗಿತ್ತು. ವಿವಿಧ ಸಿನಿಮಾ, ಸಂಗೀತ ಮತ್ತು ಕಾಮಿಡಿ ಚಾನಲ್ ಗಳನ್ನು ಮಾರಲಿದೆ ಎಂಬ ಸುದ್ದಿಯಿತ್ತು. ಸದ್ಯಕ್ಕೆ ಈ ಸಂಸ್ಥೆಯ ಲೆಕ್ಕಪತ್ರಗಳ ಮೌಲ್ಯಮಾಪನ ನಡೆಯುತ್ತಿದೆ. ನೆಟ್ ವರ್ಕ್ 18 ಗ್ರೂಪ್ ನ ಒಟ್ಟು ನಷ್ಟ ಈ ವರ್ಷದ ಮಾರ್ಚ್ ಕೊನೆಗೆ 178 ಕೋಟಿ ಇತ್ತು. ಮತ್ತು ನಿವ್ವಳ ಸಾಲ ಪ್ರಮಾಣ 2800 ಕೋಟಿ ಇತ್ತು.
2014ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ನೆಟ್ ವರ್ಕ್ 18 ಖರೀದಿಸಲಾಯಿತು. ಅದು 56 ಸ್ಥಳೀಯ ಚಾನೆಲ್ ಗಳನ್ನು ಒಳಗೊಂಡಿತ್ತು. ಸುದ್ದಿ, ಮನರಂಜನೆ ಎಲ್ಲವೂ ಇತ್ತು. ಸುದ್ದಿ ವಿಭಾಗದಲ್ಲಿ ಮನಿಕಂಟ್ರೋಲ್, ನ್ಯೂಸ್18, ಸಿಎನ್ ಬಿಸಿಟಿವಿ18.ಕಾಮ್, ಕ್ರಿಕೆಟ್ ನೆಕ್ಸ್ಟ್ ಮತ್ತು ಫಸ್ಟ್ ಪೋಸ್ಟ್ ಇದೆ.


Click it and Unblock the Notifications