ಡಿಜಿಟಲ್ ವಹಿವಾಟು ಅಧಿಕವಾಗುತ್ತಿದ್ದಂತೆ ಸೈಬರ್ ವಂಚನೆಗಳು ಕೂಡಾ ಹೆಚ್ಚಳವಾಗುತ್ತಾ ಸಾಗುತ್ತಿದೆ. ಅದು ಕೂಡಾ ಮುಖ್ಯವಾಗಿ ಹಿರಿಯ ನಾಗರಿಕರನ್ನು ವಂಚಕರು ಟಾರ್ಗೆಟ್ ಮಾಡಿಕೊಂಡಿದ್ದಾರೆ. ದಕ್ಷಿಣ ಮುಂಬೈನ ವೃದ್ಧರೊಬ್ಬರು ಈ ವಂಚನೆಗೆ ಬಲಿಯಾಗಿದ್ದು, 4 ಕೋಟಿ ರೂಪಾಯಿ ಮೊತ್ತವನ್ನು ಕಳೆದಕೊಂಡಿದ್ದಾರೆ.
ದಕ್ಷಿಣ ಮುಂಬೈನ ವೃದ್ಧರೊಬ್ಬರು 11 ಕೋಟಿ ರೂಪಾಯಿಗಳ ಭವಿಷ್ಯ ನಿಧಿ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ ಎಂಬ ಸೈಬರ್ ವಂಚಕರ ನಕಲಿ ಸುದ್ದಿಗೆ ಬಲಿಯಾಗಿ, 4.35 ಕೋಟಿ ರೂಪಾಯಿಗಳ ವಂಚನೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 71 ವರ್ಷದ ವ್ಯಕ್ತಿಯ ಪತ್ನಿ ಕಫ್ ಪರೇಡ್ ಪೊಲೀಸ್ ಠಾಣೆಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

"ತಮ್ಮ ದೂರಿನಲ್ಲಿ ಮಹಿಳೆಯು, ಈ ವರ್ಷದ ಮೇ ತಿಂಗಳಲ್ಲಿ ಮಹಿಳೆಯೊಬ್ಬರಿಂದ ತನಗೆ ಕರೆ ಬಂದಿತ್ತು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ (ಇಪಿಎಫ್‌ಒ) ಮಾತನಾಡುತ್ತಿರುವುದಾಗಿ ಕರೆ ಮಾಡಿದವರು ಹೇಳಿಕೊಂಡಿದ್ದಾರೆ. ನಂಬಿಕೆ ಗಳಿಸುವ ನಿಟ್ಟಿನಲ್ಲಿ ದೂರುದಾರ ಮಹಿಳೆಯ ಪತಿಯ ವಿವರವನ್ನು ಕೂಡಾ ಕರೆ ಮಾಡಿದವರು ನೀಡಿದ್ದಾರೆ," ಎಂದು ಪಿಟಿಐ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಆಕೆಯ ಪತಿಯ ಕಂಪನಿಯು ತನ್ನ ಇಪಿಎಫ್ ಖಾತೆಯಲ್ಲಿ 20 ವರ್ಷಗಳ ಅವಧಿಗೆ 4 ಲಕ್ಷ ರೂಪಾಯಿಗಳನ್ನು ಡೆಪಾಸಿಟ್ ಮಾಡಿದೆ. ಈಗ ಅವರು 11 ಕೋಟಿ ರೂಪಾಯಿಗಳ ಮೆಚ್ಯೂರಿಟಿ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಕರೆ ಮಾಡಿದವರು ದೂರುದಾರರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ದೂರುದಾರರ ಪತಿ ಈ ಹಿಂದೆ ಪ್ರಮುಖ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಗಳು ಮತ್ತು ಸಲಹಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿವೃತ್ತಿಯ ನಂತರ, ದಂಪತಿಗಳು ಮೆಚ್ಯೂರಿಟಿಯ ನಂತರ ಹೂಡಿಕೆ ಮಾಡಿದ ಹಣವನ್ನು ಹಿಂಪಡೆದಿದ್ದರು.
ನಂತರ ಕರೆ ಮಾಡಿದವರು ಟಿಡಿಎಸ್, ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿಗೆ ಅಗತ್ಯವಿರುವ ಹಣವನ್ನು ಡೆಪಾಸಿಟ್ ಮಾಡಲು ಮಹಿಳೆಗೆ ಹೇಳಿದರು. ಆಕೆಯನ್ನು ನಂಬಿದ ಮಹಿಳೆ ಕಾಲಕಾಲಕ್ಕೆ ಆಕೆಯ ಸೂಚನೆಯಂತೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು.
"ಈ ಮೂಲಕ ಆರೋಪಿ ಮಹಿಳೆ ದಂಪತಿಗೆ 4.35 ಕೋಟಿ ರೂಪಾಯಿ ವಂಚಿಸಿದ್ದಾರೆ. ಮೇ ಮತ್ತು ಸೆಪ್ಟೆಂಬರ್ ನಡುವೆ ಬೇರೆ ಬೇರೆ ಕಾರಣವನ್ನು ನೀಡಿ ಮಹಿಳೆಯಿಂದ ವಂಚಕರು ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ ಕರೆ ಮಾಡಿದವರು ಹೆಚ್ಚಿನ ಹಣವನ್ನು ಕೇಳಿದಾಗ, ದಂಪತಿಗಳು ತಮ್ಮ ಬಳಿ ಯಾವುದೇ ಹೆಚ್ಚಿನ ಹಣವಿಲ್ಲ ಎಂದು ಹೇಳಿದರು," ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಕರೆ ಮಾಡಿದ ಮಹಿಳೆಯು ಐಟಿ ಇಲಾಖೆಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ತಾವು ವಂಚನೆಗೆ ಒಳಗಾಗಿರುವುದನ್ನು ಮನಗಂಡ ದಂಪತಿ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 384 (ಸುಲಿಗೆ), 419 (ವ್ಯಕ್ತಿಯಿಂದ ವಂಚನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ) ಮತ್ತು 34 (ಹಲವಾರು ಕೃತ್ಯಗಳು), ಐ-ಟಿ ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.


Click it and Unblock the Notifications