ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL)ನಿಂದ ವಿಟಾಲಿಕ್ ಹೆಲ್ತ್ ಮತ್ತು ಅದರ ಅಂಗಸಂಸ್ಥೆಗಳಲ್ಲಿನ (ಅವುಗಳನ್ನೆಲ್ಲ ಒಟ್ಟಾಗಿ ಸೇರಿ 'ನೆಟ್ ಮೆಡ್ಸ್ ಎನ್ನಲಾಗುತ್ತದೆ) ಪ್ರಮುಖ ಷೇರಿನ ಪಾಲನ್ನು 620 ಕೋಟಿ ರುಪಾಯಿ ನಗದಿಗೆ ಖರೀದಿಸಲಾಗಿದೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಘೋಷಣೆ ಮಾಡಿದೆ.
ವಿಟಾಲಿಕ್ ನಲ್ಲಿ ಶೇಕಡಾ 60ರಷ್ಟು, ಅದರ ಅಂಗ ಸಂಸ್ಥೆಗಳಾದ ಟ್ರೆಸೆರಾ ಹೆಲ್ತ್ ಪ್ರೈವೇಟ್ ಲಿಮಿಟೆಡ್, ನೆಟ್ ಮೆಡ್ಸ್ ಮಾರ್ಕೆಟ್ ಪ್ಲೇಸ್ ಲಿಮಿಟೆಡ್ ಹಾಗೂ ದಾಧಾ ಫಾರ್ಮಾ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಶೇಕಡಾ 100ರಷ್ಟು ನೇರ ಈಕ್ವಿಟಿ ಮಾಲೀಕತ್ವವನ್ನು ರಿಲಯನ್ಸ್ ಖರೀದಿಸಿದೆ.
ವಿಟಾಲಿಕ್ ಹಾಗೂ ಅದರ ಅಂಗಸಂಸ್ಥೆಗಳ ಮುಖ್ಯವಾದ ವ್ಯವಹಾರ ಫಾರ್ಮಾ ವಿತರಣೆ, ಮಾರಾಟ ಹಾಗೂ ವ್ಯವಹಾರಕ್ಕೆ ಬೆಂಬಲ ನೀಡುವ ಸೇವೆಗಳನ್ನು ಒದಗಿಸುವುದು. ಇದರ ಅಂಗಸಂಸ್ಥೆ ಆನ್ ಲೈನ್ ಫಾರ್ಮಸಿ ಪ್ಲಾಟ್ ಫಾರ್ಮ್- ನೆಟ್ ಮೆಡ್ಸ್ ನಿಂದ ಗ್ರಾಹಕರಿಗೆ ಮನೆ ಬಾಗಿಲಿಗೇ ಫಾರ್ಮಸಿ ಅಗತ್ಯಗಳನ್ನು ಪೂರೈಸುತ್ತದೆ.

ಈ ಹೂಡಿಕೆ ಬಗ್ಗೆ RRVL ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ಭಾರತದಲ್ಲಿ ಎಲ್ಲರಿಗೂ ಡಿಜಿಟಲ್ ವ್ಯವಹಾರಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಸಂಕಲ್ಪ. ಅದರ ಜತೆಗೆ ನೆಟ್ ಮೆಡ್ಸ್ ಮೂಲಕ ರಿಲಯನ್ಸ್ ರೀಟೇಲ್ ಸಾಮರ್ಥ್ಯ ಹೆಚ್ಚಾಗುತ್ತದೆ. ಉತ್ತಮ ಗುಣಮಟ್ಟದ ಹಾಗೂ ಕೈಗೆಟುಕುವ ಬೆಲೆಯಲ್ಲಿ ಹೆಲ್ತ್ ಕೇರ್ ಉತ್ಪನ್ನಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ನೆಟ್ ಮೆಡ್ಸ್ ಸಾಗಿಬಂದಿರುವ ಹಾದಿ ನಮಗೆ ಬಹಳ ತೃಪ್ತಿ ತಂದಿದೆ. ಅಲ್ಪಾವಧಿಯಲ್ಲೇ ದೇಶಾದ್ಯಂತ ಡಿಜಿಟಲ್ ಫ್ರಾಂಚೈಸ್ ವಿಸ್ತರಿಸಿದೆ. ನಮ್ಮ ಸಹಭಾಗಿತ್ವ ಹಾಗೂ ಹೂಡಿಕೆ ಮೂಲಕ ಅದು ಇನ್ನಷ್ಟು ವೇಗ ಪಡೆಯುವ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.
ನೆಟ್ ಮೆಡ್ಸ್ ಸ್ಥಾಪಕ ಹಾಗೂ ಸಿಇಒ ಪ್ರದೀಪ್ ದಾಧಾ ಮಾತನಾಡಿ, ರಿಲಯನ್ಸ್ ಜತೆಗೆ ಸೇರಿಕೊಳ್ಳುತ್ತಿರುವುದು ನೆಟ್ ಮೆಡ್ಸ್ ಪಾಲಿಗೆ ಬಹಳ ಹೆಮ್ಮೆಯ ಕ್ಷಣಗಳು. ನಾವು ಒಟ್ಟಾಗಿ ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ಪ್ರತಿ ಭಾರತೀಯರಿಗೂ ತಲುಪಿಸುತ್ಟೇವೆ. ಸಮೂಹದ ಡಿಜಿಟಲ್, ರೀಟೇಲ್ ಹಾಗೂ ತಂತ್ರಜ್ಞಾನ ವೇದಿಕೆಯ ಮೂಲಕವಾಗಿ ಹೆಚ್ಚು ಮೌಲ್ಯಯುತ ಸೇವೆ ಒದಗಿಸುತ್ತೇವೆ ಎಂದು ಹೇಳಿದ್ದಾರೆ.


Click it and Unblock the Notifications