ವಿಶಾಖಪಟ್ಟಣದಲ್ಲಿ ನಡೆದ ವಿಷಾನಿಲ ಸೋರಿಕೆ ದುರಂತದಲ್ಲಿ ಹನ್ನೊಂದು ಮಂದಿ ಸಾವನ್ನಪ್ಪಿದ್ದು, ಎಲ್.ಜಿ. ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಆರಂಭಿಕ ಮೊತ್ತವಾಗಿ 50 ಕೋಟಿ ರುಪಾಯಿ ಠೇವಣಿ ಮೊತ್ತವನ್ನು ಕಟ್ಟುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ ಜಿಟಿ) ಆದೇಶ ನೀಡಿದೆ.
ಈ ಘಟನೆಯು ಗುರುವಾರ ಬೆಳಗಿನ ಜಾವ 3.30ರ ಹೊತ್ತಿಗೆ ಸಂಭವಿಸಿದೆ. ಆ ವೇಳೆ ನೂರಾರು ಮಂದಿ ಹತ್ತಿರದ ಹಳ್ಳಿ ವೆಂಕಟಪುರಂನಲ್ಲಿ ಇದ್ದರು. ನೂರಾರು ಮಂದಿ ಅಸ್ವಸ್ಥರಾದರು. ಕಾರ್ಖಾನೆಯಿಂದ ಹೊರಸೂಸಿದ ಸ್ಟೈರೀನ್ ನಿಂದ ಕನಿಷ್ಠ ಹನ್ನೊಂದು ಮಂದಿ ಸಹ ಸಾವನ್ನಪ್ಪಿದರು. ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಎನ್ ಜಿಟಿಯಿಂದ ಆಂಧ್ರಪ್ರದೇಶ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ನೀಡಲಾಗಿದೆ.
ಇದರ ಜತೆಗೆ ವಿಶಾಖಪಟ್ಟಣದ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ಎಲ್.ಜಿ. ಪಾಲಿಮರ್ಸ್ ಗೂ ನೋಟಿಸ್ ನೀಡಲಾಗಿದೆ.
ನಿಯಮ ಪಾಲಿಸುವಲ್ಲಿ ವಿಫಲ
ಸ್ಟೈರೀನ್ ಅತ್ಯಂತ ಅಪಾಯಕಾರಿ ಹಾಗೂ ವಿಷಯುಕ್ತ ರಾಸಾಯನಿಕ. ಇದರಿಂದ ಆಗಬಹುದಾದ ಸಂಭವನೀಯ ಅಪಾಯಗಳು ಎದುರಿಸಲು ತುರ್ತು ಕ್ರಮಕ್ಕೆ ವ್ಯವಸ್ಥೆ ಇರಬೇಕು. ಆದರೆ ಈ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿರುವುದು ಕಂಡುಬರುತ್ತದೆ ಎಂದು ಎನ್ ಜಿಟಿ ಪೀಠವು ತಿಳಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅನಿಲ ಸೋರಿಕೆ ಆಗುವುದು ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲವಾಗಿ ಪರಿಣಮಿಸುತ್ತದೆ. ಕಾರ್ಖಾನೆ ಮೇಲೆ "ಕಠಿಣ ಜವಾಬ್ದಾರಿ"ಯನ್ನು ಹೊರೆಸಬೇಕಿದೆ. ಈಗಾಗಿರುವ ಹಾನಿಗೆ ಇತರ ಕಾನೂನು ವ್ಯಾಪ್ತಿಯ ಕ್ರಮಗಳ ಜತೆಗೆ ಪರಿಸರ ಕಾಯ್ದೆ ಅಡಿಯಲ್ಲೂ ಕಂಪೆನಿ ಜವಾಬ್ದಾರಿ ಹೊರಬೇಕು ಎಂದು ನ್ಯಾ. ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠವು ತಿಳಿಸಿದೆ.
ಸತ್ಯಶೋಧನಾ ಸಮಿತಿ ರಚನೆ
ನಿವೃತ್ತ ನ್ಯಾ. ಬಿ. ಶೇಷಶಯನ ಅವರ ನೇತೃತ್ವದಲ್ಲಿ ಆರು ಸದಸ್ಯರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯನ್ನು ಎನ್ ಜಿಟಿ ರಚಿಸಿದೆ. ಈ ಸಮಿತಿಯು ಸದ್ಯದಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಲಿದೆ. ಈ ಘಟನೆ ಸಂಭವಿಸಲು ಕಾರಣವಾದ ವೈಫಲ್ಯವನ್ನು ಪತ್ತೆ ಹಚ್ಚುವ ಜತೆಗೆ ಜೀವ ಹಾನಿ, ಪರಿಸರ ಹಾನಿ ಹಾಗೂ ಆಸ್ತಿ ಹಾನಿಯ ಅಂದಾಜನ್ನು ಕೂಡ ಮಾಡಲಿದೆ. ಆ ನಂತರ ಸಂತ್ರಸ್ತರಿಗೆ ಪರಿಹಾರ ದೊರಕಿಸಲು ಮುಂದಾಗುತ್ತದೆ ಸಮಿತಿ. ಇನ್ನು 50 ಕೋಟಿ ರುಪಾಯಿ ಹಣವನ್ನು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಬಳಿ ಠೇವಣಿ ಇಡುವಂತೆ ಎನ್ ಜಿಟಿಯು ರಾಸಾಯನಿಕ ಫ್ಯಾಕ್ಟರಿಗೆ ಸೂಚನೆ ನೀಡಿದೆ.
ಕನಿಷ್ಠ ನೂರು ಮಂದಿ ಆಸ್ಪತ್ರೆಯಲ್ಲಿ
ಅನಿಲ ಸೋರಿಕೆ ಕಾರಣವನ್ನು ಸರ್ಕಾರವು ಇನ್ನೂ ಅಧಿಕೃತವಾಗಿ ಪತ್ತೆ ಹಚ್ಚಬೇಕಿದೆ. ದೆಹಲಿ ಮೂಲದ ಥಿಂಕ್ ಟ್ಯಾಂಕ್ ಪ್ರಕಾರ, ಸಂಗ್ರಹ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆ, ತಾಪಮಾನದಲ್ಲಿನ ಅಸಮಮರ್ಪಕತೆಯಿಂದ ಈ ದುರಂತ ಸಂಭವಿಸಿದೆ. ಶುಕ್ರವಾರದ ತನಕ ಲೆಕ್ಕ ಹಿಡಿದು ಹೇಳುವುದಾದರೆ, ಕನಿಷ್ಠ ನೂರು ಮಂದಿ ಆಸ್ಪತ್ರೆಯಲ್ಲಿದ್ದಾರೆ. ಅದರಲ್ಲಿ ಇಪ್ಪತ್ತೈದು ಮಂದಿ ಸ್ಥಿತಿ ಗಂಭೀರವಾಗಿದೆ. ಈ ಘಟನೆಯಿಂದಾಗಿ ಹತ್ತಿರದ ಹಳ್ಳಿಗಳಿಂದ ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಬೇಕಿದೆ. ಇನ್ನೇನು ಎಲ್.ಜಿ. ಪಾಲಿಮರ್ಸ್ ಕಾರ್ಖಾನೆಯನ್ನು ಲಾಕ್ ಡೌನ್ ನಂತರ ಮತ್ತೆ ಆರಂಭಿಸಬೇಕು ಎಂದು ಸಿದ್ಧತೆ ಮಾಡಿಕೊಳ್ಳುವಾಗ ಈ ಅವಘಡ ಸಂಭವಿಸಿದೆ.


Click it and Unblock the Notifications