ದೇಶದಲ್ಲಿ ಆರ್ಥಿಕತೆಯ ಮಂದಗತಿಯ ಬಿಸಿ ಈಗಾಗಲೇ ಆಟೋಮೊಬೈಲ್ ಕ್ಷೇತ್ರವನ್ನು ತಲ್ಲಣಗೊಳಿಸಿದೆ. ಪ್ರಸಕ್ತ ವರ್ಷದ 2ನೇ ತ್ರೈಮಾಸಿಕದಲ್ಲಿ ಆರ್ಥಿಕ ಅಭಿವೃದ್ಧಿಯು 4.5 ಪರ್ಸೆಂಟ್‌ಗೆ ಕುಸಿದಿದೆ. ಕಾರು ಕಂಪನಿಗಳ ಉತ್ಪಾದನೆ ಹಾಗೂ ಮಾರಾಟವೂ ಕುಂಠಿತಗೊಂಡಿದೆ. ಇಂತಹ ವೇಳೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ಬೆಲೆ ಏರಿಕೆ ಮಾಡಲು ಹೊರಟಿದ್ದು, ಜನವರಿ 2020ರಿಂದ ಕಾರುಗಳ ಬೆಲೆ ಹೆಚ್ಚಿಸಲಿವೆ.
ಹಲವಾರು ಪ್ರಮುಖ ಕಾರು ತಯಾರಿಕಾ ಕಂಪನಿಗಳೇ ಬೆಲೆ ಹೆಚ್ಚಳ ನಿರ್ಧಾರ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ವ್ಯಾಪಾರ-ವಹಿವಾಟು ಹೆಚ್ಚುವ ನಿರೀಕ್ಷೆಯನ್ನಿಟ್ಟುಕೊಂಡಿವೆ. ಬಿಎಸ್-VI ನಿಯಮಾವಳಿಗೆ ಅನುಗುಣವಾಗಿ ಎಂಜಿನ್ ಮೇಲ್ದರ್ಜೆಗೇರಿಸಲು ಹೆಚ್ಚಿನ ವೆಚ್ಚ ತಗುಲುವುದು ಎಂಬ ಕಾರಣದ ಜೊತೆಗೆ ಸುಸ್ಥಿರ ವಹಿವಾಟು ನಡೆಸಲು ಬೆಲೆಯಲ್ಲಿ ಅಲ್ಪ ಮಟ್ಟಿನ ಹೊಂದಾಣಿಕೆಗೆ ಮುಂದಾಗಿವೆ.
ಈಗಾಗಲೇ ಮಾರುತಿ ಕಂಪನಿ ಕಾರುಗಳ ಬೆಲೆ ಏರಿಸುವುದಾಗಿ ಘೋಷಿಸಿದೆ. ಟಾಟಾ ಕಂಪನಿ ಕಾರುಗಳ ಬೆಲೆ ಹೆಚ್ಚಳಕ್ಕೆ ಯೋಚನೆ ನಡೆಸಿದೆ. ಇದೀಗ ಈ ಸಾಲಿಗೆ ನಿಸಾನ್ ಮೋಟಾರ್ ಇಂಡಿಯಾ ಕಂಪನಿಯು ಮುಂದಾಗಿದೆ
ನಿಸಾನ್ ಕಾರುಗಳ ಬೆಲೆ 5 ಪರ್ಸೆಂಟ್ ಹೆಚ್ಚಳ
ನಿಸಾನ್ ಮೋಟಾರ್ ದೇಶಿಯ ಕಾರುಗಳ ಬೆಲೆಯಲ್ಲಿ ಜನವರಿಯಿಂದ 5 ಪರ್ಸೆಂಟ್ ಏರಿಕೆ ಮಾಡುವುದಾಗಿ ಘೋಷಿಸಿದೆ. ಉತ್ಪಾದನೆ ವೆಚ್ಚವನ್ನು ತಗ್ಗಿಸಲು ಕಾರುಗಳ ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿದೆ. ನಿಸಾನ್ ಮತ್ತು ಡಾಟ್ಸನ್‌ನ ಎಲ್ಲಾ ಮಾದರಿಗಳಿಗೂ ಇದು ಅನ್ವಯವಾಗಲಿದೆ.
ಬೆಂಜ್ ಕಾರುಗಳ ಬೆಲೆ ಏರಿಯಾಗಲಿದೆ 3 ಪರ್ಸೆಂಟ್
ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್ ಬೆಂಜ್ ಕಂಪನಿ ಸಹ ಕಾರುಗಳ ಬೆಲೆ ಏರಿಕೆಗೆ ಯೋಚನೆ ನಡೆಸಿದೆ. 2020 ಜನವರಿಯಿಂದ ತನ್ನ ಕಂಪನಿಯ ಕಾರುಗಳ ಬೆಲೆಯನ್ನು 3 ಪರ್ಸೆಂಟ್ ಹೆಚ್ಚಿಸಲು ಮುಂದಾಗಿದೆ. ಈ ಮೂಲಕ ಇತರೆ ಕಾರು ತಯಾರಿಕಾ ಕಂಪನಿಗಳಂತೆ ಬೆಲೆ ಏರಿಕೆಗೆ ಯೋಜಿಸಿದೆ.
ಕಾರುಗಳ ಬೆಲೆ ಏರಿಸಲಿರುವ ಹುಂಡೈ, ಹೀರೊ ಮೋಟೊಕಾರ್ಪ್
ಮಾರುತಿ ಕಂಪನಿಯು ಮೊದಲಿಗೆ ಕಾರುಗಳ ಬೆಲೆ ಏರಿಕೆಗೆ ಮುಂದಾದ ಬಳಿಕ ಬಹುತೇಕ ಕಂಪನಿಗಳು ಅದೇ ದಾರಿಯನ್ನೇ ಅನುಸರಿಸಿವೆ. ಟಾಟಾ ಕಂಪನಿ ಅಷ್ಟೇ ಅಲ್ಲದೆ ಹುಂಡೈ ಮತ್ತು ಹೀರೊ ಮೋಟೊಕಾರ್ಪ್ ಕೂಡ ವಾಹನಗಳ ಬೆಲೆ ಏರಿಸಲಿವೆ. ನಷ್ಟವನ್ನು ತಗ್ಗಿಸಲು ಮತ್ತು ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿವೆ.
ಕಾರುಗಳಷ್ಟೇ ಅಲ್ಲ ಬೈಕ್, ಸ್ಕೂಟರ್ ದರ ಕೂಡ ಹೆಚ್ಚಳ
ಕಾರುಗಳ ತಯಾರಿಕಾ ಕಂಪನಿಗಳು ಬೆಲೆ ಹೆಚ್ಚಳವನ್ನಷ್ಟೇ ಮಾಡುತ್ತಿಲ್ಲ. ಬೈಕ್ ಮತ್ತು ಸ್ಕೂಟರ್ ತಯಾರಿಕಾ ಕಂಪನಿಗಳು ಕೂಡ ಬೆಲೆ ಏರಿಕೆಗೆ ಮುಂದಾಗಿವೆ. ಹೀರೊ ಮೋಟೊಕಾರ್ಪ್ ಎಂಜಿನ್‌ಗಳನ್ನು ಮೇಲ್ದರ್ಜೆಗೇರಿಸಲು ಜನವರಿ 1ರಿಂದ ಹೀರೋ ಬೈಕ್ ಮತ್ತು ಸ್ಕೂಟರ್ ಬೆಲೆ 2 ಸಾವಿರ ರುಪಾಯಿಗಳವರೆಗೂ ಹೆಚ್ಚಳ ಮಾಡುವುದಾಗಿ ಹೇಳಿದೆ.
ಸದ್ಯ ಹೀರೋ ಕಂಪನಿಯಲ್ಲಿರುವ ಏಕೈಕ ಬಿಎಸ್-VI ದ್ವಿಚಕ್ರ ವಾಹನ ಎಂದರೆ ಸ್ಲೆಂಡರ್ ಐ ಸ್ಮಾರ್ಟ್ ಆಗಿದೆ. ಬಿಎಸ್-IV ಸ್ಪೆಂಡರ್ ಐ ಸ್ಮಾರ್ಟ್ ಹಾಗೂ ಬಿಎಸ್- VI ಸ್ಲೆಂಡರ್ ಐ ಸ್ಪಾರ್ಟ್ ನಡುವಿನ ಬೆಲೆಯ ವ್ಯತ್ಯಾಸ 7,560 ರುಪಾಯಿ ಆಗಿದೆ.


Click it and Unblock the Notifications