ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 2023 ರಲ್ಲಿ, 2,000 ರೂಪಾಯಿಗಳ ನೋಟುಗಳನ್ನು ಚಲಾವಣೆಯಿಂದ ಹಿಂಡಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದೆ. ನೋಟುಗಳನ್ನು ಬ್ಯಾಂಕುಗಳ ಮೂಲಕ ಬದಲಾವಣೆ ಮಾಡಿಕೊಳ್ಳಲು ನಾಗರಿಕರಿಗೆ ಸೆಪ್ಟೆಂಬರ್ 30 ರವರೆಗೆ ಸಮಯ ನೀಡಲಾಗಿದೆ. ಈಗ ಈ ಗಡುವು ವಿಸ್ತರಣೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ.
ಈ ನಡುವೆ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಮತ್ತು ಇತರ 14 ಸಂಸದರು 2000 ರೂಪಾಯಿ ನೋಟು ಅಮಾನ್ಯೀಕರಣದ ಕುರಿತು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಬಳಿ ಪ್ರಶ್ನೆಯನ್ನು ಕೇಳಿದ್ದಾರೆ. ಕಪ್ಪುಹಣವನ್ನು ಮಟ್ಟಹಾಕಲು ಸರ್ಕಾರವು ಇತರ ಹೆಚ್ಚಿನ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಲು ಯೋಚನೆ ಮಾಡುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಂತಹ ಯೋಜನೆಗಳ ವಿವರಗಳನ್ನು, ಕಪ್ಪುಹಣ ಮತ್ತು ನಕಲಿ ಕರೆನ್ಸಿಯನ್ನು ತಡೆಯಲು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಕೇಳಿದ್ದಾರೆ.

ಇದಕ್ಕೆ ಪಂಕಜ್ ಚೌಧರಿ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು ಇತರ ಹೆಚ್ಚಿನ ಮುಖಬೆಲೆಯ ಕರೆನ್ಸಿಗಳನ್ನು ಅಮಾನ್ಯೀಕರಣ ಮಾಡುವ ಯಾವುದೇ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, 2,000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವ ಅಥವಾ ಡೆಪಾಸಿಟ್ ಮಾಡುವ ಗಡುವನ್ನು ವಿಸ್ತರಿಸುವ ಯಾವುದೇ ಯೋಜನೆ ಇಲ್ಲ ಎಂದು ಹಣಕಾಸು ರಾಜ್ಯ ಸಚಿವರು ಹೇಳಿದ್ದಾರೆ.
ಈ ಹಿಂದೆ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗಡುವನ್ನು ವಿಸ್ತರಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. ಆದರೆ ನಂತರ ಅವರು ಸೆಪ್ಟೆಂಬರ್‌ನೊಳಗೆ ನೋಟುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಾಪಾಸ್ ಪಡೆಯುವ ನಿರೀಕ್ಷೆಯಿದೆ ಎಂದು ಸ್ಪಷ್ಟಪಡಿಸಿದರು. ಸಾರ್ವಜನಿಕರು ಬ್ಯಾಂಕ್‌ಗೆ ಧಾವಿಸದಂತೆ ಸಲಹೆ ನೀಡಿದ ಶಕ್ತಿಕಾಂತ ದಾಸ್, ಕಾನೂನುಬದ್ಧ ಟೆಂಡರ್ ಸ್ಥಿತಿ ಮುಂದುವರಿಯುತ್ತದೆ ಎಂದು ಹೇಳಿದರು.
ವಿದೇಶದಲ್ಲಿ ನೆಲೆಸಿರುವವರಿಗೆ, ತೊಂದರೆ ಉಂಟಾದರೆ ನಾವು ಅದಕ್ಕೆ ಸಮಯವಕಾಶವನ್ನು ನೀಡಲಾಗುವುದೇ ಎಂದು ನೋಡುತ್ತೇವೆ ಎಂದು ಭರವಸೆ ನೀಡಿದ್ದರು. ಈ ಹಿಂದೆ 2018-19ರಲ್ಲಿ 2000 ರೂಪಾಯಿ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. 2,000 ರೂಪಾಯಿ ನೋಟುಗಳನ್ನು ಸಾಮಾನ್ಯವಾಗಿ ವಹಿವಾಟುಗಳಲ್ಲಿ ಬಳಸಲಾಗುವುದಿಲ್ಲ. ದೇಶದಲ್ಲಿ ಹಣಕಾಸು ಅವಶ್ಯಕತೆಗಳನ್ನು ಪೂರೈಸಲು ಇತರ ಮುಖಬೆಲೆಯ ನೋಟುಗಳು ಸಾಕಾಗುತ್ತದೆ ಎಂದು ಆರ್‌ಬಿಐ ಪ್ರತಿಪಾದಿಸಿದೆ.
ಆರ್‌ಬಿಐ ಪ್ರಕಾರ, ಚಲಾವಣೆಯಲ್ಲಿರುವ 2,000 ರೂಪಾಯಿ ಕರೆನ್ಸಿ ನೋಟುಗಳಲ್ಲಿ ಸರಿಸುಮಾರು ಶೇಕಡ 76ರಷ್ಟು ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ. ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ಒಂದು ವಾರದಲ್ಲೇ 2000 ರೂಪಾಯಿ ಮುಖಬೆಲೆಯ 14,000 ಕೋಟಿ ರೂಪಾಯಿಯನ್ನು ಡೆಪಾಸಿಟ್ ಮಾಡಲಾಗಿದೆ. ಇನ್ನು 3,000 ಕೋಟಿ ರೂಪಾಯಿಯಷ್ಟು 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡಲಾಗಿದೆ.
ಈಗಾಗಲೇ ಆರ್‌ಬಿಐ 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಆತಂಕ ಬೇಡ ಎಂದು ಜನರಿಗೆ ಮಾಹಿತಿ ನೀಡಿದೆ. ಆರ್‌ಬಿಐ ನೋಟು ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಸಮಯವಕಾಶವನ್ನು ನೀಡಿದ್ದು ನೀವು ಒಂದು ಬಾರಿ 2000 ರೂಪಾಯಿಯ 10 ನೋಟುಗಳಂತೆ ಒಟ್ಟು 20 ಸಾವಿರ ರೂಪಾಯಿ ಜಮೆ ಅಥವಾ ಬದಲಾವಣೆ ಮಾಡಿಕೊಳ್ಳಬಹುದು.
ಇನ್ನು ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. "ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. ನಾವು ಒಟ್ಟಾಗಿ ಎಷ್ಟು ನೋಟುಗಳು ವಾಪಾಸ್ ಲಭ್ಯವಾಗುತ್ತದೆ ಎಂದು ನೋಡುತ್ತೇವೆ. ಸೆಪ್ಟೆಂಬರ್ 30ರ ನಂತದ ಏನಾಗುತ್ತದೆ ಎಂಬ ಬಗ್ಗೆ ಈಗಲೇ ನಾವು ಊಹೆ ಮಾಡಲು ಸಾಧ್ಯವಿಲ್ಲ," ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.


Click it and Unblock the Notifications