ಬೆಂಗಳೂರು, ಸೆ 12: "ನಾವು ಕೃತಕ ಬುದ್ಧಿಮತ್ತೆ(AI), ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಂತಹ ಕ್ಷೇತ್ರಗಳಿಗೆ ಪ್ರತ್ಯೇಕ ಕೈಗಾರಿಕ ನೀತಿ ಹೊಂದಿದ್ದೇವೆ. ಈ ನೀತಿಯಲ್ಲಿ 6-10 ವರ್ಷಗಳವರೆಗೆ ವಾರ್ಷಿಕ ವಹಿವಾಟಿನಲ್ಲಿ 2.25% ಬಂಡವಾಳ ಉತ್ತೇಜನ ಸಬ್ಸಿಡಿ ನೀಡಲಾಗುವುದು" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನೆದರ್ಲೆಂಡ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಹಾಗೂ ಆ ದೇಶದ ಕಂಪನಿಗಳ ಪ್ರಮುಖರ ಜತೆ ಸಭೆ ನಡೆಸಿದ ಡಿ.ಕೆ. ಶಿವಕುಮಾರ್, ನಮ್ಮಲ್ಲಿ ಏರೋಸ್ಪೇಸ್, ರಕ್ಷಣೆ, ಸಂಚಾರ, ಸಂಶೋಧನೆ ಮತ್ತು ಅಭಿವೃದ್ಧಿ, ದತ್ತಾಂಶ ಕೇಂದ್ರ, ಮತ್ತು ಜವಳಿ ಕ್ಷೇತ್ರಗಳಿಗೆ ಪ್ರತ್ಯೇಕ ನೀತಿ ಹೊಂದಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಬಂಡವಾಳ ಆಕರ್ಷಣೆಗೆ ಸಹಾಯಕವಾಗಿವೆ. ಉತ್ತಮ ಕಾರ್ಮಿಕ ನೀತಿ ಮೂಲಕ ಕಂಪನಿಗಳು ಹಾಗೂ ಉದ್ಯೋಗಿಗಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬಂಡವಾಳ ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗ ಕರ್ನಾಟಕ ರಾಜ್ಯ 2022-23ನೇ ಸಾಲಿನಲ್ಲಿ 4.67 ಟ್ರಿಲಿಯನ್ ಬಂಡವಾಳವನ್ನು ಆಕರ್ಷಿಸಿದೆ. ಆ ಮೂಲಕ ಕರ್ನಾಟಕ ರಾಜ್ಯ 400 ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳ ತಾಣವಾಗಿದೆ. ಕರ್ನಾಟಕ ರಾಜ್ಯ ಎಲ್ಲಾ ಪ್ರಮುಖ ಮಾರುಕಟ್ಟೆಗಳಿಗೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಹೊಂದುವ ಮೂಲಕ ಭಾರತದಲ್ಲಿ ಬಂಡವಾಳ ಹೂಡಿಕೆ ಹಾಗೂ ರಫ್ತಿನಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಡಿಸಿಎಂ ಹೇಳಿದರು.
2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು
2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, 47 ರಾಷ್ಟ್ರೀಯ ಹೆದ್ದಾರಿಗಳು, 145 ರಾಜ್ಯ ಹೆದ್ದಾರಿಗಳು, 3,818 ಕಿ.ಮೀ ರೈಲ್ವೇ ಸಂಪರ್ಕ, 1 ದೊಡ್ಡ ಬಂದರು ಹಾಗೂ 13 ಸಣ್ಣ ಬಂದರುಗಳನ್ನು ಹೊಂದಿದೆ. ರಾಜ್ಯ ಸರ್ಕಾರ ಬಂಡವಾಳ ಆಕರ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಡಿಪಿಐಐಟಿಯ ಉದ್ಯಮ ಸ್ನೇಹಿ ಸೂಚ್ಯಂಕದಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ ಎಂದು ಡಿ.ಕೆ.ಶಿವಕುಮಾರ್ ನಿಯೋಗಕ್ಕೆ ಹೇಳಿದರು.
2,050 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪಾರ್ಕ್
ಇಡೀ ವಿಶ್ವದಲ್ಲೇ 2,050 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪಾರ್ಕ್ ಅನ್ನು ಕರ್ನಾಟಕದ ಪಾವಗಡದಲ್ಲಿ ನಿರ್ಮಿಸಲಾಗಿದೆ. ದೇಶದಲ್ಲಿ ಮೊದಲು ಇವಿ ನೀತಿ ಪ್ರಕಟಿಸಿದ ರಾಜ್ಯ ಎಂದರೆ ಅದು ಕರ್ನಾಟಕ. ಬೆಂಗಳೂರು ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರವಾಗಿದ್ದು, ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ ನಲ್ಲಿ 16ನೇ ಸ್ಥಾನ ಪಡೆದಿದೆ.
ಭಾರತದ ತಂತ್ರಜ್ಞಾನ ನಗರವಾಗಿ ಬೆಂಗಳೂರು
ಜೊತೆಗೆ ಭಾರತದ ತಂತ್ರಜ್ಞಾನ ನಗರವಾಗಿ ಪರಿಗಣಿಸಲಾಗಿದ್ದು, ಅಮೆರಿಕದ ಕಂಪನಿಗಳಿಗೆ ನೆಚ್ಚಿನ ತಾಣವಾಗಿದೆ. ಕಾಸ್ಮೋಪಾಲಿಟನ್ ಸಂಸ್ಕೃತಿ, ಪ್ರತಿಭಾವಂತ ಸಂಪನ್ಮೂಲ, ಆವಿಷ್ಕಾರದ ಸಂಸ್ಕೃತಿ, ಮಾನವ ಸಂಪನ್ಮೂಲ ಬೆಂಗಳೂರಿನ ಶಕ್ತಿಯಾಗಿವೆ. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ. ಇನ್ನು ಅನೇಕ ಸುಂದರ ಹಾಗೂ ಪ್ರಬಲ ನಗರಗಳಿವೆ. ಈ ನಗರಗಳು ಅತ್ಯುತ್ತಮ ಮಾನವ ಸಂಪನ್ಮೂಲ ಹೊಂದಿದ್ದು, ಬೆಂಗಳೂರಿನ ಪರಿಸರವನ್ನೇ ಹೊಂದಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೈಗಾರಿಕೆಗಳು ಇತರ ನಗರಗಳತ್ತವೂ ಸಾಗುತ್ತಿದೆ
ಕೈಗಾರಿಕೆಗಳು ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ತುಮಕೂರು, ಬೆಳಗಾವಿ, ಕಲ್ಬುರ್ಗಿ ನಗರಗಳತ್ತಲೂ ಗಮನಹರಿಸಬೇಕಿದೆ. ಈ ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಐಟಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಈ ನಗರಗಳು ಉತ್ತಮ ಅವಕಾಶವನ್ನು ಸೃಷ್ಟಿಸಬಲ್ಲದು. ಕೈಗಾರಿಕೆಗಳು ಬೆಂಗಳೂರಿನ ಹೊರತಾಗಿ ಈ ನಗರಗಳಲ್ಲಿ ಆರಂಭಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಇದರ ಪ್ರಯೋಜನವನ್ನು ಬಳಸಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಮ್ಮ ರಾಜ್ಯ ಭವ್ಯ ಪರಂಪರೆ ಹೊಂದಿದೆ
"ನಮ್ಮ ರಾಜ್ಯ ಭವ್ಯ ಪರಂಪರೆ ಹೊಂದಿದ್ದು, ತಂತ್ರಜ್ಞಾನ ಮತ್ತು ಉತ್ಪಾದನೆಯಿಂದ ಕೃಷಿ ಮತ್ತು ಪ್ರವಾಸೋದ್ಯಮದವರೆಗೂ ಎಲ್ಲಾ ವಲಯಗಳಿಗೆ ಸೂಕ್ತವಾಗಿದೆ. ವ್ಯಾಪಾರ ವೃದ್ಧಿ, ಆವಿಷ್ಕಾರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ನಾವು ಬದ್ಧವಾಗಿದ್ದೇವೆ".
"ನಿಮ್ಮ ರಾಷ್ಟ್ರದ ಜತೆಗೆ ಉತ್ತಮ ಬಾಂಧವ್ಯ ಬೆಸೆದು ಸುಸ್ಥಿರ ಅಭಿವೃದ್ಧಿ ಹಾಗೂ ಪ್ರಗತಿ ಸಾಧಿಸಲು ನಾವು ಇಚ್ಛಿಸುತ್ತೇವೆ. ನಿಮ್ಮ ಭವಿಷ್ಯದ ಹೆಜ್ಜೆಯಲ್ಲಿ ನಾವು ಹೇಗೆ ನಿಮಗೆ ಸಹಕಾರ ನೀಡಬೇಕು ಎಂದು ತಿಳಿಯಲು ನಾವು ಉತ್ಸುಕರಾಗಿದ್ದೇವೆ. ನಾವು ಒಂದಾಗಿ ನಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳೋಣ" ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.


Click it and Unblock the Notifications