ಬೆಂಗಳೂರು, ಆಗಸ್ಟ್ 29: ಕರ್ನಾಟಕದ ಉತ್ಸಾಹದ ಕೊರತೆಯ ಹೊರತಾಗಿಯೂ, ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನವರೆಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸಲು ಉತ್ಸುಕತೆ ತೋರುತ್ತಿದೆ. ಇದು ರಾಜ್ಯ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.
ಈ ಮಧ್ಯೆ, ಬೊಮ್ಮಸಂದ್ರ - ಹೊಸೂರು ಮೆಟ್ರೋ ಯೋಜನೆ ಕುರಿತು ಚೆನ್ನೈ ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ ಮತ್ತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮಧ್ಯೆ ಸಭೆ ನಡೆದಿದೆ. ಆದ್ರೆ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾಂತಿನಗರದಲ್ಲಿರುವ ಬಿಎಂಆರ್‌ಸಿಎಲ್ ಕಚೇರಿಯಲ್ಲಿ ಸಿಎಂಆರ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಸಿದ್ದಿಕ್ ಅವರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಚೆನ್ನೈ ಮೆಟ್ರೋ ಅಧಿಕಾರಿಗಳು ಯೋಜನೆಯ ತಾಂತ್ರಿಕ ಅಂಶಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರು ಕೆಲಸ ಮಾಡುತ್ತಿರುವ ವಿವರವಾದ ಕಾರ್ಯಸಾಧ್ಯತೆಯ ಅಧ್ಯಯನ ವರದಿ (ಡಿಎಫ್‌ಆರ್) ಮುಕ್ತಾಯದ ಹಂತದಲ್ಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ರಾಜ್ಯಗಳ ನಡುವೆ ವೆಚ್ಚವನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ ಎಂಬುದರ ಕುರಿತು ಕೆಲವು ಅನಿಶ್ಚಿತತೆಯಿದ್ದು, ತಮಿಳುನಾಡಿನ ಕಡೆಯಿಂದ ಬಂದ ಈ ಯೋಜನೆಗೆ ಕರ್ನಾಟಕವು ಆರ್ಥಿಕವಾಗಿ ಕೊಡುಗೆ ನೀಡುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಚೆನ್ನೈ ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ ಪ್ರಸ್ತಾಪಿಸಿರುವ 6,900 ಕೋಟಿ ರೂಪಾಯಿ ವೆಚ್ಚದ ಬೊಮ್ಮಸಂದ್ರ-ಹೊಸೂರು ಮೆಟ್ರೊ ಯೋಜನೆಗೆ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಬೆಂಗಳೂರಿನ ಐಟಿ ಸಿಟಿ ಹೊಸೂರಿನತ್ತ ಸಾಗುವ ಅಪಾಯವಿದೆ. ಯಾಕೆಂದರೆ, ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರವು ಎರಡು ತಿಂಗಳ ಹಿಂದೆ ಘೋಷಿಸಿದೆ. ಇದ್ರ ಬೆನ್ನಲ್ಲೆ ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗವನ್ನು ಕೈಗಾರಿಕಾ ಕೇಂದ್ರವಾದ ಹೊಸೂರಿಗೆ ವಿಸ್ತರಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಬೇಡಿಕೆ ಜೋರಾಗಿ ಬೆಳೆಯುತ್ತಿರುವಾಗ ಮತ್ತು ರಾಜ್ಯ ಸರ್ಕಾರ ಅದಕ್ಕಾಗಿ ಭೂಮಿಗಾಗಿ ಹುಡುಕಾಟ ನಡೆಸುತ್ತಿರುವಾಗ, ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿದ್ರೆ, ಬೆಂಗಳೂರಿನ ಐಟಿ ಕಾರಿಡಾರ್‌ನಿಂದ ತಡೆರಹಿತ ಮೆಟ್ರೋ ಸಂಪರ್ಕ ಹೊಸೂರಿಗೆ ಸಿಕ್ಕಲ್ಲಿ ಅದು ಬೆಂಗಳೂರಿಗೆ ಹೊಡೆತ ನೀಡಲಿದೆ. ಇದು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ನಾಶಪಡಿಸುವುದು ಮಾತ್ರವಲ್ಲದೆ ನಗರದಿಂದ ಹೂಡಿಕೆಗಳನ್ನು ಬೇರೆಡೆಗೆ ತಿರುಗಿಸಬಹುದು ಎಂದು ಭಯ ಶುರುವಾಗಿದೆ.
ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ಆಗ್ನೇಯ ಹೊರವಲಯದಲ್ಲಿರುವ ಐಟಿ ಕಾರಿಡಾರ್‌ನಿಂದ ತುಂಬಾ ದೂರದಲ್ಲಿದೆ. ಆದರೆ ಹೊಸೂರು, ದೇವನಹಳ್ಳಿಗಿಂತ ಹತ್ತಿರದಲ್ಲಿದೆ.
ಬೊಮ್ಮಸಂದ್ರದಿಂದ ಅತ್ತಿಬೆಲೆ ಮೂಲಕ ಹೊಸೂರಿಗೆ ಮಾಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಎಂಆರ್‌ಟಿಎಸ್) ಮಾರ್ಗವನ್ನು ವಿಸ್ತರಿಸುವ ಕಾರ್ಯಸಾಧ್ಯತೆಯನ್ನು ಸಿಎಂಆರ್‌ಎಲ್ ಅಧಿಕಾರಿಗಳು ತಮ್ಮ ಕಡೆಯಿಂದ ಸಕ್ರಿಯವಾಗಿ ಮೌಲ್ಯಮಾಪನ ಮಾಡುತ್ತಿದ್ದಾರೆ. ಈ ಪ್ರಸ್ತಾವಿತ ವಿಸ್ತರಣೆಯು 23 ಕಿಲೋಮೀಟರ್‌ಗಳನ್ನು ವ್ಯಾಪಿಸಿದೆ. ಸರಿಸುಮಾರು 11 ಕಿಲೋಮೀಟರ್‌ಗಳು ತಮಿಳುನಾಡಿನಲ್ಲಿ ಮತ್ತು 12 ಕಿಲೋಮೀಟರ್‌ಗಳು ಕರ್ನಾಟಕದಲ್ಲಿ ಬರುತ್ತದೆ. ಈ ಯೋಜನೆಯಡಿ ಕರ್ನಾಟಕದಲ್ಲಿ ಐದು ಮತ್ತು ತಮಿಳುನಾಡಿನಲ್ಲಿ ಏಳು ಮೆಟ್ರೋ ನಿಲ್ದಾಣ ಬರಲಿದೆ. ಈ ಮಾರ್ಗವು ಒಟ್ಟೂ 12 ಮೆಟ್ರೋ ನಿಲ್ದಾಣಗಳು ಮತ್ತು ಡಿಪೋವನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಹೊಸೂರು ಮೆಟ್ರೋವನ್ನು ಮುಂಬರುವ ಬೆಂಗಳೂರು ಮೆಟ್ರೋದ ಹಳದಿ ಮಾರ್ಗದೊಂದಿಗೆ ಸಂಪರ್ಕಿಸಲು ಯೋಜಿಸಲಾಗಿದೆ. 18.82 ಕಿಲೋಮೀಟರ್ ಹಳದಿ ಮಾರ್ಗವು ಈ ವರ್ಷದ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದೆ. ಇದು ದಕ್ಷಿಣ ಬೆಂಗಳೂರಿನ ಪ್ರದೇಶಗಳಲ್ಲಿರುವ ವಿಶೇಷವಾಗಿ ಪ್ರಮುಖ ಐಟಿ ಮತ್ತು ಬಯೋಟೆಕ್ ಕಂಪನಿಗಳಾದ ಇನ್ಫೋಸಿಸ್ ಮತ್ತು ಬಯೋಕಾನ್‌ಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ.


Click it and Unblock the Notifications