ಎನ್ ಎಸ್ ಇ ನಿಫ್ಟಿ 50 ಸೂಚ್ಯಂಕವು ಬುಧವಾರದಂದು (ನವೆಂಬರ್ 11, 2020) 100 ಲಕ್ಷ ಕೋಟಿ ರುಪಾಯಿಯ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಮೊದಲ ಬಾರಿಗೆ ದಾಟಿದೆ. ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವು ಸತತ ಎಂಟು ಸೆಷನ್ ಏರಿಕೆ ಕಂಡ ಮೇಲೆ ಮಾರುಕಟ್ಟೆ ಸೂಚ್ಯಂಕಗಳ ಮಾರುಕಟ್ಟೆ ಮೌಲ್ಯವು 165 ಲಕ್ಷ ಕೋಟಿ ರುಪಾಯಿ ಹೆಚ್ಚಳ ಆಗಿದೆ. ಬಿಎಸ್ ಇ- 30 ಸೆನ್ಸೆಕ್ಸ್ ಸೂಚ್ಯಂಕದ ಮಾರುಕಟ್ಟೆ ಬಂಡವಾಳವು ಎಂಬತ್ತು ಲಕ್ಷ ಕೋಟಿಗೂ ಹೆಚ್ಚಾಗಿದೆ.
ಬುಧವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1 ಪರ್ಸೆಂಟ್ ಹೆಚ್ಚಳವಾಗಿ, 43,708.47 ಹಾಗೂ ನಿಫ್ಟಿ 50 ಸೂಚ್ಯಂಕವು 12,769.75 ತಲುಪಿದ ಮೇಲೆ ಮಾರುಕಟ್ಟೆ ಬಂಡವಾಳ ಮೌಲ್ಯವು ಈ ಎತ್ತರಕ್ಕೆ ಏರಿದೆ.
ಕೊರೊನಾ ಲಸಿಕೆ ಪರೀಕ್ಷೆ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿನ ಆಶಾಭಾವನೆ ದೇಶೀಯ ಮಾರುಕಟ್ಟೆಯಲ್ಲೂ ಕಾಣಿಸಿಕೊಂಡಿದೆ. ಜಾಗತಿಕ ಮಾರ್ಕೆಟ್ 'V' ಆಕಾರದ ಚೇತರಿಕೆ ಕಾಣಿಸಿಕೊಳ್ಳಲಿದೆ ಎಂಬ ಆಶಾವಾದದಲ್ಲಿ ಹೂಡಿಕೆದಾರರಿದ್ದಾರೆ. ಸೋಮವಾರದಂದು ಪಿಫೈಜರ್ ನಿಂದ ಕೊರೊನಾ ಲಸಿಕೆ ಪರೀಕ್ಷೆಯಲ್ಲಿನ ಶೇಕಡಾ ತೊಂಬತ್ತರಷ್ಟು ಯಶಸ್ಸಿನ ಬಗ್ಗೆ ಘೋಷಿಸಲಾಗಿತ್ತು.

ಇನ್ನು ದ್ವಿತೀಯ ತ್ರೈಮಾಸಿಕದಲ್ಲಿ ಕಂಪೆನಿಗಳ ಫಲಿತಾಂಶ ನಿರೀಕ್ಷೆಗಿಂತ ಉತ್ತಮವಾಗಿದೆ. ಹಾಗೇ ಯುಎಸ್ ಆರ್ಥಿಕತೆಗೆ ಹೆಚ್ಚುವರಿಯಾಗಿ ಆರ್ಥಿಕ ಉತ್ತೇಜನದ ಬೆಂಬಲ, ಫೆಡ್ ರಿಸರ್ವ್ ನಿಂದ ಬಡ್ಡಿ ದರವನ್ನು ಕಡಿಮೆ ಇರಿಸಿರುವುದರಿಂದ ಭಾರತದಂಥ ಮಾರ್ಕೆಟ್ ಗಳಿಗೆ ಹಣ ಹರಿದು ಬರಲು ಕಾರಣವಾಗಿದೆ.
ಎಂಎಸ್ ಸಿಐ ಈಚೆಗಿನ ಘೋಷಣೆ ಪ್ರಕಾರ, ಭಾರತವು ಎಮರ್ಜಿಂಗ್ ಮಾರ್ಕೆಟ್ ಸೂಚ್ಯಂಕದಲ್ಲಿ ಮೇಲೇರಿದೆ. 2.5 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ಹಣ ಭಾರತಕ್ಕೆ ಹರಿದು ಬರುವ ಸಾಧ್ಯತೆ ಇದೆ.


Click it and Unblock the Notifications