ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಿಂದ (ಎನ್ ಎಸ್ ಇ) ಮಂಗಳವಾರ ತಿಳಿಸಿರುವ ಪ್ರಕಾರ, ಕಾರ್ವಿ ಸ್ಟಾಕ್ ಬ್ರೋಕಿಂಗ್ ಬಳಿ ಹಣ- ಷೇರುಗಳು ಸಿಲುಕಿಕೊಂಡಿದ್ದ 2.35 ಲಕ್ಷ ಹೂಡಿಕೆದಾರರಿಗೆ ಒಟ್ಟಾರೆಯಾಗಿ 2,300 ಕೋಟಿ ರುಪಾಯಿ ತೀರುವಳಿಯಾಗಿ ನೀಡಲಾಗಿದೆ. ಕಾರ್ವಿ ಸ್ಟಾಕ್ ಬ್ರೋಕಿಂಗ್ ನ ಯಾರೆಲ್ಲ ಗ್ರಾಹಕರಿಗೆ 30,000 ರುಪಾಯಿ ತನಕದ ಬಾಕಿ ಇತ್ತೋ ಅಂಥವರಿಗೆ ಸಂದಾಯ ಆಗಿದೆ.
ಸೆಬಿ ಮಾರ್ಗದರ್ಶನದಲ್ಲಿ ಇದು ಪೂರ್ಣವಾಗುತ್ತಿದ್ದು, ಆಯಾ ಗ್ರಾಹಕರಿಗೆ ಷೇರುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಕ್ಲಿಯರಿಂಗ್ ಕಾರ್ಪೊರೇಷನ್ ಗಳ ಬಳಿ ಇದ್ದ ಬ್ಯಾಂಕ್ ಖಾತ್ರಿ ಠೇವಣಿ ಬಳಕೆ ಹಾಗೂ ಕಾರ್ವಿ ಗ್ರೂಪ್ ಕಂಪೆನೀಸ್ ಬಳಿ ಇರುವ ಸೆಕ್ಯೂರಿಟಿಗಳನ್ನು ನಗದು ಮಾಡಲಾಗಿದೆ ಎಂದು ಎನ್ ಎಸ್ ಇ ವಕ್ತಾರರು ತಿಳಿಸಿದ್ದಾರೆ.
ಸೆಬಿ ಆದೇಶದಂತೆ 2019ರ ಡಿಸೆಂಬರ್ ನಿಂದ ಎನ್ ಎಸ್ ಇ ಹಾಗೂ ಬಿಎಸ್ ಇಯಲ್ಲಿ ಕಾರ್ವಿ ಸ್ಟಾಕ್ ಬ್ರೋಕಿಂಗ್ ಗೆ ಟ್ರೇಡಿಂಗ್ ಅವಕಾಶ ನಿಲ್ಲಿಸಲಾಗಿದೆ. ಇದರಿಂದಾಗಿ ಅಪಾರ ಸಂಖ್ಯೆಯಲ್ಲಿ ಬ್ರೋಕರ್ ಗ್ರಾಹಕರಿಗೆ ತಮ್ಮ ಹಣ, ಸೆಕ್ಯೂರಿಟೀಸ್ ಅಥವಾ ಎರಡೂ ಪಡೆಯುವುದು ಆಗುತ್ತಿರಲಿಲ್ಲ.

ಈಗಿನ ಗಮನ ಮುಖ್ಯವಾಗಿ ಸಣ್ಣ ಹೂಡಿಕೆದಾರರ ಮೇಲಿದೆ. ಯಾರಿಗೆ ಕಾರ್ವಿ ಸ್ಟಾಕ್ ಬ್ರೋಕಿಂಗ್ ನಿಂದ 30,000 ರುಪಾಯಿ ತನಕ ಬಾಕಿ ನೀಡಬೇಕೋ ಅಂಥವರಿಗೆ ಹಿಂತಿರುಗಿಸಲಾಗುತ್ತಿದೆ ಎಂದು ಎನ್ ಎಸ್ ಇ ಹೇಳಿಕೆಯಲ್ಲಿ ತಿಳಿಸಲಾಗಿದೆ.
2019ರ ಆಗಸ್ಟ್ ನಲ್ಲಿ ಎನ್ ಎಸ್ ಇಯಿಂದ ಕಾರ್ವಿ ಸ್ಟಾಕ್ ಬ್ರೋಕಿಂಗ್ ವ್ಯವಹಾರದ ಪುಸ್ತಕಗಳ ಲೆಕ್ಕ ಪರಿಶೋಧನೆ ಮಾಡಲಾಗಿತ್ತು. ಹಲವು ವರ್ಷಗಳಿಂದ ಗ್ರಾಹಕರ ಹಣವನ್ನು ಸಮೂಹದ ಇತರ ವ್ಯವಹಾರಗಳಿಗೆ ಕಾರ್ವಿ ಬಳಸುತ್ತಿದೆ ಎಂಬುದು ಆ ವೇಳೆ ಬಯಲಾಗಿತ್ತು.


Click it and Unblock the Notifications