ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಎಸ್‌ಬಿಐ ಲೈಫ್ ಪಾಲಿಸಿಗಳ ವಾರಸುದಾರರ ಸಂಕಷ್ಟಗಳನ್ನು ತಗ್ಗಿಸಲು, ವಿಮೆ ಪರಿಹಾರ ಇತ್ಯರ್ಥ (ಕ್ಲೇಮ್ ಸೆಟಲ್‌ಮೆಂಟ್) ಪ್ರಕ್ರಿಯೆ ಮತ್ತು ಪೂರಕ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಸುಲಭಗೊಳಿಸಲು ಕಂಪನಿಯು ಹಲವಾರು ತುರ್ತು ಕ್ರಮಗಳನ್ನು ತೆಗೆದುಕೊಂಡಿದೆ.
ದುರಂತದಲ್ಲಿ ಮಡಿದವರ ವಾರಸುದಾರರು ಸಲ್ಲಿಸುವ ಪರ್ಯಾಯ ಸೂಕ್ತ ಪುರಾವೆಗಳನ್ನು ಸ್ವೀಕರಿಸುವುದು ಮತ್ತು ಕುಟುಂಬವನ್ನು ಬೆಂಬಲಿಸುವುದು ಈ ಸಂಕಷ್ಟದ ಸಮಯದಲ್ಲಿ ತುಂಬ ಮಹತ್ವದ್ದಾಗಿದೆ ಎಂದು ಕಂಪನಿ ತಿಳಿಸಿದೆ.

ದುರಂತ ಘಟಿಸಿರುವ ಸ್ಥಳದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವಾಗ, ಈ ರೈಲು ಅಪಘಾತದಲ್ಲಿ ಗಾಯಗೊಂಡಿರುವ ಪಾಲಿಸಿದಾರರಿಗೆ ಮತ್ತು ಮಡಿದವರ ವಾರಸುದಾರರಾಗಿರುವ ಕುಟುಂಬ ಸದಸ್ಯರಿಗೆ ತುರ್ತಾಗಿ ಹಣಕಾಸಿನ ಪರಿಹಾರ ಒದಗಿಸಲು ಕ್ಲೇಮ್ ಇತ್ಯರ್ಥ ಪ್ರಕ್ರಿಯೆಯನ್ನು ತಕ್ಷಣವೇ ತ್ವರಿತಗೊಳಿಸಲು ಕಂಪನಿಯು ಹಲವಾರು ಕ್ರಮಗಳನ್ನು ಮತ್ತು ನೀತಿಗಳನ್ನು ಜಾರಿಗೆ ತಂದಿದೆ.
ಕಂಪನಿಯು ತನ್ನ ಪಾಲಿಸಿದಾರರು ಮತ್ತು ಅವರ ಕುಟುಂಬದ ಸದಸ್ಯರ ಜೊತೆ ಬೆಂಬಲವಾಗಿ ನಿಲ್ಲುವುದಾಗಿ ನೀಡಿರುವ ಭರವಸೆ ಈಡೇರಿಸಲು, ಅಪಘಾತ ಸಂತ್ರಸ್ತರಿಗೆ ಪರಿಹಾರ ಹಣವು ತ್ವರಿತವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕಂಪನಿ ಹೇಳಿದೆ.
ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಮತ್ತು ದುರಂತದಲ್ಲಿ ಗಾಯಗೊಂಡವರು ಹಾಗೂ ಮೃತಪಟ್ಟವರ ಬಗ್ಗೆ ಎಸ್‌ಬಿಐ ಲೈಫ್‌ನಲ್ಲಿರುವ ನಮಗೆ ತುಂಬಾ ದುಃಖವಾಗಿದೆ. ಒಬ್ಬ ಜವಾಬ್ದಾರಿಯುತ ವಿಮೆ ಸಂಸ್ಥೆಯಾಗಿ, ವಿಮೆ ಪರಿಹಾರ ಇತ್ಯರ್ಥ ಪ್ರಕ್ರಿಯೆಯಲ್ಲಿ ಅಗತ್ಯ ಸಡಿಲಿಕೆಗಳನ್ನು ಮಾಡುವ ಮೂಲಕ ದುರಂತದಲ್ಲಿ ಮಡಿದವರ ಮತ್ತು ಅವರ ಹತ್ತಿರದ ಕುಟುಂಬದ ಸದಸ್ಯರಿಗೆ ಸುಲಭವಾಗಿ ಪರಿಹಾರ ಒದಗಿಸಲು ಅಗತ್ಯವಿರುವ ಎಲ್ಲ ಪ್ರಯತ್ನವನ್ನೂ ನಾವು ಮಾಡುತ್ತೇವೆ ಎಂದು ಹೇಳಿಕೆಯಲ್ಲಿ ಎಸ್‌ಬಿಐ ಲೈಫ್ ತಿಳಿಸಿದೆ.
ವಿಮೆ ಪರಿಹಾರ ಮನವಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಮೂಲಕ ಸಂತ್ರಸ್ತರಿಗೆ ಅಗತ್ಯ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ಕ್ಲೇಮ್‌ಗಳಿಗೆ ಸಂಬಂಧಿಸಿದ ಅನುಮಾನಗಳಿಗೆ ಸಮಯೋಚಿತವಾಗಿ ಪ್ರತಿಕ್ರಿಯಿಸಲು ಮತ್ತು ವಿಮೆ ಪರಿಹಾರ ಮನವಿಗಳನ್ನು ಯಾವುದೇ ಅಡೆತಡೆ ಇಲ್ಲದೇ ಇತ್ಯರ್ಥಪಡಿಸುವುದನ್ನು ಖಚಿತಪಡಿಸಿಕೊಳ್ಳಲು ಮೃತರ ವಾರಸುದಾರರಿಗೆ ಸಹಾಯ ಮಾಡಲು ಕಂಪನಿಯು ವಿಶೇಷ ಸಹಾಯ ಕೇಂದ್ರವನ್ನು ಸಹ ಸ್ಥಾಪಿಸಿದೆ ಎಂದು ಕಂಪನಿ ಉಲ್ಲೇಖಿಸಿದೆ.
ಸಂತ್ರಸ್ತರ ಸಂಬಂಧಿಕರು ಕಂಪನಿ ಅಧಿಕಾರಿಗಳನ್ನು [email protected] ಇ-ಮೇಲ್ ಮೂಲಕ ನೇರವಾಗಿ ಸಂಪರ್ಕಿಸಬಹುದು. ಉಚಿತ ಕರೆ ಸಂಖ್ಯೆ- 1800 267 9090 ಗೆ ಕರೆ ಮಾಡಿಯೂ ಮಾಹಿತಿ ಪಡೆಯಬಹುದು.
ಸಂತ್ರಸ್ತರಿಗೆ ಕ್ಲೈಮ್ ಪ್ರಕ್ರಿಯೆ ಸರಳಗೊಳಿಸಿದ ಎಲ್‌ಐಸಿ
ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದ ಬಳಿಕ ಭಾರತದ ವಿಮಾ ದೈತ್ಯ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ. ಎಲ್‌ಐಸಿ ತ್ವರಿತ ಕ್ರಮದ ಅಗತ್ಯವನ್ನು ಗುರುತಿಸಿದೆ. ಎಲ್‌ಐಸಿಯು ಪೀಡಿತ ಕುಟುಂಬಗಳಿಗೆ ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಶನಿವಾರ ಸಂಜೆಯ ವೇಳೆಗೆ ಈ ಬಗ್ಗೆ ಭಾರತೀಯ ಜೀವ ವಿಮಾ ನಿಗಮ ಹೇಳಿಕೆಯನ್ನು ನೀಡಿದೆ. "ಬಾಲಸೋರ್ ರೈಲು ಅಪಘಾತದ ಬಗ್ಗೆ ನಮ್ಮ ಸಂತಾಪವನ್ನು ನಾವು ವ್ಯಕ್ತಪಡಿಸುತ್ತೇವೆ. ಈ ರೈಲು ಅಪಘಾತದಿಂದ ಪ್ರಭಾವಕ್ಕೆ ಒಳಗಾದವರ ಪರವಾಗಿ ನಿಲ್ಲಲು ಎಲ್ಐಸಿಯು ಬದ್ಧವಾಗಿದೆ," ಎಂದು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ್ ಮೊಹಾಂತಿ ಪುನರುಚ್ಚರಿಸಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡುವ ನಿಟ್ಟಿನಲ್ಲಿ ಎಲ್‌ಐಸಿ ಕ್ರಮವನ್ನು ಕೈಗೊಂಡಿದೆ. ಎಲ್‌ಐಸಿಯು ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ತ್ವರಿತವಾಗಿ ಕ್ಲೈಮ್ ಮಾಡಲು ಸಾಧ್ಯವಾಗುವಂತೆ ಪ್ರಕ್ರಿಯೆ ಸರಳಗೊಳಿಸಲಾಗಿದೆ ಎಂದು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ್ ಮೊಹಾಂತಿ ಹೇಳಿದ್ದಾರೆ.


Click it and Unblock the Notifications