ಪ್ರತಿ ದಿನಕ್ಕೆ 1.16 ಮಿಲಿಯನ್ ಬ್ಯಾರೆಲ್‌ಗಳ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಒಪೆಕ್ಸ್ ಘೋಷಣೆ ಮಾಡಿದೆ. ಇದಾದ ಬಳಿಕ ಸೋಮವಾರದ ವಹಿವಾಟಿನಲ್ಲಿ ಕಚ್ಚಾತೈಲ ದರವು ಸುಮಾರು ಶೇಕಡ 8ರಷ್ಟು ಏರಿಕೆ ಕಂಡಿದೆ. ಬ್ರೆಂಟ್ ಕಚ್ಚಾ ತೈಲ ಫ್ಯೂಚರ್ ದರ ಶೇಕಡ 5.07ರಷ್ಟು ಏರಿಕೆಯಾಗಿ, ಪ್ರತಿ ಬ್ಯಾರೆಲ್‌ಗೆ 83.95 ಡಾಲರ್‌ಗೆ ತಲುಪಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲ ದರ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ ಶೇಕಡ 5.17ರಷ್ಟು ಏರಿಯಾಗಿ, 79.59 ಡಾಲರ್‌ಗೆ ತಲುಪಿದೆ.
ಈ ಉತ್ಪಾದನೆ ಕಡಿತವು 2023ರ ಮೇ ತಿಂಗಳಿನ ಅಂತ್ಯದಲ್ಲಿ ಪ್ರಾರಂಭವಾಗುತ್ತದೆ ಎಂದು ಸೌದಿ ಅರೇಬಿಯಾ ಘೋಷಣೆ ಮಾಡಿದೆ. ಹಾಗೆಯೇ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಇದು ನಮ್ಮ ಮುನ್ನೆಚ್ಚರಿಕೆ ಕ್ರಮವಾಗಿದೆ ಎಂದು ಕೂಡಾ ಹೇಳಿಕೊಂಡಿದೆ. ರಷ್ಯಾವು ತೈಲ ಉತ್ಪಾದನೆಯನ್ನು ಕಡಿತ ಮಾಡುವ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ಸೌದಿ ಅರೇಬಿಯಾ ಈ ಘೋಷಣೆಯನ್ನು ಮಾಡಿದೆ.

ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೊವಾಕ್, 2023 ರ ಅಂತ್ಯದವರೆಗೆ ದಿನಕ್ಕೆ 500,000 ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ರಷ್ಯಾದ ನಿರ್ಧಾರವನ್ನು ತಿಳಿಸಿದ್ದಾರೆ. ಕುವೈಟ್, ಓಮನ್, ಇರಾಕ್, ಅಲ್ಜೀರಿಯಾ ಮತ್ತು ಕಝಾಕಿಸ್ತಾನ್‌ನಲ್ಲಿ ತೈಲ ಉತ್ಪಾದನೆ ಕಡಿತ ಮಾಡಲಾಗುತ್ತಿದೆ. ಈ ನಡುವೆ ಒಪೆಕ್ಸ್‌ನ ಮುಖ್ಯ ದೇಶ ಸೌದಿ ಅರೇಬಿಯಾ ದಿನಕ್ಕೆ 500,000 ಬ್ಯಾರೆಲ್‌ಗಳನ್ನು ಮತ್ತು ಯುಎಇ ದಿನಕ್ಕೆ 144,000 ಬ್ಯಾರೆಲ್‌ಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ.
ಮಾರುಕಟ್ಟೆಯ ವಿಶ್ಲೇಷಕರು ಹೇಳುವುದೇನು?
ಈ ಬಗ್ಗೆ ಮಾಹಿತಿ ನೀಡಿರುವ ಸಿಎಂಸಿ ಮಾರುಕಟ್ಟೆಯ ವಿಶ್ಲೇಷಕಿ ಟೀನಾ ಟೆಂಗ್, "ಒಪೆಕ್+ ಕಚ್ಚಾ ತೈಲ ದರ ಉತ್ಪಾದನೆಯಲ್ಲಿ ಮತ್ತಷ್ಟು ಕಡಿತ ಮಾಡುವ ನಿರ್ಧಾರವನ್ನು ಮಾಡಿದೆ. ಇದಾದ ಬೆನ್ನಲ್ಲೇ ಕಚ್ಚಾ ತೈಲ ದರವು ಏರಿಕೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ತಲುಪಬಹುದು. ಚೀನಾದಲ್ಲಿ ಮತ್ತೆ ಎಲ್ಲ ಕಾರ್ಯಗಳು ಪುನರಾರಂಭ ಮತ್ತು ರಷ್ಯಾದಲ್ಲಿಯೂ ಕೂಡಾ ತೈಲ ಉತ್ಪಾದನೆ ಕಡಿತವು ಭಾರೀ ಪ್ರಭಾವವನ್ನು ಕಚ್ಚಾ ತೈಲ ದರದ ಮೇಲೆ ಉಂಟು ಮಾಡಲಿದೆ," ಎಂದು ಮಾಹಿತಿ ನೀಡಿದ್ದಾರೆ.
ಇನ್ನು ತೈಲ ಉತ್ಪಾದನೆಯಲ್ಲಿನ ಕಡಿತವು ಇಳಿಕೆಯಾಗುತ್ತಿರುವ ಹಣದುಬ್ಬರವು ಮತ್ತೆ ಏರಿಕೆಯಾಗುವಂತೆ ಮಾಡಬಹುದು. ಇದರಿಂದಾಗಿ ಕೇಂದ್ರ ಬ್ಯಾಂಕ್‌ಗಳ ದರ ನಿರ್ಧಾರಗಳನ್ನು ಮತ್ತಷ್ಟು ಜನ ಸಾಮಾನ್ಯರ ಮೇಲೆ ಕೆಟ್ಟ ಪ್ರಭಾವ ಉಂಟು ಮಾಡಲಿದೆ ಎಂಬ ಅಭಿಪ್ರಾಯವನ್ನು ಸಿಎಂಸಿ ಮಾರುಕಟ್ಟೆಯ ವಿಶ್ಲೇಷಕ ಟೀನಾ ಟೆಂಗ್ ವ್ಯಕ್ತಪಡಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಅಂದರೆ 2022ರಲ್ಲಿ ಪ್ರತಿ ದಿನಕ್ಕೆ 2 ಮಿಲಿಯನ್ ಬ್ಯಾರೆಲ್‌ನಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಬಗ್ಗೆ ನಿರ್ಧಾರವನ್ನು ಪ್ರಕಟಿಸಿತ್ತು. ವಿಶ್ವವು ಉಕ್ರೇನ್‌ನಲ್ಲಿ ಯುದ್ಧವನ್ನು ಎದುರಿಸುತ್ತಿರುವಾಗ ಉತ್ಪಾದನೆಯನ್ನು ಕಡಿತಗೊಳಿಸುವ ಒಪೆಕ್ಸ್ ನಿರ್ಧಾರದಿಂದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ನಿರಾಶೆಗೊಂಡಿದ್ದಾರೆ ಎಂದು ಆ ಸಂದರ್ಭದಲ್ಲಿ ಶ್ವೇತಭವನವು ಹೇಳಿದೆ. "ಅಕ್ಟೋಬರ್‌ನಲ್ಲಿ ತೈಲ ಉತ್ಪಾದನೆ ಕಡಿತಗೊಳಿಸಲಾಗಿದೆ. ಆದರೆ ಜಾಗತಿಕ ತೈಲ ಬೇಡಿಕೆಯು ಹೆಚ್ಚಾಗಿದೆ. ಚೀನಾದ ಚೇತರಿಕೆಯಿಂದಾಗಿ ಕಡಿಮೆಯಾಗಿಲ್ಲ," ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಅಭಿಪ್ರಾಯಿಸಿದೆ.
ಭಾರತದಲ್ಲಿ ಮತ್ತೆ ಪೆಟ್ರೋಲ್ ದರ ಹೆಚ್ಚಾಗುತ್ತಾ?
ಇನ್ನು ಜಾಗತಿಕವಾಗಿ ಕಚ್ಚಾ ತೈಲ ದರದ ಏರಿಳಿತವು ಭಾರತದಲ್ಲಿ ತೈಲ ಮಾರುಕಟ್ಟೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಈ ಹಿಂದೆ ಕಚ್ಚಾ ತೈಲ ದರ ಏರಿಕೆಯಾದಾಗ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಕಚ್ಚಾ ತೈಲ ದರ ಇಳಿಕೆಯಾದಾಗ ಯಾವುದೇ ದರ ಇಳಿಕೆ ಮಾಡಲಾಗಿಲ್ಲ. ಬದಲಾಗಿ ಕೋವಿಡ್ ಸಂದರ್ಭದಲ್ಲಿ ತೈಲ ಕಂಪನಿಗಳಿಗೆ ಆದ ನಷ್ಟವನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗ ಕಚ್ಚಾ ತೈಲ ದರ ಏರಿಕೆಯಾಗುವಾಗ ಮತ್ತೆ ತೈಲ ಕಂಪನಿಗಳು ದರ ಏರಿಕೆ ಮಾಡಬಹುದು.


Click it and Unblock the Notifications