ಕರ್ನಾಟಕ ಸರ್ಕಾರವು ಉದ್ಯೋಗಿಗಳನ್ನು ಏಪ್ರಿಲ್ 1, 2006 ಕ್ಕಿಂತ ಮೊದಲು ಸೂಚಿಸಿ ನಂತರದ ದಿನಾಂಕದಂದು ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ತರಲು ಅಧಿಸೂಚನೆಯನ್ನು ಹೊರಡಿಸಿದೆ. ಇದು ರಾಜ್ಯದಲ್ಲಿ ಸುಮಾರು 13,000 ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಹೊಸ ಪಿಂಚಣಿ ಯೋಜನೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಭರವಸೆ ನೀಡಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಾ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ನಮ್ಮ ಈ ನಿರ್ಧಾರ ನೆಮ್ಮದಿ ನೀಡಿದೆ ಎಂದು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಎಕ್ಸ್‌ನಲ್ಲಿ ಪೋಸ್ಟ್
"2006 ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ. ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ ಭೇಟಿ ನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ, ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ. ಎಲ್ಲಾ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ನಮ್ಮ ಈ ನಿರ್ಧಾರ ನೆಮ್ಮದಿ ನೀಡಿದೆ ಎಂದು ಭಾವಿಸಿದ್ದೇನೆ," ಎಂದು ಮುಖ್ಯಮಂತ್ರಿಗಳು ಎಕ್ಸ್‌ನಲ್ಲಿ ಬರೆದಿದ್ದಾರೆ.
ಸರ್ಕಾರಿ ಆದೇಶ ವಿವರ
ಪುಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ: 01.04.2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ: 01.04.2006ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣದಿಂದ ನೂತನ ಅಂಶದಾಯಿ ಕೊಡುಗೆ ಯೋಜನೆಯ (ರಾಷ್ಟ್ರೀಯ ಪಿಂಚಣಿ ಯೋಜನೆ) ವ್ಯಾಪ್ತಿಗೊಳಪಟ್ಟಿರುವ ಸರ್ಕಾರಿ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಳಕಂಡ ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿದೆ:-
1. ದಿನಾಂಕ: 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಇಚ್ಛಿಸಿದಲ್ಲಿ ತಮ್ಮ ಅಭಿಮತವನ್ನು ನಿಗಧಿತ ನಮೂನೆಯಲ್ಲಿ ದಿನಾಂಕ: 30.06.2024ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸತಕ್ಕದ್ದು, ಈ ಆಯ್ಕೆಯನ್ನು ಒಂದು ಬಾರಿಗೆ ಮಾತ್ರ ಚಲಾಯಿಸಲು ಅವಕಾಶವಿರುತ್ತದೆ.
2. ಒಂದು ಬಾರಿ ಮಾಡಿಕೊಂಡ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ.
3. ಮೇಲಿನ 1 ರಂತೆ ಆಯ್ಕೆಯನ್ನು ಚಲಾಯಿಸಲು ಅರ್ಹ ಸರ್ಕಾರಿ ನೌಕರರು ನಿಗಧಿತ ದಿನಾಂಕದೊಳಗೆ ತಮ್ಮ ಆಯ್ಕೆಯನ್ನು ಚಲಾಯಿಸದೇ ಇದ್ದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರೆಯುತ್ತಾರೆ.
4. ನೌಕರರ ಆಯ್ಕೆಗನುಸಾರ ಅವರು ಹಿಂದಿನ ಡಿಫೈನ್ ಪಿಂಚಣಿ ಯೋಜನೆಗೊಳಪಡಲು ನಿಗಧಿತ ಅರ್ಹತೆಯನ್ನು ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರವು ಖಚಿತಪಡಿಸಿಕೊಂಡು ದಿನಾಂಕ: 31.07.2024 ರೊಳಗಾಗಿ ಅಂತಹ ನೌಕರರನ್ನು ಹಿಂದಿನ ಡಿಫೆನ್ಸ್ ಪಿಂಚಣಿ ಯೋಜನೆಗೊಳಪಡಿಸಲು ಶಿಫಾರಸ್ಸಿನೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಕ್ರೋಢೀಕೃತ ಪುಸ್ತಾವನೆಯನ್ನು ಸಲ್ಲಿಸತಕ್ಕದ್ದು.
5. ಇಲಾಖಾ ಮುಖ್ಯಸ್ಥರು ತಮ್ಮ ಅಧೀನದ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾದ ಪಸ್ತಾವನೆಗಳನ್ನು ಪರಿಶೀಲಿಸಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಅರ್ಹ ನೌಕರರ ಪಟ್ಟಿಯನ್ನು ದಿನಾಂಕ: 31.08.2024ರೊಳಗೆ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಸಲ್ಲಿಸತಕ್ಕದ್ದು.
6. ದಿನಾಂಕ: 01.04.2006ರ ಪೂರ್ವದಲ್ಲಿನ ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ನೇಮಕಾತಿ ಅಧಿಸೂಚನೆಯನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರಿ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಇಚ್ಛಿಸಿದಲ್ಲಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ದಿನಾಂಕ: 30.06.2024ರೊಳಗಾಗಿ ಸಲ್ಲಿಸತಕ್ಕದ್ದು, ನೇಮಕಾತಿ ಪ್ರಾಧಿಕಾರವು ಅಂತಹ ಸರ್ಕಾರಿ ನೌಕರನು ಸಮುಚಿತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ ಅನ್ಯ ಇಲಾಖೆಗೆ ಆಯ್ಕೆಯಾದ ಹುದ್ದೆಗೆ ವರದಿಮಾಡಿಕೊಳ್ಳುವ ಸಲುವಾಗಿ ಬಿಡುಗಡೆ ಹೊಂದಿರುವುದನ್ನು ಖಚಿತಪಡಿಸಿಕೊಂಡು ಮೇಲಿನ ಕ್ರಮ ಸಂಖ್ಯೆ (4) ರಂತೆ ಪರಿಶೀಲಿಸಿ ಮೇಲಿನ ಕ್ರಮ ಸಂಖ್ಯೆ (5) ರಂತೆ ಮುಂದಿನ ಕ್ರಮಕ್ಕಾಗಿ ಕಳುಹಿಸತಕ್ಕದ್ದು.


Click it and Unblock the Notifications