ಸರ್ಕಾರದ ನೇರ ತೆರಿಗೆ ಸಂಗ್ರಹದಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. ಭಾರತವು ಆರ್ಥಿಕ ವರ್ಷ 2020-21ಕ್ಕೆ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಸಂಗ್ರಹಕ್ಕೆ ವಲಯವಾರು ಗುರಿ ನಿಗದಿ ಮಾಡಿದೆ. ಮುಂಬೈವೊಂದರಿಂದಲೇ ಒಟ್ಟು ಗುರಿಯ ಮೂರನೇ ಒಂದು ಭಾಗದಷ್ಟು ಸಂಗ್ರಹವಾಗುವ ನಿರೀಕ್ಷೆ ಇದೆ.
ದೇಶಾದ್ಯಂತದ ಒಟ್ಟು ಸಂಗ್ರಹ ಗುರಿ 13.19 ಲಕ್ಷ ಕೋಟಿ ರುಪಾಯಿ ಇದ್ದರೆ, ಅದರಲ್ಲಿ 31%ನಷ್ಟು ಮುಂಬೈನಿಂದಲೇ ಆದಾಯ ಬರುತ್ತದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಆ ನಂತರದ ಸ್ಥಾನ ದೆಹಲಿಯದು. ನಿಗದಿ ಮಾಡಿರುವ ಗುರಿ 1.89 ಲಕ್ಷ ಕೋಟಿ ರುಪಾಯಿ ಅಥವಾ ಒಟ್ಟು ಗುರಿಯ 14.3 ಪರ್ಸೆಂಟ್. ಅಂದ ಹಾಗೆ ಈ ಅಂಕಿ- ಅಂಶವನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಗುರುವಾರ ನೀಡಿದೆ.
ಈ ಸಾಲಿನಲ್ಲಿ ಮುಂದಿನ ಸ್ಥಾನ ಕರ್ನಾಟಕ ಹಾಗೂ ಗೋವಾ ವಲಯದ್ದು. 10.7 ಪರ್ಸೆಂಟ್ ಪಾಲು. ಇವುಗಳ ಬೆನ್ನಿಗೆ ತಮಿಳುನಾಡು ಹಾಗೂ ಪುದುಚೆರಿ ಒಟ್ಟಾರೆ ಗುರಿಯ 6.9 ಪರ್ಸೆಂಟ್ ಇವೆ. ಬಜೆಟ್ ನಲ್ಲಿ ನೇರ ತೆರಿಗೆ ಸಂಗ್ರಹದ ಗುರಿ ಎಷ್ಟು ಇಟ್ಟುಕೊಳ್ಳಲಾಗಿತ್ತೋ ಅಷ್ಟಕ್ಕೆ ಬದ್ಧವಾಗಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಏಕೆಂದರೆ ಕೊರೊನಾ ಕಾರಣಕ್ಕೆ ನಲವತ್ತು ದಿನಗಳ ಕಾಲ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವುದು ಪ್ರಭಾವ ಬೀರಿದೆ.

ಆರ್ಥಿಕ ಹಿಂಜರಿತ ಹಾಗೂ ಕೊರೊನಾ ಆತಂಕದ ಕಾರಣಕ್ಕೆ 2019-20ನೇ ಸಾಲಿನ ನಿವ್ವಳ ನೇರ ತೆರಿಗೆ ಸಂಗ್ರಹವು ಇಪ್ಪತ್ತು ವರ್ಷಗಳ ನಂತರ ಕುಸಿತ ಕಂಡಿತ್ತು. ಕಳೆದ ಆರ್ಥಿಕ ವರ್ಷದಲ್ಲಿ ಪರಿಷ್ಕೃತ ಗುರಿಯ ಮೊತ್ತವಾಗಿದ್ದ 10.27 ಲಕ್ಷ ಕೋಟಿ ರುಪಾಯಿಗಿಂತ 1.42 ಲಕ್ಷ ಕೋಟಿ ಕಡಿಮೆ ಸಂಗ್ರಹ ಆಗಿತ್ತು.
ಪ್ರಸಕ್ತ ಆರ್ಥಿಕ ವರ್ಷಕ್ಕೆ ಸರ್ಕಾರವು ಕಾರ್ಪೊರೇಟ್ ತೆರಿಗೆಯಿಂದ 6.81 ಲಕ್ಷ ಕೋಟಿ, ಆದಾಯ ತೆರಿಗೆ ಮತ್ತು ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಮೂಲಕ 6.38 ಲಕ್ಷ ಕೋಟಿ ರುಪಾಯಿ ತೆರಿಗೆ ಸಂಗ್ರಹದ ಗುರಿ ಇರಿಸಿಕೊಂಡಿದೆ.


Click it and Unblock the Notifications