ಶುಕ್ರವಾರ ಆರಂಭಿಕ ವಹಿವಾಟಿನಲ್ಲೇ ಭಾರತೀಯ ಷೇರು ಮಾರುಕಟ್ಟೆ ಏರಿಕೆಯನ್ನು ಕಂಡಿದೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ದಶಕದ ನಂತರ ದರ ಏರಿಕೆ ಮಾಡಿದೆ. ಈ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಏಷ್ಯಾದ ಷೇರುಗಳು ಏರಿಕೆಯನ್ನು ಕಂಡಿದೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ 11 ವರ್ಷದ ಬಳಿಕ ದರ ಏರಿಕೆ ಮಾಡಿದೆ.
30 ಷೇರು ಬಿಎಸ್‌ಇ 233 ಅಂಕ ಅಥವಾ ಶೇಕಡ 0.42ರಷ್ಟು ಏರಿಕೆಯಾಗಿ 55,915ಕ್ಕೆ ತಲುಪಿದೆ. ಇದೇ ಸಂದರ್ಭದಲ್ಲಿ ಎನ್‌ಎಸ್‌ಇ ನಿಫ್ಟಿ 72 ಅಂಕ ಅಥವಾ ಶೇಕಡ 0.44ರಷ್ಟು ಏರಿಕೆಯಾಗಿ 16,678ಕ್ಕೆ ವಹಿವಾಟು ಆರಂಭ ಮಾಡಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.60ರಷ್ಟು ಹಾಗೂ ಸ್ಮಾಲ್ ಕ್ಯಾಪ್ ಶೇಕಡ 0.58ರಷ್ಟು ಹೆಚ್ಚಳವಾಗಿದೆ. 15 ಸೆಕ್ಟರ್ ಗೇಜ್‌ಗಳೂ ಕೂಡಾ ಏರಿಕೆಯನ್ನು ಕಂಡಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ ಶೇಕಡ 0.79, ಶೇಕಡ 0.78 ಮತ್ತು ಶೇಕಡ 0.74ರಷ್ಟು ಏರಿಕೆಯಾಗಿದೆ.
ಗುರುವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 284 ಅಂಕ ಅಥವಾ ಶೇಕಡ 0.51ರಷ್ಟು ಏರಿಕೆಯಾಗಿ 55,682ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎನ್‌ಎಸ್‌ಇ ನಿಫ್ಟಿ 84 ಅಂಕ ಅಥವಾ ಶೇಕಡ 0.51ರಷ್ಟು ಏರಿಕೆಯಾಗಿ 16,605ಕ್ಕೆ ತಲುಪಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 1.38ರಷ್ಟು ಏರಿಕೆಯಾಗಿದೆ, ಸ್ಮಾಲ್ ಕ್ಯಾಪ್ ಶೇಕಡ 0.77ರಷ್ಟು ಏರಿಕೆಯಾಗಿದೆ.
ಯುಪಿಎಲ್ ಷೇರು ಭಾರೀ ಏರಿಕೆ
ಸ್ಟಾಕ್ ಮಾರುಕಟ್ಟೆಯಲ್ಲಿ ಯುಪಿಎಲ್ ಷೇರು ಟಾಪ್ ನಿಫ್ಟಿ ಗೇನರ್ ಆಗಿದೆ. ಯುಪಿಎಲ್ ಷೇರುಗಳು ಶೇಕಡ 1.84ರಷ್ಟು ಏರಿಕೆಯಾಗಿ ರೂಪಾಯಿ 717.95ಕ್ಕೆ ತಲುಪಿದೆ. ಈಚರ್ ಮೋಟರ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಅದಾನಿ ಪೋರ್ಟ್ಸ್, ಐಸಿಐಸಿಐ ಬ್ಯಾಂಕ್ ಕೂಡಾ ಭಾರೀ ಲಾಭವನ್ನು ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1,826 ಷೇರುಗಳು ಏರಿಕೆಯನ್ನು ಕಂಡಿದೆ. ಇದೇ ಸಂದರ್ಭದಲ್ಲಿ 630 ಷೇರುಗಳು ಇಳಿಕೆಯಾಗಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಟಾಪ್ ನಿಫ್ಟಿ ಗೇನರ್ ಆಗಿದೆ. ಇಂಡಸ್‌ಇಂಡ್ ಬ್ಯಾಂಕ್ ಸ್ಟಾಕ್‌ಗಳು ಶೇಕಡ 8.10ರಷ್ಟು ಏರಿಕೆಯಾಗಿ, ರೂಪಾಯಿ 950.50ಕ್ಕೆ ತಲುಪಿದೆ. ಜೂನ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಇಂಡಸ್‌ಇಂಡ್ ಬ್ಯಾಂಕ್ ನಿವ್ವಳ ಆದಾಯವು ಶೇಕಡ 60.5ರಷ್ಟು ಏರಿಕೆಯಾಗಿದೆ ಎಂಬ ವರದಿಯ ಬೆನ್ನಲ್ಲೇ ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಏರಿಕೆಯಾಗಿದೆ. ಆದರೆ ಶುಕ್ರವಾರ ವಹಿವಾಟಿನ ಆರಂಭದಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಕುಸಿತ ಕಂಡಿದೆ.
ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?
30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಕೋಟಕ್ ಬ್ಯಾಂಕ್, ನೆಸ್ಲೆ ಇಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್, ಐಸಿಐಸಿಐ ಬ್ಯಾಕ್, ಎಸ್‌ಬಿಐ, ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಭಾರೀ ಲಾಭವನ್ನು ಕಂಡಿದೆ. ಈ ಸಂದರ್ಭದಲ್ಲೇ ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಐಟಿಸಿ, ವಿಪ್ರೋ, ಎಚ್‌ಸಿಎಲ್ ಟೆಕ್, ಎಲ್&ಟಿ, ಎನ್‌ಟಿಪಿಸಿ ಷೇರುಗಳು ಕುಸಿತ ಕಂಡಿದೆ.
ಎಲ್‌ಐಸಿ ಷೇರುಗಳು ಹೇಗಿದೆ?
ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ, ಅತೀ ದೊಡ್ಡ ಹೂಡಿಕೆದಾರ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಪ್ರತಿ ವಹಿವಾಟಿನಲ್ಲೂ ಏರಿಳಿತ ಕಾಣುತ್ತಿದೆ. ಗುರುವಾರ ವಹಿವಾಟಿನ ಆರಂಭದಲ್ಲಿ ಎಲ್‌ಐಸಿ ಷೇರು ಶೇಕಡ 0.43ರಷ್ಟು ಏರಿಕೆಯಾಗಿ ರೂಪಾಯಿ 690.80ಕ್ಕೆ ತಲುಪಿತ್ತು. ಆದರೆ ಗುರುವಾರ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರು ಶೇಕಡ 0.04ರಷ್ಟು ಕುಸಿತ ಕಂಡು ರೂಪಾಯಿ 687.55ಕ್ಕೆ ತಲುಪಿದೆ. ಶುಕ್ರವಾರ ವಹಿವಾಟಿನ ಆರಂಭದಲ್ಲಿ ಎಲ್‌ಐಸಿ ಷೇರುಗಳು ಮತ್ತೆ ಏರಿಕೆಯನ್ನು ಕಂಡಿದೆ. ಎಲ್‌ಐಸಿ ಷೇರುಗಳು ಶೇಕಡ 0.57ರಷ್ಟು ಏರಿಕೆಯಾಗಿ, ರೂಪಾಯಿ 691.45ಕ್ಕೆ ತಲುಪಿದೆ.


Click it and Unblock the Notifications