ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ಬೈಟ್ ಡ್ಯಾನ್ಸ್ ಮಾಲೀಕತ್ವದ ಟಿಕ್ ಟಾಕ್ (ಕಡಿಮೆ ಅವಧಿ ವಿಡಿಯೋ ಅಪ್ಲಿಕೇಷನ್) ಅನ್ನು ಖರೀದಿ ಮಾಡುವುದಕ್ಕೆ ಒರಾಕಲ್ ಮುಂದಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಒರಾಕಲ್ ನಿಂದ ಕಾರ್ಪೊರೇಟ್ ವಲಯದಲ್ಲಿ ಕ್ಲೌಡ್ ಆಫರಿಂಗ್ ಮತ್ತು ಸಾಫ್ಟ್ ವೇರ್ ಲೈಸೆನ್ಸಿಂಗ್ ಮೂಲಕವೇ ದೊಡ್ಡ ಆದಾಯ ಬರುತ್ತದೆ.
ಒರಾಕಲ್ ಸಹ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರು ಅಮೆರಿಕ ಅಧ್ಯಕ್ಷರ ನಿಲುವನ್ನು ಬೆಂಬಲಿಸಿದ ತಂತ್ರಜ್ಞಾನ ಕಂಪೆನಿಗಳ ಮೇಲ್ ಸ್ತರದ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು. ಯು.ಎಸ್.ನಲ್ಲಿ ಟಿಕ್ ಟಾಕ್ ನಿಂದ ಬಂಡವಾಳ ಹಿಂತೆಗೆತಕ್ಕೆ ಬೈಟ್ ಡ್ಯಾನ್ಸ್ ಗೆ ಟ್ರಂಪ್ ಸೂಚನೆ ನೀಡಿದ್ದರು. ಯು.ಎಸ್. ಗ್ರಾಹಕರ ವೈಯಕ್ತಿಕ ಮಾಹಿತಿಯ ಸುರಕ್ಷತೆ ದೃಷ್ಟಿಯಿಂದ ಈ ಸೂಚನೆ ನೀಡಲಾಗುತ್ತಿದೆ ಎಂದು ಟ್ರಂಪ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು.
ಟಿಕ್ ಟಾಕ್ ನಲ್ಲಿ ಆಸಕ್ತಿ ತೋರಿರುವ ಜನರಲ್ ಅಟ್ಲಾಂಟಿಕ್, ಸಿಕೋಯಿಯ ಕ್ಯಾಪಿಟಲ್ ಜತೆಗೂ ಒಟ್ಟಾಗಿ ಕೆಲಸ ಮಾಡುತ್ತಿದೆ ಒರಾಕಲ್. ಈಗಾಗಲೇ ಮೈಕ್ರೋಸಾಫ್ಟ್ ಕೂಡ ಟಿಕ್ ಟಾಕ್ ಖರೀದಿಗೆ ಆಸಕ್ತಿ ತೋರಿಸಿದ್ದು, ಅದಕ್ಕಿಂತ ಉತ್ತಮ ಆಫರ್ ನೀಡುವ ಮೂಲಕ ಅದರ ವಿರುದ್ಧ ಸೆಣೆಸಬೇಕಿದೆ ಎಂದು ಮೂಲಗಳು ತಿಳಿಸಿವೆ.

ಟಿಕ್ ಟಾಕ್ ಖರೀದಿ ಮಾಡಬೇಕು ಎಂದು ಒರಾಕಲ್ ಗೆ ಆಸಕ್ತಿ ಇದೆ ಎಂಬುದನ್ನು ಮೊದಲಿಗೆ ದ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ಬೈಟ್ ಡ್ಯಾನ್ಸ್, ಟಿಕ್ ಟಾಕ್, ಒರಾಕಲ್, ಜನರಲ್ ಅಟ್ಲಾಂಟಿಕ್ ಹಾಗೂ ಸಿಕೋಯಿಯ ನಿರಾಕರಿಸಿದೆ.
ಈ ಸುದ್ದಿಯ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಒರಾಕಲ್ ಕಂಪೆನಿಯ ಷೇರುಗಳು 3.4% ಏರಿಕೆ ಕಂಡು, ವಹಿವಾಟು ನಡೆಸಿತು. ಟಿಕ್ ಟಾಕ್ ಖರೀದಿಗೆ ಟ್ವಿಟ್ಟರ್ ಕೂಡ ಆಸಕ್ತಿ ತೋರಿಸಿದ್ದು, ಈ ಕುರಿತು ಬೈಟ್ ಡ್ಯಾನ್ಸ್ ಜತೆಗೆ ಮಾತುಕತೆ ನಡೆಸಿದೆ. ಆದರೆ ಟ್ವಿಟ್ಟರ್ ಗೆ ಖರೀದಿ ಅವಕಾಶ ಬಹಳ ಕಡಿಮೆ ಎನ್ನಲಾಗುತ್ತಿದೆ.
ಅಮೆರಿಕದಲ್ಲಿ ಟಿಕ್ ಟಾಕ್ ವ್ಯವಹಾರವನ್ನು ಖರೀದಿ ಮಾಡುವುದಾದರೆ ಆ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿ ಮೈಕ್ರೋಸಾಫ್ಟ್ ಗೆ ಟ್ರಂಪ್ ಭರವಸೆ ನೀಡಿದ್ದಾರೆ. ಇದರ ಜತೆಗೆ ಇನ್ನೂ ಕೆಲ ಕಂಪೆನಿಗಳು ಖರೀದಿಯಲ್ಲಿ ಆಸಕ್ತಿಯಿಂದ ಇವೆ ಎಂದು ಕೂಡ ತಿಳಿಸಿದ್ದಾರೆ. ಅಂದ ಹಾಗೆ ಬೈಟ್ ಡ್ಯಾನ್ಸ್ ಗೆ ಟ್ರಂಪ್ 45 ದಿನಗಳ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಟಿಕ್ ಟಾಕ್ ಮಾರಾಟ ಮಾಡಬಹುದು. ಏಕೆಂದರೆ ಆ ನಂತರ ಟಿಕ್ ಟಾಕ್ ಅಥವಾ ಬೈಟ್ ಡ್ಯಾನ್ಸ್ ಅನ್ನು ನಿಷೇಧಿಸಲಾಗುವುದು ಎಂದು ತಿಳಿಸಲಾಗಿದೆ.
ಯು.ಎಸ್.ನಲ್ಲಿ ಟಿಕ್ ಟಾಕ್ ಜತೆಗೆ ಚೀನಾ ಮೂಲದ ಕಂಪೆನಿಯಾದ ಟೆನ್ಸೆಂಟ್ ನ WeChat ಕೂಡ ನಿಷೇಧಿಸಲು ಆದೇಶ ನೀಡಲಾಗಿದೆ.


Click it and Unblock the Notifications