ಮಿಡತೆ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನವು ಭಾರತದಿಂದ ಕೀಟನಾಶಕವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ. ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಎರಡೂ ದೇಶಗಳ ಮಧ್ಯೆ ಯಾವುದೇ ವ್ಯಾಪಾರ- ವ್ಯವಹಾರಗಳು ನಡೆಯುತ್ತಿಲ್ಲ. ಕಳೆದ ಆಗಸ್ಟ್ ನಲ್ಲಿ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಪಾಕಿಸ್ತಾನವು ಭಾರತದ ಜತೆಗಿನ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧವನ್ನು ಕಡಿದುಕೊಂಡಿದೆ.
ಜೂನ್- ಜುಲೈನಲ್ಲಿ ಮಿಡತೆಗಳ ದಾಳಿ ಆಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಅದಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಡಾ. ಫಲಕ್ ನಾಜ್ ಎಂಬುವವರು ಮಾಧ್ಯಮ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಇನ್ನು ಚೀನಾದಿಂದಲೂ ಕೀಟನಾಶಕವನ್ನು ಪಾಕಿಸ್ತಾನ ಆಮದು ಮಾಡಿಕೊಳ್ಳಬಹುದು. ಆದರೆ ಚೀನಾವೇ ಸದ್ಯಕ್ಕೆ ಕೊರೊನಾ ವೈರಾಣು ವಿರುದ್ಧ ಹೋರಾಡುತ್ತಿದೆ.

ಈ ತಿಂಗಳ ಆರಂಭದಲ್ಲಿ ಮಿಡತೆಗಳ ದಾಳಿ ಕಾರಣಕ್ಕೆ ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಕಳೆದ ಎರಡು ದಶಕದಲ್ಲೇ ಭೀಕರವಾದ ದಾಳಿ ಇದಾಗಿದ್ದರಿಂದ ಪಾಕ್ ಸರ್ಕಾರ ಕೂಡ ದೊಡ್ಡ ಮೊತ್ತದ ಹಣವನ್ನು ಕೀಟಗಳ ನಿಯಂತ್ರಣಕ್ಕಾಗಿಯೇ ಘೋಷಣೆ ಮಾಡಿತ್ತು.
ಮರಳುಗಾಡಿನ ಮಿಡತೆಗಳು ಇರಾನ್ ನಿಂದ ಪಾಕಿಸ್ತಾನವನ್ನು ಪ್ರವೇಶಿಸಿ, ಈಗಾಗಲೇ ಜೋಳ, ಹತ್ತು, ಗೋಧಿ ಮತ್ತಿತರ ಬೆಳೆಗಳನ್ನು ನಾಶಪಡಿಸಿವೆ. ಸದ್ಯಕ್ಕೆ ಮಿಡತೆಗಳು ಪಾಕಿಸ್ತಾನ- ಭಾರತ ಗಡಿಯಲ್ಲಿವೆ. ಸುಮಾರು ಮೂರು ಲಕ್ಷ ಎಕರೆ ಪ್ರದೇಶದಲ್ಲಿ ಈ ಮಿಡತೆಗಳ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಇಪ್ಪತ್ತು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಮಾನದ ಮೂಲಕ ಸಿಂಪಡಣೆ ಮಾಡಲಾಗಿದೆ.


Click it and Unblock the Notifications