ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏರ್ ಲೈನ್ಸ್ ಗಳು 188 ದೇಶಗಳಲ್ಲಿ ಹಾರಾಟದಿಂದ ನಿಷೇಧ ಎದುರಿಸುವ ಸಾಧ್ಯತೆ ಇದೆ. ಪೈಲಟ್ ಲೈಸೆನ್ಸ್ ವಿಚಾರ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟವನ್ನು ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗುವ ಸಾಧ್ಯತೆ ಇದೆ. ಇಂಟರ್ ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ ನಿಯಮದ ಅನುಸಾರ ಗುಣಮಟ್ಟವನ್ನು ತಲುಪಲು ವಿಫಲವಾಗಿದೆ ಎಂಬ ಮಾತು ಬಂದಿದೆ.
ಲೈಸೆನ್ಸ್ ಹಗರಣದ ಕಾರಣಕ್ಕೆ ಈಗಾಗಲೇ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ (ಪಿಐಎ) ಅನ್ನು ಯುಕೆ ಹಾಗೂ ಯುರೋಪಿಯನ್ ಒಕ್ಕೂಟಗಳಿಂದ ನಿಷೇಧಿಸಲಾಗಿದೆ. ಕಳೆದ ಆಗಸ್ಟ್ ನಲ್ಲಿ ಸ್ವತಃ ಪಾಕಿಸ್ತಾನದ ವಿಮಾನ ಯಾನ ಸಚಿವರು ಈ ವಿಷಯವನ್ನು ಬಹಿರಂಗ ಮಾಡಿದ್ದರು.
ಪಿಐಎಯ ನೂರಾ ನಲವತ್ತೊಂದು ಸೇರಿದಂತೆ ಇನ್ನೂರಾ ನಲವತ್ತೆರಡು ಪೈಲಟ್ ಗಳ ಬಳಿ ನಕಲಿ ದಾಖಲೆ ಇವೆ ಎಂದಿದ್ದರು. ಇನ್ನು ಐಸಿಎಒದಿಂದ ಪಾಕಿಸ್ತಾನ ನಾಗರಿಕ ವಿಮಾನ ಪ್ರಾಧಿಕಾರಕ್ಕೆ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಎಚ್ಚರಿಕೆಯನ್ನು ನೀಡಲಾಗಿತ್ತು.

ನವೆಂಬರ್ ಮೂರರಂದು ಐಸಿಎಒ ಪಿಸಿಎಎಗೆ ಪತ್ರ ಬರೆದಿದೆ. ಲೈಸೆನ್ಸ್ ಹಾಗೂ ಪೈಲಟ್ ಗಳ ತರಬೇತಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಳ್ಳಲು ವಿಫಲವಾಗಿರುವ ಬಗ್ಗೆ ಗಮನ ಸೆಳೆದಿದೆ. ಆ ಕಾರಣಕ್ಕೆ ಪಾಕಿಸ್ತಾನದ ವಿಮಾನಗಳು, ಪೈಲಟ್ ಗಳಿಗೆ 188 ದೇಶಗಳಲ್ಲಿ ಹಾರಾಟದಿಂದ ನಿಷೇಧ ಹಾಕುವ ಸಾಧ್ಯತೆ ಇದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಾಕಿಸ್ತಾನ ಏರ್ ಲೈನ್ಸ್ ಪೈಲಟ್ಸ್ ಅಸೋಸಿಯೇಷನ್ ವಕ್ತಾರ ಈ ಬಗ್ಗೆ ಮಾತನಾಡಿ, ಇದರ ಪರಿಣಾಮ ಗಂಭೀರವಾಗಿ ಇರುತ್ತದೆ. ಪಾಕಿಸ್ತಾನದ ವಿಮಾನ ಯಾನ ಕ್ಷೇತ್ರವೇ ನಾಶವಾಗುತ್ತದೆ. ಈ ಬಗ್ಗೆ ಕಳೆದ ಜೂನ್ ನಿಂದಲೇ ಒಕ್ಕೂಟ ಧ್ವನಿ ಎತ್ತುತ್ತಿದೆ. ಆದರೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದಿದ್ದಾರೆ.
ತುರ್ತಾಗಿ ಟಾಸ್ಕ್ ಫೋರ್ಸ್ ವೊಂದನ್ನು ರಚಿಸಿ, ಈ ಸಮಸ್ಯೆ ಬಗೆಹರಿಸಲು ಪ್ರಧಾನಿ ಇಮ್ರಾನ್ ಖಾನ್ ಪ್ರಯತ್ನಿಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ.


Click it and Unblock the Notifications