ತಮಿಳುನಾಡು ಸರ್ಕಾರ ಪರಂದೂರಿನಲ್ಲಿ ಬಳಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧಾರವನ್ನು ಮಾಡಿತ್ತು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳುವುದಕ್ಕೆ ಮುಂದಾಗಿತ್ತು ಆದರೆ ಇದಕ್ಕೆ ಸುತ್ತಮುತ್ತಲಿನ ರೈತರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು.ಇದೆಲ್ಲಾದರ ನಡುವೆ ಇದೀಗ ಪರಂದೂರು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಹೌದು,ಕರ್ನಾಟಕ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಟಕ್ಕರ್ ಕೊಡಲು ತಮಿಳುನಾಡು ಸರ್ಕಾರ ಹೂಸೂರು ವಿಮಾನ ನಿಲ್ದಾಣ ಮಾತ್ರವಲ್ಲದೇ ಚೆನ್ನೈನಲ್ಲಿ ಏರಿಕೆಯಾಗುತ್ತಿರುವ ವಿಮಾನ ಸಂಚಾರ ಒತ್ತಡವನ್ನು ಕಡಿಮೆ ಮಾಡಲು ಪರಂದೂರಿನಲ್ಲಿ ವಿಮಾನ ನಿಲ್ದಾಣವನ್ನು ಮಾಡಲು ಯೋಜನೆಯನ್ನು ರೂಪಿಸಿತ್ತು. ಆದರೆ ಅಲ್ಲಿನ ಭೂಸ್ವಾಧೀನ ಸಂಬಂಧಪಟ್ಟಂತೆ ರೈತರು, ಪರಿಸರ ಹೋರಾಟಗಾರರು ತೀವ್ರವಾಗಿ ಹೋರಾಟವನ್ನು ನಡೆಸಿದ್ದರು. ಆದರೂ ಕೂಡ ತಮೀಳು ನಾಡು ಸರ್ಕಾರ ಭೂಸ್ವಾಧೀನಕ್ಕೆ ಮಾರ್ಗಸೂಚಿ ಮೌಲ್ಯಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡಲು ಇದೀಗ ಮುಂದಾಗಿದೆ.

ಭೂಮಿಗೆ ಪರಿಹಾರ ಧನ
ಕೈಗಾರಿಕೆಗಳು, ಹೂಡಿಕೆ ಉತ್ತೇಜನ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ವಿ. ಅರುಣ್ ರಾಯ್ ಅವರು ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, 1,960.63 ಎಕರೆ ಭೂಮಿಗೆ ಪ್ರತಿ ಎಕರೆಗೆ 35 ಲಕ್ಷ ರೂ.ಗಳಿಂದ 60 ಲಕ್ಷ ರೂ.ಗಳವರೆಗೆ ಸ್ಥಿರ ಪರಿಹಾರ ದರವನ್ನು ಅನುಮೋದನೆಯನ್ನು ನೀಡಲಾಗಿದೆ ಎಂದು ವರದಿಗಳು ಆಗಿವೆ. ನೆಗೋಶಬಲ್ ಮಾರ್ಗಸೂಚಿ ಮೌಲ್ಯದ ಪ್ರಕಾರ ಇದು ಶೇಕಡಾ 275 ಮತ್ತು ಹೆಚ್ಚುವರಿ ಶೇಕಡಾ 25 ರಷ್ಟು ಪರಿಹಾರದ ಹಣವನ್ನು ಒಳಗೊಂಡಿದೆ.
ಪರಂದೂರು ವಿಮಾನ ನಿಲ್ದಾಣದ ಸ್ಥಳದ ಸುತ್ತಲಿನ ಭೂಮಾಲೀಕರಿಗೆ ತಮಿಳು ನಾಡು ಸರ್ಕಾರ ಘೋಷಣೆ ಮಾಡಿದ ಮೊತ್ತವು ಪ್ರತಿ ಎಕರೆಗೆ 5 ಲಕ್ಷದಿಂದ 17 ಲಕ್ಷ ರೂ.ಗಳವರೆಗೆ ಮಾರ್ಗಸೂಚಿ ಮೌಲ್ಯಗಳು (GLV) ಇರುವ ಭೂಮಿಗೆ ಅನ್ವಯವಾಗುತ್ತದೆ.ಇದು ಇನ್ನೂ ಹೆಚ್ಚಿನ ಮೌಲ್ಯದ ಪ್ರದೇಶಗಳಲ್ಲಿ, ಪರಿಹಾರವು ಎಕರೆಗೆ 2.57 ಕೋಟಿ ರೂ.ಗಳವರೆಗೆ ನೀಡಲಾಗಿದೆ ಎಂದು ಸರ್ಕಾರಿ ಆದೇಶದಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.
ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮತ್ತು ಭೂಮಾಲೀಕರಿಗೆ ಸುಗಮ ಪರಿಹಾರ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯು ಚೆನ್ನೈ ಮಹಾನಗರ ಪ್ರದೇಶಕ್ಕೆ ಒಂದು ಪ್ರಮುಖ ಮೂಲಸೌಕರ್ಯ ಉತ್ತೇಜನವನ್ನು ನೀಡುವ ಗುರಿಯನ್ನು ಹೊಂದಿದೆ. ಅಂದಾಜು 20,000 ಕೋಟಿ ರೂ.ಗಳ ಈ ವಿಮಾನ ನಿಲ್ದಾಣ ಯೋಜನೆಯು ಪ್ರದೇಶದ ಆರ್ಥಿಕತೆಗೆ ಹೊಸ ಉರುಪುನ್ನು ನೀಡುವಂತಹ ನಿರೀಕ್ಷೆ ಇದೆ.
ಭೂಮು ಮೌಲ್ಯದ ಕುರಿತು ಮಾತುಕತೆಗೆ ಅವಕಾಶ
ಎರಡು ನಿರ್ದಿಷ್ಟ ವರ್ಗಗಳಿಗೆ ಖಾಸಗಿ ಮಾತುಕತೆಗಳನ್ನು ಮುಂದುವರಿಸಲು ಕಾಂಚೀಪುರಂ ಜಿಲ್ಲಾಧಿಕಾರಿಗೆ ತಮಿಳು ನಾಡು ಸರ್ಕಾರವು ಅಧಿಕಾರವನ್ನು ನೀಡಿದೆ. ಮೊದಲನೆಯದಾಗಿ, 374.53 ಎಕರೆಗಳಿಗೆ, ಅಲ್ಲಿ ಜಿಎಲ್‌ವಿಗಳು 5 ಲಕ್ಷ ರೂ.ಗಳಿಂದ 17 ಲಕ್ಷ ರೂ.ಗಳ ವ್ಯಾಪ್ತಿಯಲ್ಲಿ ಬರುತ್ತವೆ ಆದರೆ ಪರಿಹಾರದ ಬೇಡಿಕೆಗಳು ಸ್ಥಿರ ದರವನ್ನು ಮೀರುತ್ತವೆ; ಮತ್ತು ಎರಡನೆಯದಾಗಿ, ಜಿಎಲ್‌ವಿಗಳು ಎಕರೆಗೆ 17 ಲಕ್ಷ ರೂ.ಗಳಿಗಿಂತ ಹೆಚ್ಚಿರುವ 996.09 ಎಕರೆಗಳಿಗೆ ಈ ಅವಕಾಶ ನೀಡಲಾಗಿದೆ. ಈ ಕುರಿತು ಭೂಮಿಯ ಮೌಲ್ಯದ ಬಗ್ಗೆ ಭಿನ್ನಾಭಿಪ್ರಾಯವಿದ್ದಲ್ಲಿ, ಮಾತುಕತೆಗಳ ಮೂಲಕ ಪರಿಹಾರವನ್ನು ನಿರ್ಧರಿಸಲು ಅವಕಾಶವನ್ನು ಸಹ ತಮಿಳು ಸರ್ಕಾರ ನೀಡಿದೆ.
ಭೂಮಾಲೀಕರಿಗೆ ಯಾವುದೇ ಸ್ಥಿರ ದರವನ್ನು ಸ್ವೀಕರಿಸಲು ಇಷ್ಟವಿಲ್ಲದೇ ಇದ್ದರೆ ತಮಿಳುನಾಡು ಕೈಗಾರಿಕಾ ಉದ್ದೇಶಗಳಿಗಾಗಿ ಭೂಸ್ವಾಧೀನ ಕಾಯ್ದೆ, 1997 ರ ಅಡಿಯಲ್ಲಿ ಕಾರ್ಯವಿಧಾನಗಳನ್ನು ಅನುಸರಿಸಲು ಸರ್ಕಾರವು ಭೂಸ್ವಾಧೀನ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ. ಅಂತಹ ಸಂದರ್ಭಗಳಲ್ಲಿ, ಯಾವುದೇ ನಿಂತಿರುವ ರಚನೆಗಳು ಅಥವಾ ಮರಗಳ ಮೌಲ್ಯಮಾಪನ ಸೇರಿದಂತೆ ಶಾಸನಬದ್ಧ ನಿಬಂಧನೆಗಳ ಆಧಾರದ ಮೇಲೆ ಪರಿಹಾರವನ್ನು ಲೆಕ್ಕಹಾಕಲಾಗುತ್ತದೆ ಮತ್ತು 100 ಪ್ರತಿಶತ ಸೊಲೇಷಿಯಂ ಮತ್ತು ಶೇ.25ರಷ್ಟು ಪ್ರೋತ್ಸಾಹ ಧನಕ್ಕೆ ಸಮನಾಗಿರುತ್ತದೆ.
ಪರಂದೂರು ವಿಮಾನ ನಿಲ್ದಾಣಕ್ಕೆ ತೀವ್ರ ವಿರೋಧ
ಪರಂದೂರು ವಿಮಾನ ನಿಲ್ದಾಣ ಯೋಜನೆಗಾಗಿ ರಾಜ್ಯ ಸರ್ಕಾರವು ಒಟ್ಟು 3,331.25 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ. ಆದರೆ, ಈ ಪ್ರಸ್ತಾಪಕ್ಕೆ ಪರಂದೂರು ವಿಮಾನ ನಿಲ್ದಾಣ ಪ್ರತಿಭಟನಾ ಸಮಿತಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಸರ್ಕಾರದ ಈ ಪರಿಹಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಜಿ. ಸುಬ್ರಮಣಿಯನ್ ಅವರ ಪ್ರಕಾರ, ಯೋಜನೆ ಘೋಷಣೆಯಾದ ನಂತರ ಹಳ್ಳಿಗಳಲ್ಲಿ ಭೂಮಿಯ ಬೆಲೆ ಎಕರೆಗೆ 2 ಕೋಟಿಯಿಂದ 3 ಕೋಟಿ ರೂ.ಗೆ ಏರಿದೆ. ಸರ್ಕಾರದಿಂದ ಬಂದಿರುವ ಪರಿಹಾರದ ಹಣ ತುಂಬಾ ಕಡಿಮೆಯಾಗಿದೆ ನಾವು ಅದನ್ನು ಒಪ್ಪಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ತಮಿಳು ನಾಡಿನ ಸರ್ಕಾರಕ್ಕೆ ಪರಂದೂರು ವಿಮಾನ ನಿಲ್ದಾಣ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಸವಾಲಾಗಿದೆ. ಸರ್ಕಾರವು ಈಗಾಗಲೇ ಹೆಚ್ಚಿನ ಪರಿಹಾರವನ್ನು ನೀಡಲು ಮುಂದಾಗಿದ್ದರೂ, ಪ್ರತಿಭಟನಾಕಾರರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿ ಪರಂದೂರು ವಿಮಾನ ನಿಲ್ದಾಣ ಏನೆಲ್ಲಾ ಸಮಸ್ಸೆಗಳು ಎದುರಿಸಬಹುದು ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications