ಪ್ರಯಾಣಿಕರ ವಾಹನಗಳ ವಲಯದಲ್ಲಿ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದಲ್ಲಿ ಈ ಹಣಕಾಸು ವರ್ಷದಲ್ಲಿ (2020- 21) 25% ಕುಸಿತ ಕಾಣುವಂತಾಗಬಹುದು. ಜಿಡಿಪಿಯಲ್ಲಿ 11% ತನಕ ಕುಸಿತ ಕಾಣಬಹುದಾದ ನಿರೀಕ್ಷೆಯ ಪರಿಣಾಮ ಇದು ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ Icra ಬುಧವಾರ ಹೇಳಿದೆ.
ಕಳೆದ ಎರಡು ವರ್ಷಗಳಿಂದ ವಾಹನೋದ್ಯಮವು ಆರ್ಥಿಕ ಹಿಂಜರಿತದ ಪರಿಣಾಮವನ್ನು ಎದುರಿಸುತ್ತಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ಎರಡು ದಶಕದಲ್ಲೇ ಕನಿಷ್ಠ ಮಟ್ಟದ ಮಾರಾಟವನ್ನು ಈ ವರ್ಷ ಕಂಡಿದೆ. "ಜಿಡಿಪಿ ಬೆಳವಣಿಗೆ ಹಾಗೂ ಗ್ರಾಹಕರ ಭರವಸೆ ಸದ್ಯಕ್ಕೆ ಐತಿಹಾಸಿಕ ಕನಿಷ್ಠ ಮಟ್ಟದಲ್ಲಿದೆ ಹಾಗೂ ಆರ್ಥಿಕ ಕುಸಿತದ ವಾತಾವರಣದಿಂದ ಖರೀದಿಯನ್ನು ಮುಂದಕ್ಕೆ ಹಾಕಲಾಗುತ್ತಿದೆ," ಎಂದು Icra ಹೇಳಿದೆ.
ಸತತ ಎರಡು ವರ್ಷಗಳ ಕಾಲ ಮಾರಾಟದಲ್ಲಿನ ಕುಸಿತದಿಂದಾಗಿ (FY20ರಲ್ಲಿ 18% ಹಾಗೂ FY21ರಲ್ಲಿ 25% ತನಕ) ಪ್ರಯಾಣಿಕರ ವಾಹನದ ಒಟ್ಟಾರೆ ಉತ್ಪಾದನೆ ಸಾಮರ್ಥ್ಯ 45%ಗಿಂತ ಕಡಿಮೆ ಆಗಬಹುದು. FY2020ರಲ್ಲಿ ಅದು 55% ಇತ್ತು ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಹೇಳಿದೆ.

FY2022ರಲ್ಲಿ 15%ಗಳ ಪ್ರಬಲ ಬೆಳವಣಿಗೆಯನ್ನು ಪ್ರಯಾಣಿಕರ ವಾಹನ ಕ್ಷೇತ್ರ ದಾಖಲಿಸಬಹುದು ಎಂದು ಹೇಳಲಾಗಿದೆ. ಈ ಮಧ್ಯೆ ಹಲವು ಪ್ರಯಾಣಿಕರ ವಾಹನಗಳು ಹಾಗೂ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ಸೆಪ್ಟೆಂಬರ್ ನಲ್ಲಿ ಕೊರೊನಾದ ಹಿಂದಿನ ಸ್ಥಿತಿಗೆ ಬಂದಿದೆ.
ಇನ್ನು Icra ಪ್ರಕಾರ, ವಾಣಿಜ್ಯ ವಾಹನ ಕ್ಷೇತ್ರವು ಕಳೆದ ವರ್ಷಕ್ಕಿಂತ ಈ ಬಾರಿ 27% ಇಳಿಕೆ ಆಗಬಹುದು. ಸಾಗಣೆ ಸಮಸ್ಯೆ, ಹಣಕಾಸು ಸಾಲ ವ್ಯವಸ್ಥೆಯ ಸವಾಲು, ಗಣಿಗಾರಿಕೆ ನಿಷೇಧ ಮತ್ತು ಬಿಎಸ್ 6 ಜಾರಿಯಾಗಿದ್ದರಿಂದ 15% ತನಕ ಬೆಲೆ ಹೆಚ್ಚಾಗಿದ್ದೆಲ್ಲ ಸೇರಿ ವಾಣಿಜ್ಯ ವಾಹನಗಳ ಮಾರಾಟ ಕಡಿಮೆ ಆಗುವಂತಾಗಿದೆ ಎನ್ನಲಾಗಿದೆ.
ಈ ವರ್ಷ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳ ಮಾರಾಟ (ಬಸ್ ಗಳು ಸೇರಿ) ಈ ವರ್ಷ 40% ಕುಸಿತ ಕಾಣಬಹುದು ಎಂಬ ನಿರೀಕ್ಷೆ ಇದೆ. ಇನ್ನು ಲಘು ವಾಣಿಜ್ಯ ವಾಹನಗಳು (LCV) 17- 20% ಮಾರಾಟ ಕುಸಿತ ಆಗಬಹುದು ಎಂದು ಹೇಳಿದೆ.
ಕೊರೊನಾಗೂ ಮುಂಚೆ ತಿಂಗಳಿಗೆ 80 ಸಾವಿರ ಯೂನಿಟ್ ಗೂ ಹೆಚ್ಚು ವಾಣಿಜ್ಯ ವಾಹನ ಮಾರಾಟ ಆಗುತ್ತಿತ್ತು. ಆದರೆ ಸೆಪ್ಟೆಂಬರ್ ನಲ್ಲಿ 40 ಸಾವಿರ ಯೂನಿಟ್ ಮಾರಾಟ ಆಗಿದೆ. ಇನ್ನು ಕ್ರೆಡಿಟ್ ರೇಟಿಂಗ್ ಏಜೆನ್ಸಿಯಿಂದ ಟ್ರ್ಯಾಕ್ಟರ್ ಸೆಗ್ಮೆಂಟ್ ನಲ್ಲಿ ಕಳೆದ ವರ್ಷಕ್ಕಿಂತ 2- 4% ಮಾರಾಟ ಹೆಚ್ಚಳ ಆಗಬಹುದು ಎಂದಿದ್ದ ಅಂದಾಜು ಈಗ 9%ಗೆ ಪರಿಷ್ಕರಿಸಲಾಗಿದೆ.


Click it and Unblock the Notifications