ಮುಂಬೈ, ನ. 22: ದೇಶದ ಡಿಜಿಟಲ್ ಪೇಮೆಂಟ್ ಕ್ರಾಂತಿಯ ಹೆಜ್ಜೆಗಳನ್ನಿರಿಸಿದ ಮೊದಲಿಗರಲ್ಲಿ ಒಂದಾಗಿರುವ ಪೇಟಿಎಂ ಸಂಸ್ಥೆ ಯಾಕೋ ಕಷ್ಟದ ಸರಮಾಲೆಯನ್ನೇ ಅನುಭವಿಸುತ್ತಿದೆ. ಪೇಮೆಂಟ್ಸ್ ಜೊತೆಗೆ ಹಲವಾರು ಸೇವೆಗಳನ್ನು ನೀಡುವ ಪ್ರಮುಖ ಆನ್‌ಲೈನ್ ಮಾರುಕಟ್ಟೆ ಸ್ಥಳವಾಗಿ ಮಾರ್ಪಟ್ಟಿದ್ದರೂ ಪೇಟಿಎಂ ಲಾಭ ಮಾಡಿಕೊಳ್ಳಲು ಪರದಾಡುತ್ತಿದೆ. ಪೇಟಿಎಂನ ಆದಾಯ ಹೆಚ್ಚುತ್ತಿದ್ದರೂ ಲಾಭ ಮಾತ್ರ ಸಿಗುತ್ತಿಲ್ಲ. ಸತತವಾಗಿ ನಷ್ಟ ಅನುಭವಿಸುತ್ತಿದೆ. ಈಗ ಷೇರುಪೇಟೆಯಲ್ಲಿ ಪೇಟಿಎಂನ ಷೇರು ಬೆಲೆ ಪ್ರಪಾತಕ್ಕೆ ಬೀಳುವುದು ಮುಂದುವರಿದಿದೆ.
2021 ನವೆಂಬರ್ 18ರಂದು, ಅಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಪೇಟಿಎಂ ಸಂಸ್ಥೆ ಐಪಿಒಗೆ ತೆರೆದುಕೊಂಡಿತು. ಆಗ ಇದ್ದ ಬೆಲೆ 2,150 ರೂಪಾಯಿ. ಇವತ್ತು ಪೇಟಿಎಂ ಷೇರು ಬೆಲೆ 483.20 ರೂಪಾಯಿಗೆ ಬಿದ್ದುಹೋಗಿದೆ. ನಿನ್ನೆ ದಿನಾಂತ್ಯದಲ್ಲಿ 535 ರೂ ಬೆಲೆ ಹೊಂದಿದ್ದ ಪೇಟಿಎಂ ಷೇರು ಮಂಗಳವಾರದ ವಹಿವಾಟಿನಲ್ಲಿ 50ಕ್ಕೂ ಹೆಚ್ಚು ರೂನಷ್ಟು ಕುಸಿತ ಕಂಡಿದೆ.
ಐಪಿಒದ ಮೂಲ ಬೆಲೆಯಾದ 2,150 ರೂ ಅನ್ನು ಪರಿಗಣಿಸಿದರೆ ಪೇಟಿಎಂ ಷೇರು ಬೆಲೆ ಒಂದು ವರ್ಷದ ಅವಧಿಯಲ್ಲಿ ಶೇ. 70ರಷ್ಟು ಕುಸಿತ ಕಂಡಿದೆ. ಡಿಜಿಟಲ್ ಇಂಡಿಯಾದ ಜೊತೆ ಜೊತೆಗೆ ಪೇಟಿಎಂ ಷೇರೂ ಕೂಡ ಮಿಂಚುತ್ತದೆ ಎಂದು ನಂಬಿಕೊಂಡು ಷೇರು ಖರೀದಿಸಿದ ಲಕ್ಷಾಂತರ ಜನರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಇಳಿಕೆಯ ಟ್ರೆಂಡ್ ನಿಂತು ಕಂಪನಿ ಮತ್ತೆ ಏರ್ಮುಖಕ್ಕೆ ಬರುತ್ತದೆ ಎಂದು ನಂಬಿಕೊಂಡ ದೂರಗಾಮಿ ಹೂಡಿಕೆದಾರರು ನಿರಾಸೆ ಕಾಣುತ್ತಿದ್ದಾರೆ.

ಪೇಟಿಎಂ ಷೇರು ಕೊಳ್ಳಲು ಸಕಾಲವೇ?
2,150 ರೂ ಬೆಲೆಯಲ್ಲಿದ್ದ ಪೇಟಿಎಂ ಷೇರು ಈಗ ಸದ್ಯ 485 ರೂಪಾಯಿಗೆ ಬಿಕರಿಯಾಗುತ್ತಿದೆ. ಇಷ್ಟು ಕಡಿಮೆ ಮೌಲ್ಯಕ್ಕೆ ಕುಸಿದಿರುವ ಪೇಟಿಎಂ ಇನ್ನು ಮುಂದಾದರೂ ಚೇತರಿಸಿಕೊಳ್ಳಬಹುದಾ? ಆದರೆ, ಪೇಟಿಎಂ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಎಂಬುದು ಕೆಲ ಮಾರುಕಟ್ಟೆ ವಿಶ್ಲೇಷಕರ ಅನಿಸಿಕೆ.
ಪೇಟಿಎಂ ಬಗೆಗಿನ ಅನಿಸಿಕೆ ನಕಾರಾತ್ಮಕವಾಗಿದೆ. ಪೇಟಿಎಂ ರಚನೆಯೂ ದುರ್ಬಲವಾಗಿದೆ ಎಂದು ಹೇಳುವ ಟೆಕ್ನಿಕಲ್ ಅನಾಲಿಸ್ಟ್ ನಿಲೇಶ್ ಜೈನ್, ಪೇಟಿಎಂ ಷೇರು ಬೆಲೆ ಇನ್ನಷ್ಟು ಇಳಿಕೆ ಕಾಣಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ ಮುಂದಿನ ಕೆಲ ದಿನಗಳಲ್ಲಿ ಪೇಟಿಎಂ ಬೆಲೆ 450-460 ರೂಪಾಯಿಗೆ ಬಂದು ನಿಲ್ಲಬಹುದು. ಹೀಗಾಗಿ, ಅವರು ಪೇಟಿಎಂ ಷೇರುಗಳನ್ನು ಮಾರುವ ಸಂದರ್ಭ ಇದು ಎಂದು ಶಿಫಾರಸು ಮಾಡಿದ್ದಾರೆ.
ಪೇಟಿಎಂಗೆ ಯಾಕಿಂಥ ದುರ್ಗತಿ?
ಸೆಪ್ಟೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಪೇಟಿಎಂ 593.9 ಕೋಟಿ ರೂ ನಷ್ಟ ತೋರಿಸಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಅದು 481 ಕೋಟಿ ರೂ ನಷ್ಟ ಕಂಡಿತ್ತು. ಸತತವಾಗಿ ನಷ್ಟ ಅನುಭವಿಸುತ್ತಿರುವುದು ಪೇಟಿಎಂ ಹೂಡಿಕೆದಾರರ ವಿಶ್ವಾಸ ಕುಂದಿಸಿದೆ.

ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ಪೇಟಿಎಂ ಆದಾಯ 1914 ಕೋಟಿ ರೂ ಇದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 76ರಷ್ಟು ಆದಾಯ ಹೆಚ್ಚಳವಾಗಿದೆ. ಆದರೆ, ಆದಾಯ ಹೆಚ್ಚಿದ್ದರೂ ಲಾಭ ಮಾತ್ರ ಸಿಗುತ್ತಿಲ್ಲ.
ಹಣಕಾಸು ಸೇವೆ ವ್ಯವಹಾರಗಳಿಂದ ಪೇಟಿಎಂಗೆ ಬರುತ್ತಿರುವ ಆದಾಯ ಶೇ. 293ರಷ್ಟು ಏರಿದೆ. ಮಾಸಿಕ ವಹಿವಾಟು ಬಳಕೆದಾರರು (ಎಂಟಿಯು) ಶೇ. 39ರಷ್ಟು ಹೆಚ್ಚಾಗಿದ್ದಾರೆ. ಪೇಟಿಎಂಗೆ ಜೋಡಿತಗೊಂಡ ವರ್ತಕರ ಸಂಖ್ಯೆ ಕೂಡ 2.95 ಕೋಟಿಗೆ ಹೆಚ್ಚಾಗಿದೆ. ಇಷ್ಟೆಲ್ಲಾ ಬೆಳವಣಿಗೆ ಆದರೂ ಪೇಟಿಎಂಗೆ ಲಾಭದ ಹಳಿಗೆ ಬರಲು ಸಾಧ್ಯವಾಗುತ್ತಿಲ್ಲ.


Click it and Unblock the Notifications