ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶುಕ್ರವಾರ (ಫೆಬ್ರವರಿ 5, 2021) ಮತ್ತೆ ಹೊಸ ಸಾರ್ವಕಾಲಿಕ ದಾಖಲೆಯನ್ನು ಬರೆದಿವೆ. ಲೀಟರ್ ಗೆ 30 ಪೈಸೆ ಹೆಚ್ಚಳವಾಗುವ ಮೂಲಕ ಸತತ ಎರಡನೇ ದಿನ ಬೆಲೆ ಏರಿಕೆ ಆಗಿದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ಮಾಡಿರುವ ಈ ಬೆಲೆ ಏರಿಕೆಯಿಂದಾಗಿ ನವದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ರು. 86.95 ಆಗಿದೆ.
ಇನ್ನು ಬೆಂಗಳೂರಿನಲ್ಲಿ ರು. 89.85, ಕೋಲ್ಕತ್ತಾದಲ್ಲಿ ರು. 88.30, ಮುಂಬೈನಲ್ಲಿ ರು. 93.49 ಹಾಗೂ ಚೆನ್ನೈನಲ್ಲಿ ರು. 89.39 ತಲುಪಿದೆ. ಈ ಮಧ್ಯೆ ಡೀಸೆಲ್ ದರ ಕೂಡ ಮೇಲೇರಿ ಬೆಂಗಳೂರಿನಲ್ಲಿ ರು. 81.76, ನವದೆಹಲಿಯಲ್ಲಿ ಲೀಟರ್ ಗೆ ರು. 77.13, ಕೋಲ್ಕತ್ತಾದಲ್ಲಿ ರು. 80.71, ಮುಂಬೈನಲ್ಲಿ ರು. 83.99 ಹಾಗೂ ಚೆನ್ನೈನಲ್ಲಿ ರು. 82.33 ಆಗಿದೆ.
ಈ ಮಧ್ಯೆ ಗೋವಾ ರಾಜ್ಯ ಸರ್ಕಾರ ಗುರುವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವ್ಯಾಲ್ಯೂ ಆಡೆಡ್ ಟ್ಯಾಕ್ಸ್ (VAT) ಹೆಚ್ಚು ಮಾಡಿದೆ. ಪೆಟ್ರೋಲ್ ಮೇಲೆ 25%ನಿಂದ 27%ಗೆ ಹಾಗೂ ಡೀಸೆಲ್ ಮೇಲೆ 22ರಿಂದ 23 ಪರ್ಸೆಂಟ್ ಗೆ ವ್ಯಾಟ್ ಹೆಚ್ಚಳ ಆಗಿದೆ. ಇದರ ಪರಿಣಾಮವಾಗಿ ಪೆಟ್ರೋಲ್ ಲೀಟರ್ ಗೆ ರು. 1.30 ಹಾಗೂ ಡೀಸೆಲ್ 60 ಪೈಸೆ ಹೆಚ್ಚಿಸಲಿದೆ.

ಸತತ 29 ದಿನಗಳ ಕಾಲ ತೈಲ ಬೆಲೆಯನ್ನು ಸ್ಥಿರವಾಗಿರಿಸಿದ್ದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಜನವರಿ ಆರಂಭದಿಂದ ಹೆಚ್ಚಿಸಲು ಶುರು ಮಾಡಿದವು. ಅಂದ ಹಾಗೆ, ಪೆಟ್ರೋಲ್ ಹಾಗೂ ಡೀಸೆಲ್ ದರ ನಿತ್ಯವೂ ಪರಿಷ್ಕರಣೆ ಆಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಮತ್ತು ಡಾಲರ್ ವಿರುದ್ಧ ರುಪಾಯಿ ಮೌಲ್ಯವನ್ನು ಗಣನೆಗೆ ತೆಗೆದುಕೊಂಡು, ಕಳೆದ ಹದಿನೈದು ದಿನಗಳ ಸರಾಸರಿ ಲೆಕ್ಕ ಹಾಕಿ ದರ ನಿರ್ಧಾರ ಮಾಡಲಾಗುತ್ತದೆ.


Click it and Unblock the Notifications