ನವದೆಹಲಿಯಲ್ಲಿ ಗುರುವಾರ ಪೆಟ್ರೋಲ್ ಚಿಲ್ಲರೆ (ರೀಟೇಲ್) ಮಾರಾಟಾ ದರ ಹೊಸ ದಾಖಲೆ ಬರೆಯಿತು. ತೈಲ ಮಾರ್ಕೆಟಿಂಗ್ ಕಂಪೆನಿಗಳು (OMC) ಲೀಟರ್ ಗೆ 35 ಪೈಸೆಯಂತೆ ಬೆಲೆ ಏರಿಕೆ ಮಾಡಿದ್ದು, ರು. 86.65 ಮುಟ್ಟಿದೆ. ಇನ್ನು ಡೀಸೆಲ್ ದರ ಕೂಡ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದ್ದು, ರು. 76.83ರಲ್ಲಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಗೆ ರು. 89.54 ಮತ್ತು ಡೀಸೆಲ್ ರು. 81.44 ಇದೆ.
29 ದಿನಗಳ ಕಾಲ ದರಗಳು ಸ್ಥಿರವಾಗಿದ್ದವು. ಆ ನಂತರ ಜನವರಿ ಆರಂಭದಿಂದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಬೆಲೆ ಏರಿಸಲು ಶುರು ಮಾಡಿದವು. ಪೆಟ್ರೋಲ್ ಮತ್ತು ಡೀಸೆಲ್ ರೀಟೆಲ್ ದರ ಮುಂಬೈನಲ್ಲಿ ರು. 93.20 ಹಾಗೂ ಡೀಸೆಲ್ ರು. 83.67 ಇದೆ. ಕಳೆದ ವರ್ಷ ಜುಲೈ 30ನೇ ತಾರೀಕಿನಂದು ನವದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರು. 81.94 ತಲುಪಿತ್ತು ಡೀಸೆಲ್.
ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಗುರುವಾರ ಬ್ಯಾರೆಲ್ ಗೆ $ 58.62ರಂತೆ ವಹಿವಾಟು ನಡೆಸುತ್ತಿದೆ. ಫೆಬ್ರವರಿ 3ನೇ ತಾರೀಕಿನಂದು ಪೆಟ್ರೋಲ್ ರಫ್ತು ಮಾಡುವ ದೇಶಗಳ ಒಕ್ಕೂಟ (ಒಪೆಕ್) ಸಭೆ ಸೇರಿ, ಉತ್ಪಾದನೆ ಕಡಿಮೆ ಮಾಡುವುದಕ್ಕೆ ನಿರ್ಧರಿಸಿದವು. ಅದರಿಂದ ಭಾರತದ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕವಾಗಿ 40%ಗೂ ಹೆಚ್ಚಿನ ಬೇಡಿಕೆಯನ್ನು ಇವು ಪೂರೈಸಿದರೆ, ಭಾರತದ ಶೇಕಡಾ 83% ಅಗತ್ಯವನ್ನು ಪೂರೈಸುತ್ತವೆ.

ಇನ್ನು ಕೇಂದ್ರ ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಅನ್ನು ಪೆಟ್ರೋಲ್- ಡೀಸೆಲ್, ಇತರ ಆಮದು ವಸ್ತುಗಳ ಮೇಲೆ ಹಾಕಲಾಗಿದೆ. ಆದರೆ ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗುವುದಿಲ್ಲ. ರಾಜ್ಯಗಳು ತನ್ನ ಆದಾಯವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತವೆ.
ತಕ್ಷಣದಿಂದ ಅನ್ವಯ ಆಗುವಂತೆ ಪೆಟ್ರೋಲ್ ಮೇಲೆ ಲೀಟರ್ ಗೆ ರು. 2.5 ಹಾಗೂ ಡೀಸೆಲ್ ಗೆ ಲೀಟರ್ ಗೆ ರು. 4 ಮತ್ತು ಇತರ ಹನ್ನೆರಡು ಕೃಷಿ ಮತ್ತು ಕೃಷಿಯೇತರ ಪದಾರ್ಥಗಳಿಗೆ ಸೆಸ್ ವಿಧಿಸಲಾಗಿದೆ. ಈ ಬಜೆಟ್ ನಲ್ಲಿ ಮೂಲ ಸೀಮಾ ಸುಂಕ ಮತ್ತು ಅಬಕಾರಿ ಹಾಗೂ ವಿಶೇಷ ಅಬಕಾರಿ ಸುಂಕವನ್ನು ಇಳಿಸಲಾಗಿದೆ.


Click it and Unblock the Notifications