ನೀವು ಇರುವ ಮನೆ ಅಥವಾ ಕಚೇರಿ ಬಾಗಿಲಿಗೆ ಆಹಾರ ಪದಾರ್ಥದ ಡೆಲಿವರಿ ಬರುವಂತೆ ಇನ್ನು ಮುಂದೆ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಸ್ಮಾರ್ಟ್ ಫೋನ್ ಮೂಲಕ ಆರ್ಡರ್ ಮಾಡಬಹುದು. ನೀವಿದ್ದಲ್ಲಿಗೆ ಡೆಲಿವರಿ ಮಾಡುತ್ತಾರೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ದೆಹಲಿ- ಎನ್ ಸಿಆರ್ ಮೂಲದ ಪೆಪ್ ಫ್ಯುಯೆಲ್ ಹಾಗೂ ಪುಣೆ ಮೂಲದ ರೆಪೋಸ್ ಎನರ್ಜಿ ಸಹಭಾಗಿತ್ವದಲ್ಲಿ ತಲುಪಿಸಲಿದೆ.
ಈ ತೈಲ ಡೆಲಿವರಿ ಸ್ಟಾರ್ಟ್ ಅಪ್ ಗಳು ವೆಬ್ ಸೈಟ್ ಅಥವಾ ಅಪ್ಲಿಕೇಷನ್ ಮೂಲಕ ಆರ್ಡರ್ ಗಳನ್ನು ಪಡೆಯುತ್ತವೆ. ಅವುಗಳು ನೀಡುವ ಸೇವೆಗೆ ಸಣ್ಣ ಪ್ರಮಾಣದಲ್ಲಿ ಶುಲ್ಕವನ್ನು ವಿಧಿಸುತ್ತವೆ. ಪೆಪ್ ಫ್ಯುಯೆಲ್ಸ್ ನಿಂದ ವಾಹನಗಳಿಗೆ ಡೀಸೆಲ್ ಸರಬರಾಜು ಮಾಡಲಾಗುತ್ತದೆ. ಈಗಾಗಲೇ ಇಂಡಿಯನ್ ಆಯಿಲ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಬೇಡಿಕೆ ಆಧಾರದಲ್ಲಿ ತೈಲ ಪೂರೈಸುತ್ತದೆ.
ಇನ್ನು ರೆಪೋಸ್ ನ ಗ್ರಾಹಕರು ಪುಣೆ, ಚೆನ್ನೈ, ಬೆಂಗಳೂರು, ವಾರಾಣಸಿ, ರಾಯಗಢದಲ್ಲಿ ಇದ್ದಾರೆ. ರೆಪೋಸ್ ಅಪ್ಲಿಕೇಷನ್ ಮೂಲಕ ಬೇಡಿಕೆ ಸಲ್ಲಿಸಿದರೆ ಡೀಸೆಲ್ ಡೆಲಿವರಿ ಮಾಡುತ್ತದೆ. ಈ ಸ್ಟಾರ್ಟ್ ಅಪ್ ಬಳಿ ಆರು ಸಾವಿರ ಲೀಟರ್ ಸಾಮರ್ಥ್ಯದ ತೈಲ ಟ್ಯಾಂಕ್ ಇದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎರಡು ವರ್ಷಗಳ ಹಿಂದೆಯೇ ಈ ಯೋಜನೆ ಬಗ್ಗೆ ಘೋಷಣೆ ಮಾಡಿತ್ತು. ಎರಡು ವರ್ಷದ ಹಿಂದೆ ಐಒಸಿಯಿಂದ ತೈಲ ಡೆಲಿವರಿ ಸೇವೆ ಆರಂಭವಾಗಿದ್ದು, ಇನ್ನೂರು ಲೀಟರ್ ಮೇಲ್ಪಟ್ಟ ಆರ್ಡರ್ ಗಳನ್ನು ಮಾತ್ರ್ ತೆಗೆದುಕೊಳ್ಳಲಾಗುತ್ತಿದೆ.
ಬೆಂಗಳೂರು ಮೂಲದ ಮೈಪೆಟ್ರೋಲ್ ಪಂಪ್ ಸ್ಟಾರ್ಟ್ ಅಪ್ ನಿಂದ ಭಾರತದ ಹಲವು ನಗರಗಳಲ್ಲಿ ಈ ಸೇವೆ ಇದೆ. ಆದರೆ ಕನಿಷ್ಠ ಇಪ್ಪತ್ತು ಲೀಟರ್ ಆರ್ಡರ್ ಮಾಡಬೇಕು. ಈ ಸ್ಟಾರ್ಟ್ ಅಪ್ ನಿಂದ ಸಣ್ಣ ಪ್ರಮಾಣದ ವ್ಯವಹಾರ, ಕ್ಯಾಬ್ ಬಾಡಿಗೆ ಕಂಪೆನಿಗಳು, ಅಪಾರ್ಟ್ ಮೆಂಟ್ ಮತ್ತು ವಾಣಿಜ್ಯ ಕಟ್ಟಡಗಳು, ಶಾಲೆ ಮತ್ತು ಆಸ್ಪತ್ರೆಗಳ ಅಗತ್ಯಗಳಿಗೆ ತೈಲ ಪೂರೈಸಲಾಗುತ್ತಿದೆ.


Click it and Unblock the Notifications