ಕಚ್ಚಾ ತೈಲ ಬೆಲೆಯು ಹಲವು ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ತಲುಪಿದರೂ ಭಾರತದಲ್ಲಿ ಮಾತ್ರ ಪೆಟ್ರೋಲ್- ಡೀಸೆಲ್ ದರವು ದಾಖಲೆಯ ಏರಿಕೆ ಕಂಡಿದೆ. ಗರಿಷ್ಠ ಮಟ್ಟದಲ್ಲಿದೆ. ಸತತವಾಗಿ 9 ದಿನಗಳ ಕಾಲ ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿ, 2018ರ ಅಕ್ಟೋಬರ್- ನವೆಂಬರ್ ನಲ್ಲಿ ಇದ್ದ ಮಟ್ಟವನ್ನು ತಲುಪಿದೆ. ಅಂದ ಹಾಗೆ ಸೋಮವಾರ ಪೆಟ್ರೋಲ್ ಲೀಟರ್ ಗೆ 46 ಪೈಸೆ ಹಾಗೂ ಡೀಸೆಲ್ 59 ಪೈಸೆ ಹೆಚ್ಚಳವಾಗಿದೆ.
ಪೆಟ್ರೋಲ್- ಡೀಸೆಲ್ ದರದ ನಿತ್ಯ ಪರಿಷ್ಕರಣೆ ಜೂನ್ 7ರಿಂದ ಆರಂಭವಾಯಿತು. ಲಾಕ್ ಡೌನ್ ಘೋಷಣೆ ಆಗಿದ್ದ 82 ದಿನಗಳ ಕಾಲ ಬೆಲೆ ಪರಿಷ್ಕರಣೆ ಆಗಿರಲಿಲ್ಲ. ಇದೀಗ ಜೂನ್ 7ರಿಂದ ಈಚೆಗೆ ಪೆಟ್ರೋಲ್ ಲೀಟರ್ ಗೆ 4.98 ರುಪಾಯಿ ಹಾಗೂ ಡೀಸೆಲ್ 5.23 ರುಪಾಯಿ ಏರಿಕೆ ಆಗಿದೆ.
ಪ್ರಮುಖ ನಗರಗಳಲ್ಲಿನ ಪೆಟ್ರೋಲ್- ಡೀಸೆಲ್ ದರಗಳು
ನವದೆಹಲಿ: ಪೆಟ್ರೋಲ್ 76.26- ಡೀಸೆಲ್ 74.62
ಗುರ್ ಗಾಂವ್: ಪೆಟ್ರೋಲ್ 75.05- ಡೀಸೆಲ್ 67.45
ಮುಂಬೈ: ಪೆಟ್ರೋಲ್ 83.17- ಡೀಸೆಲ್ 73.21
ಚೆನ್ನೈ: ಪೆಟ್ರೋಲ್ 79.96- ಡೀಸೆಲ್ 72.69
ಹೈದರಾಬಾದ್: ಪೆಟ್ರೋಲ್ 79.17- ಡೀಸೆಲ್ 72.93
ಬೆಂಗಳೂರು: ಪೆಟ್ರೋಲ್ 78.73- ಡೀಸೆಲ್ 70.95
ಅಬಕಾರಿ ಸುಂಕದಲ್ಲಿ ಭಾರೀ ಏರಿಕೆ
ಪೆಟ್ರೋಲ್ ಹಾಗೂ ಡೀಸೆಲ್ ದರ ಈ ಮಟ್ಟವನ್ನು ತಲುಪಿದ್ದು ಕಚ್ಚಾ ತೈಲ ದರವು ದಾಖಲೆಯ ಎತ್ತರದಲ್ಲಿ ಇದ್ದಾಗ. ಕಳೆದ ತಿಂಗಳು ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ಲೀಟರ್ ಗೆ 10 ರುಪಾಯಿ ಹಾಗೂ ಡೀಸೆಲ್ ಮೇಲೆ 13 ರುಪಾಯಿ ಏರಿಕೆ ಮಾಡಿತ್ತು. ಇದನ್ನು ಹೊರತುಪಡಿಸಿ, ಹಲವು ರಾಜ್ಯ ಸರ್ಕಾರಗಳು ಪೆಟ್ರೋಲ್ ಮೇಲಿನ ವ್ಯಾಟ್ ಅಥವಾ ಸೆಸ್ ಏರಿಸಿದ್ದವು.
ಪೆಟ್ರೋಲಿಯಂ ಉತ್ಪನ್ನ ಜಿಎಸ್ ಟಿಗೆ ತರಬೇಕು
ತಮ್ಮ ನಷ್ಟವನ್ನು ಭರಿಸುವುದಕ್ಕಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಮುಂದಿನ ಕೆಲವು ದಿನಗಳ ಕಾಲ ಪೆಟ್ರೋಲ್- ಡೀಸೆಲ್ ದರದಲ್ಲಿ ಏರಿಕೆ ಮಾಡಲಿವೆ. ಇನ್ನು ಈಗಿನ ಪೆಟ್ರೋಲ್- ಡೀಸೆಲ್ ದರದಲ್ಲಿ ಅಬಕಾರಿ ಸುಂಕ, ವ್ಯಾಟ್, ಸೆಸ್ ಮುಂತಾದವು ಸೇರಿ ಶೇಕಡಾ 70ರಷ್ಟಾಗುತ್ತದೆ. "ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕ ಹಿಂಪಡೆಯಬೇಕು ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಅಡಿಯಲ್ಲಿ ತರಬೇಕು" ಎಂದು ಕಾಂಗ್ರೆಸ್ ಒತ್ತಾಯಿಸಿದೆ.


Click it and Unblock the Notifications