ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚು ದುಬಾರಿಯಾಗಿದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ಗುರುವಾರ ಲೀಟರ್ ಗೆ 60 ಪೈಸೆ ಬೆಲೆ ಏರಿಕೆ ಮಾಡಿವೆ. ಸತತವಾಗಿ 5 ದಿನಗಳ ಕಾಲ ತೈಲ ಬೆಲೆ ಏರಿಕೆ ಆದಂತಾಗಿದೆ. ಆ ಮೂಲಕ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ರು. 2.74 ಹಾಗೂ ಡೀಸೆಲ್ ರು. 2.83 ಹೆಚ್ಚಳ ಆಗಿದೆ.
ಭಾನುವಾರದಿಂದ ಈಚೆಗೆ ಐದು ದಿನಗಳ ಪೈಕಿ ಮೂರು ದಿನ ತಲಾ 60 ಪೈಸೆಯಂತೆ ಬೆಲೆ ಹೆಚ್ಚಳವಾಗಿದ್ದರೆ, ಮಂಗಳವಾರ ಹಾಗೂ ಬುಧವಾರದಂದು ಲೀಟರ್ ಗೆ 40 ಮತ್ತು 55 ಪೈಸೆ ಏರಿಕೆಯಾಗಿದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳ ಪ್ರಕಾರ, ಈ ಬೆಲೆ ಏರಿಕೆ ಇನ್ನೊಂದು ವಾರ ಅಥವಾ ಹತ್ತು ದಿನದ ತನಕ ಮುಂದುವರಿಯಲಿದೆ.
83 ದಿನಗಳ ನಂತರ ಮತ್ತೆ ಪರಿಷ್ಕರಣೆ
ಕೊರೊನಾ ಲಾಕ್ ಡೌನ್ ನಿಂದ ಜಾಗತಿಕ ಮಟ್ಟದಲ್ಲಿ ವಿನಾಯಿತಿ ಸಿಕ್ಕುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕತೆ ತೆರೆದುಕೊಳ್ಳುತ್ತಿದೆ. ಬೇಡಿಕೆ ಸಹ ಕುದುರುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಮೇಲ್ಮುಖದ ಪ್ರಯಾಣ ಮುಂದುವರಿಸಬಹುದು ಎಂದು ಹೇಳಲಾಗಿದೆ. ನಿತ್ಯವೂ ಪರಿಷ್ಕರಣೆ ಆಗುತ್ತಿದ್ದ ತೈಲ ದರವನ್ನು ಲಾಕ್ ಡೌನ್ ಅವಧಿಯಲ್ಲಿ ನಿಲ್ಲಿಸಲಾಗಿತ್ತು 83 ದಿನಗಳ ನಂತರ ಮತ್ತೆ ಪರಿಷ್ಕರಣೆ ಶುರುವಾಯಿತು.
ದೆಹಲಿಯಲ್ಲಿ ಲೀಟರ್ ಗೆ 60 ಪೈಸೆ ಏರಿಕೆ
ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 60 ಪೈಸೆ ಏರಿಕೆ ಆಗಿದ್ದು, ಗುರುವಾರದಂದು ಲೀಟರ್ ಗೆ 74 ಮತ್ತು 72.22 ಇದೆ. ದೇಶದ ಇತರ ಪ್ರಮುಖ ನಗರಗಳಲ್ಲಿ ತೆರಿಗೆ ಆಧಾರದಲ್ಲಿ ಬೆಲೆ ನಿಗದಿ ಆಗುತ್ತದೆ. ಐಎಎನ್ ಎಸ್ ಈ ಹಿಂದೆಯೇ ವರದಿ ಮಾಡಿತ್ತು: ಪೆಟ್ರೋಲ್- ಡೀಸೆಲ್ ಬೆಲೆ ಪರಿಷ್ಕರಣೆ ಜೂನ್ ನಿಂದ ಆರಂಭವಾಗುತ್ತದೆ. ಹಂತ ಹಂತವಾಗಿ 5 ರುಪಾಯಿ ತನಕ ಏರಿಕೆ ಆಗುತ್ತದೆ ಎಂದು ತಿಳಿಸಿತ್ತು.
ವೆಚ್ಚ ಹಾಗೂ ಮಾರಾಟ ದರದ ಮಧ್ಯೆ ವ್ಯತ್ಯಾಸ ಕಡಿಮೆ
ಈಗಾಗಲೇ ಪೆಟ್ರೋಲ್, ಡೀಸೆಲ್ ವೆಚ್ಚ ಹಾಗೂ ಮಾರಾಟ ಬೆಲೆಯ ಮಧ್ಯದ ವ್ಯತ್ಯಾಸ ಲೀಟರ್ ಗೆ 5-6ರ ಮಧ್ಯೆ ಬಂದು ನಿಂತಿದೆ. ಇದನ್ನು ಭರಿಸಬೇಕು ಅಂದರೆ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಇನ್ನೇನೂ ಏರಿಕೆ ಆಗದಿದ್ದಲ್ಲಿ ಮುಂದಿನ ಕೆಲವು ವಾರಗಳ ಕಾಲ ದಿನಕ್ಕೆ 40- 60 ಪೈಸೆಯಂತೆ ಏರಿಕೆ ಮಾಡಬಹುದು.


Click it and Unblock the Notifications