ಲಾಕ್ ಡೌನ್ ನಿರ್ಬಂಧ ತೆರವಿನ ಹಿನ್ನೆಲೆಯಲ್ಲಿ ತೈಲಕ್ಕೆ ಬೇಡಿಕೆ ಚೇತರಿಕೆ ಕಂಡ ಮೇಲೆ ಹಾಗೂ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 40 ಅಮೆರಿಕನ್ ಡಾಲರ್ ವ್ಯವಹರಿಸುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ರೀಟೇಲರ್ ಗಳು ಭಾನುವಾರದಂದು ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ ತಲಾ 60 ಪೈಸೆ ಏರಿಕೆ ಮಾಡಿವೆ. 80 ದಿನದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್- ಡೀಸೆಲ್ ಬೆಲೆ ಪರಿಷ್ಕರಣೆ ಆಗಿದೆ.
ಕೊನೆಯದಾಗಿ ಮಾರ್ಚ್ 16, 2020ರಲ್ಲಿ ತೈಲ ಬೆಲೆ ಪರಿಷ್ಕರಣೆ ಆಗಿತ್ತು. ಆ ಮಧ್ಯೆ ಆಯಾ ರಾಜ್ಯಗಳ ವ್ಯಾಟ್ ಅಥವಾ ಸೆಸ್ ಏರಿಕೆ ಆಗಿತ್ತು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಭವಿಸಿದ್ದ ನಗದು ಕೊರತೆಯನ್ನು ತುಂಬಿಕೊಳ್ಳುವ ಸಲುವಾಗಿ ತೈಲದ ಮೇಲೆ ತೆರಿಗೆಯನ್ನು ಹೆಚ್ಚಿಸಲಾಗಿತ್ತು.

ಪ್ರಮುಖ ನಗರಗಳಲ್ಲಿನ ಈಚಿನ ಪೆಟ್ರೋಲ್- ಡೀಸೆಲ್ ದರ ಹೀಗಿದೆ:
ನವದೆಹಲಿ: ಪೆಟ್ರೋಲ್ 71.86, ಡೀಸೆಲ್ 69.99
ಗುರ್ ಗಾಂವ್: ಪೆಟ್ರೋಲ್ 71.68, ಡೀಸೆಲ್ 63.65
ಮುಂಬೈ: ಪೆಟ್ರೋಲ್ 78.91, ಡೀಸೆಲ್ 68.79
ಚೆನ್ನೈ: ಪೆಟ್ರೋಲ್ 76.07, ಡೀಸೆಲ್ 68.74
ಹೈದರಾಬಾದ್: ಪೆಟ್ರೋಲ್ 74.64, ಡೀಸೆಲ್ 68.42
ಬೆಂಗಳೂರು: ಪೆಟ್ರೋಲ್ 74.18, ಡೀಸೆಲ್ 66.54
ಕಳೆದ ತಿಂಗಳು ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಗೆ 10 ರುಪಾಯಿ ಹಾಗೂ ಡೀಸೆಲ್ ಮೇಲೆ 13 ರುಪಾಯಿ ಏರಿಕೆ ಮಾಡಿತ್ತು. ಆ ಕಾರಣಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕಡಿಮೆಯಾದರೂ ಅದನ್ನು ಈ ತೆರಿಗೆಯೊಂದಿಗೆ ಹೊಂದಾಣಿಕೆ ಮಾಡಲಾಗಿತ್ತು. ಬೆಲೆಯಲ್ಲಿ ಇಳಿಕೆ ಆಗಿರಲಿಲ್ಲ.
ತೈಲ ಬೆಲೆಯು ನಿತ್ಯ ಪರಿಷ್ಕರಣೆ ಆಗುತ್ತದೆ. ಆ ಬೆಲೆ ಕಚ್ಚಾ ತೈಲ ಬೆಲೆ ಹಾಗೂ ಡಾಲರ್ ವಿರುದ್ಧದ ರುಪಾಯಿ ಮೌಲ್ಯ ಮತ್ತಿತರ ಅಂಶಗಳ ಮೇಲೆ ತೀರ್ಮಾನ ಆಗುತ್ತದೆ. ಭಾರತಕ್ಕೆ ಅಗತ್ಯ ಇರುವ ತೈಲ ಪ್ರಮಾಣದಲ್ಲಿ ಶೇಕಡಾ 80ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ.


Click it and Unblock the Notifications