ಭಾರತೀಯ ಗ್ರಾಹಕರಿಗೆ ತೈಲ ಬೆಲೆ ಇಳಿಕೆಯ ಲಾಭ ಸಿಗಬೇಕು ಅಂದರೆ ಇನ್ನೂ ಹತ್ತು ದಿನ ಕಾಯಬೇಕು. ಸೋಮವಾರದಂದು ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಕಚ್ಚಾ ತೈಲ ಬೆಲೆಯಲ್ಲಿ 30% ಇಳಿಕೆ ಆಗಿದ್ದರೂ ಪೆಟ್ರೋಲ್- ಡೀಸೆಲ್ ಬೆಲೆಯಲ್ಲೇನೂ ದೊಡ್ಡ ಮಟ್ಟದಲ್ಲಿ ಕಡಿಮೆ ಆಗಿಲ್ಲ.
ಅದಕ್ಕೆ ಕಾರಣ ಏನೆಂದರೆ, ನಿತ್ಯವೂ ಪೆಟ್ರೋಲ್- ಡೀಸೆಲ್ ಬೆಲೆ ಪರಿಷ್ಕರಣೆ ಆಗುವುದು ಹದಿನೈದು ದಿನಗಳ ಕಚ್ಚಾ ತೈಲ ಬೆಲೆಯ ಸರಾಸರಿಯನ್ನು ಗಮನಿಸಿ. ಆದ್ದರಿಂದ ಭಾರತದ ಗ್ರಾಹಕರು ಇನ್ನೂ ಹತ್ತು ದಿನ ಕಾಯಬೇಕಾಗುತ್ತದೆ. ಕಚ್ಚಾ ತೈಲ ದರ ಇದೇ ಮಟ್ಟದಲ್ಲಿ ಮುಂದುವರಿದರೆ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ ಆಗುತ್ತದೆ.
ಸರಿ, ಭಾರೀ ಇಳಿಕೆ ಅಂದರೆ ಎಷ್ಟು ಅಂತೀರಾ? ಲೀಟರ್ ಗೆ 5ರಿಂದ 6 ರುಪಾಯಿಯಷ್ಟು ಬೆಲೆ ಇಳಿಕೆ ಆಗಬಹುದು. ಮುಂದಿನ ವಾರದಲ್ಲಿ ಹೀಗಾಗಬಹುದು ಎಂಬ ನಿರೀಕ್ಷೆ ಇದೆ. ಬುಧವಾರದಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 70.29 ರು. ಹಾಗೂ ಡೀಸೆಲ್ 63.01 ರುಪಾಯಿ ಇದೆ.

ಆಸಕ್ತಿಕರ ಸಂಗತಿ ಏನೆಂದರೆ, ಭಾರತದಲ್ಲಿ ಕಚ್ಚಾ ತೈಲ ದರ ಕೂಡ ಪೆಟ್ರೋಲ್- ಡೀಸೆಲ್ ದರ ನಿಗದಿಗೆ ಅನುಸರಿಸಲಾಗುತ್ತದೆ. ಮಂಗಳವಾರಂದು ಬ್ಯಾರಲ್ ಕಚ್ಚಾ ತೈಲ 45 ಅಮೆರಿಕನ್ ಡಾಲರ್ ಇತ್ತು. ಆದ್ದರಿಂದ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಬೇಕು ಅಂದರೆ, ಇದನ್ನೂ ಗಮನಿಸಬೇಕು.
ಒಂದು ವೇಳೆ ಭಾರತದ ರುಪಾಯಿ ಮೌಲ್ಯ ಡಾಲರ್ ವಿರುದ್ಧ ಕುಸಿದರೆ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದಕ್ಕೆ ಹೆಚ್ಚು ಪಾವತಿ ಮಾಡಬೇಕಾಗುತ್ತದೆ. ಅಂಥ ಸನ್ನಿವೇಶದಲ್ಲಿ ದರ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದು ಕಷ್ಟ ಎನ್ನುತ್ತಾರೆ ತಜ್ಞರು.


Click it and Unblock the Notifications