ಬೆಂಗಳೂರು, ಫೆಬ್ರವರಿ 28: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸತತ ಏರಿಕೆ ನಂತರ ಭಾನುವಾರದಂದು ಸ್ಥಿರತೆ ಪಡೆದುಕೊಂಡಿದೆ. ಕಳೆದ ಕೆಲವು ದಿನಗಳಲ್ಲಿ ಸರಿ ಸುಮಾರು 23-25 ಪೈಸೆಯಂತೆ ಪೆಟ್ರೋಲ್ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 24-26 ಪೈಸೆ ಪ್ರತಿ ಲೀಟರ್ ನಂತೆ ಏರಿಕೆ ಕಂಡಿತ್ತು. ಒಟ್ಟಾರೆ ಈ ತಿಂಗಳಲ್ಲಿ ಪೆಟ್ರೋಲ್ ಒಟ್ಟು 4.87 ಪ್ರತಿ ಲೀಟರ್ ಹಾಗೂ ಡೀಸೆಲ್ 4.99 ಪ್ರತಿ ಲೀಟರ್ ನಷ್ಟು ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 81.47 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.
ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತಾ, ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಸತತ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ. ಆದರೆ ಇತರೆ ನಗರಗಳಲ್ಲಿ ಆಯಾ ರಾಜ್ಯದ ವ್ಯಾಟ್, ಸೆಸ್ ಸೇರಿ ಬೆಲೆ ಏರಿಕೆ ಬಿಸಿ ತಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸರಾಸರಿ 63 ರಿಂದ 65 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ.
ಇಂಧನ ದರ ಏರಿಕೆಗೆ ನಾನಾ ಕಾರಣ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಪ್ರಮುಖ ನಗರಗಳಲ್ಲಿನ ಇಂಧನ ದರ
ಫೆ.28ರಂದು ಪ್ರಮುಖ ನಗರಗಳಲ್ಲಿನ ಇಂಧನ ದರ
ನಗರ-ಪೆಟ್ರೋಲ್-ಡೀಸೆಲ್ (ದರ ರುಪಾಯಿಗಳಲ್ಲಿ)
ದೆಹಲಿ- 91. 17 -81.47
ಮುಂಬೈ- 97.57-88.60
ಚೆನ್ನೈ-93.11-86.45
ಕೋಲ್ಕತಾ-91.35-84.35
ಬೆಂಗಳೂರು-94.29-86.42
ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಸತತವಾಗಿ 100 ರು ಗಡಿ
ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಸತತವಾಗಿ 100 ರು ಗಡಿ ದಾಖಲೆ ಬರೆದಿತ್ತು. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಕಳೆದ ವಾರ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿತ್ತು. ಈಗಲೂ ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 101.59 ಇದ್ದರೆ, ಡೀಸೆಲ್ ದರ ಲೀಟರ್‌ಗೆ 93.61 ರೂ ಇದೆ. ಹಾಗೆಯೇ ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್ ದರ 101.34 ರೂ ಇದ್ದರೆ, ಡೀಸೆಲ್ 91.81 ರೂ.ಗೆ ಮಾರಾಟವಾಗುತ್ತಿದೆ.
ಕೆಲ ರಾಜ್ಯಗಳಲ್ಲಿ ಇಂಧನ ಮೇಲಿನ ಸುಂಕ ಇಳಿಕೆ ಮಾಡಲಾಗಿದೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಅಸ್ಸಾಂ , ಮೇಘಾಲಯ ಹಾಗೂ ನಾಗಾಲ್ಯಾಂಡ್ ನಲ್ಲಿ ವ್ಯಾಟ್, ಸೆಸ್ ಇಳಿಕೆ ಮಾಡಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿದೆ.


Click it and Unblock the Notifications